ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ| ಜೈಲಿನಲ್ಲಿದ್ದ ಮಗನ ವಿಚಾರಕ್ಕೆ ಜಗಳ: ಪತ್ನಿ ಕೊಂದ ಪತಿ

Published 23 ಜೂನ್ 2024, 7:31 IST
Last Updated 23 ಜೂನ್ 2024, 7:31 IST
ಅಕ್ಷರ ಗಾತ್ರ

ಹಾವೇರಿ: ಹಾನಗಲ್ ತಾಲ್ಲೂಕಿನ ಶಿವಪುರದಲ್ಲಿ ಸಾವಿತ್ರಿ (54) ಎಂಬುವವರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಪತಿ ಶೇಖಪ್ಪ (61) ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಶಿವಪುರದ ಸಾವಿತ್ರಿ ಹಾಗೂ ಶೇಖಪ್ಪ ಅವರ ನಡುವೆ ಶನಿವಾರ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಹಾನಗಲ್ ಠಾಣೆ ಪೊಲೀಸರು ಹೇಳಿದರು.

‘ಸಾವಿತ್ರಿ– ಶೇಖಪ್ಪ ದಂಪತಿಗೆ ಮಗನಿದ್ದಾನೆ. ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದ ಆರೋಪದಡಿ ಮಗನ ಮೇಲೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಮಗ ಜೈಲಿನಲ್ಲಿದ್ದಾನೆ.’

‘ಮಗನನ್ನು ಜೈಲಿನಿಂದ ಬಿಡಿಸಿಕೊಂಡು ಬರುವ ವಿಚಾರಕ್ಕೆ ದಂಪತಿ ನಡುವೆ ಶನಿವಾರ ಜಗಳ ಶುರುವಾಗಿತ್ತು. ಇದೇ ಸಂದರ್ಭದಲ್ಲಿಯೇ ಆರೋಪಿ ಶೇಖಪ್ಪ, ಬಡಿಗೆಯಿಂದ ಸಾವಿತ್ರಿ ಅವರಿಗೆ ಹೊಡೆದಿದ್ದ. ತೀವ್ರ ರಕ್ತಸ್ರಾವದಿಂದಾಗಿ ಸಾವಿತ್ರಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಗ್ರಾಮಸ್ಥರು ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು, ಸಾವಿತ್ರಿ ಮೃತಪಟ್ಟಿದ್ದಾಗಿ ತಿಳಿಸಿದರು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಗ್ರಾಮಸ್ಥರು ಹಾಗೂ ಸಂಬಂಧಿಕರು ನೀಡಿದ್ದ ಹೇಳಿಕೆ ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತ್ವರಿತವಾಗಿ ತನಿಖೆ ಮುಂದುವರಿಸಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT