ಸೋಮವಾರ, ಜನವರಿ 17, 2022
19 °C
ಹಾವೇರಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀಲರಗಿ ಅಭಿಮತ

ಶಿಲ್ಪಕಲೆಗೆ ಜಕಣಾಚಾರಿ ಕೊಡುಗೆ ಅನನ್ಯ: ಸಂಜೀವಕುಮಾರ ನೀಲರಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಭಾರತೀಯ ಶಿಲ್ಪಕಲೆಗೆ ಜಕಣಾಚಾರಿ ಅವರ ಕೊಡುಗೆ ಅನನ್ಯ. ಕನ್ನಡ ಶಿಲ್ಪಕಲೆಯ ಪರಂಪರೆಯನ್ನು ಶ್ರೀಮಂತಗೊಳಿಸಿದ ಕೀರ್ತಿ ಅಮರಶಿಲ್ಪಿ ಜಕಣಾಚಾರಿ ಅವರಿಗೆ ಸಲ್ಲುತ್ತದೆ’ ಎಂದು ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.

ನಗರದ ಡಿ.ದೇವರಾಜ ಅರಸು ಭವನದಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಉದ್ಘಾಟಿಸಲಾಯಿತು.
ಭಾರತೀಯ ಶಿಲ್ಪ ಪರಂಪರೆಗೆ ವಿಶೇಷವಾಗಿ ಕನ್ನಡ ನಾಡಿನ ಶಿಲ್ಪಕಲೆಗೆ ವಿಶೇಷ ಕೊಡುಗೆ ನೀಡಿದ ಜಕಣಾಚಾರಿ ಅವರನ್ನು ಎಲ್ಲ ಸಮುದಾಯಗಳು ಆದರದಿಂದ ಕಾಣುತ್ತವೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಮಾತನಾಡಿ, ‘ಸಾಹಿತ್ಯ, ಸಂಗೀತ, ನಾಟ್ಯ, ವಾಸ್ತುಶಿಲ್ಪ ಇತ್ಯಾದಿ ಒಳಗೊಂಡಿರುವುದೇ ಭಾರತೀಯ ಸಂಸ್ಕೃತಿಯ ಪ್ರತೀಕ. ವಾಸ್ತುಶಿಲ್ಪ ಕಲೆಯನ್ನು ಅಜರಾಮರಗೊಳಿಸಿದ ಕೀರ್ತಿ ಜಕಣಾಚಾರಿ ಅವರಿಗೆ ಸಲ್ಲುತ್ತದೆ. ಅಮರಶಿಲ್ಪಿ ಜಕಣಾಚಾರಿ ಅವರನ್ನು ಸ್ಮರಿಸುವುದು, ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ’ ಎಂದರು.

ಜಿಲ್ಲಾ ವಿಶ್ವಕರ್ಮ ಸಮುದಾಯದ ಅಧ್ಯಕ್ಷ ಗಣೇಶಪ್ಪ ಕಮ್ಮಾರ ಮಾತನಾಡಿ, ದೇವಾಲಯಗಳಲ್ಲಿ ದೇವರ ಮೂರ್ತಿಗಳನ್ನು ಕೆತ್ತುವ ಮೂಲಕ ದೇವರು ಇದ್ದಾನೆ ಎಂದು ತೋರಿಸಿಕೊಟ್ಟವರು ಜಕಣಾಚಾರಿ. ನಮ್ಮ ಸಮುದಾಯದ ಕುಲ ಕಸುಬುಗಳು ಇಂದು ನಶಿಸುತ್ತಿವೆ. ಸರ್ಕಾರದ ವತಿಯಿಂದ ವಿವಿಧ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವುಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದರು.

ಕನ್ನಡ ಉಪನ್ಯಾಸಕ ಚಾಮರಾಜ ಕಮ್ಮಾರ ಮಾತನಾಡಿ, ಜಕಣಾಚಾರಿ ಶ್ರೇಷ್ಠ ಶಿಲ್ಪಕಲಾ ರಚನೆಕಾರರಿದ್ದು, ಅವರು ಕೆತ್ತಿದ ಬೇಲೂರು, ಹಳೆಬೀಡಿನ ದೇವಾಲಯಗಳು ದೇಶ-ವಿದೇಶಗಳಲ್ಲಿ ಸುಪ್ರಸಿದ್ಧವಾಗಿದೆ ಎಂದರು.

ಹಾವೇರಿ ನಗರದಲ್ಲಿ ಅಮರಶಿಲ್ಪಿ ಜಕಣಾಚಾರಿ ವೃತ್ತ ಸ್ಥಾಪಿಸುವ ಹಾಗೂ ವಿಶ್ವಕರ್ಮ ಸಮುದಾಯದವರಿಗೆ ನಿವೇಶನ ಒದಗಿಸುವಂತೆ ನಗರಸಭೆ ಅಧ್ಯಕ್ಷರಿಗೆ ಮುಖಂಡರು ಮನವಿ ಸಲ್ಲಿಸಿದರು.

ಹಿರೇಕೆರೂರು ತಾಲ್ಲೂಕಿನ ನೂಲಗೇರಿ ಗ್ರಾಮದ ಹಿರಿಯ ಶಿಲ್ಪಿ ಮೌನೇಶಾಚಾರ್ಯ ಮಹದೇವಪ್ಪಾಚಾರ್ಯ ಮಾಯಾಚಾರ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ನಾಮ ನಿರ್ದೇಶಿತ ಸದಸ್ಯ ಮಹೇಂದ್ರ ಬಡಿಗೇರ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.