ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ನಿರೀಕ್ಷೆ: ಬ್ಯಾಡಗಿ ಮೆಣಸಿನಕಾಯಿ ಮೂಲ ತಳಿ ಸಂರಕ್ಷಿಸಿ

ಹದಗೆಟ್ಟ ರಸ್ತೆಗಳ ದುರಸ್ತಿ ಹಾಗೂ ಬ್ಯಾಡಗಿ ಮುಖ್ಯರಸ್ತೆ ವಿಸ್ತರಣೆಗೆ ಜನರ ಆಗ್ರಹ
Last Updated 21 ಏಪ್ರಿಲ್ 2023, 0:15 IST
ಅಕ್ಷರ ಗಾತ್ರ

ಬ್ಯಾಡಗಿ: ವಿಶ್ವದಲ್ಲಿಯೇ ಒಣ ಮೆಣಸಿನಕಾಯಿ ವ್ಯಾಪಾರಕ್ಕೆ ಸೈ ಎನಿಸಿಕೊಂಡಿರುವ ಬ್ಯಾಡಗಿ ಅತ್ಯಂತ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಅಂಟಿಕೊಂಡಿದೆ.

ಬ್ಯಾಡಗಿ ನಗರ ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 5 ಕಿ.ಮೀ ದೂರದಲ್ಲಿದ್ದರೂ, ತೀರಾ ಹದಗೆಟ್ಟ ರಸ್ತೆ ಸಂಪರ್ಕ ವ್ಯವಸ್ಥೆಯ ಅಧೋಗತಿಗೆ ಜನರು ಹಿಡಿಶಾಪ ಹಾಕುವಂತಾಗಿದೆ.

ಸಮರ್ಪಕ ಬಸ್‌ಗಳ ಸಂಚಾರ, ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆ ಆಗಬೇಕಿದೆ. ಮೆಣಸಿನಕಾಯಿ ಹೊತ್ತ ಲಾರಿಗಳು ನೇರವಾಗಿ ವಿಶ್ವ ಮಾರುಕಟ್ಟೆ ಪ್ರವೇಶಿಸುವಂತಾಗಲು ಬ್ಯಾಡಗಿ– ಮೋಟೆಬೆನ್ನೂರ ರಸ್ತೆಗೆ ಇನ್ನೊಂದು ಪರ್ಯಾಯ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂಬುದು ಸ್ಥಳೀಯರ ಆಗ್ರಹ.

ಮುಖ್ಯ ರಸ್ತೆ ವಿಸ್ತರಣೆಗೆ 12 ವರ್ಷಗಳಿಂದ ನಡೆಯುತ್ತಿರುವ ಹೋರಾಟ ಕೊನೆಯಾಗಬೇಕು. ಕಡಿಮೆ ಖಾರದ ಅಂಶ, ವಿಶಿಷ್ಟ ರುಚಿ ಹಾಗೂ ಕಡುಕೆಂಪು ಬಣ್ಣದ ‘ಬ್ಯಾಡಗಿ ಮೆಣಸಿನಕಾಯಿ ಮೂಲ ತಳಿ’ ನಶಿಸುವ ಹಂತ ತಲುಪಿದೆ. ಅದನ್ನು ಉಳಿಸುವ ಕೆಲಸವಾಗಬೇಕಾಗಿದೆ. ಈ ತಳಿ ಉಳಿಸುವುದರ ಜೊತೆಗೆ ರೈತರ ಹಿತ ಕಾಪಾಡಬೇಕು.

ಈ ನಿಟ್ಟಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಂಶೋಧನೆ ನಡೆಸುವ ಅಗತ್ಯವಿದೆ. ಮೆಣಸಿನಕಾಯಿ ಗುಣಮಟ್ಟ ಪರೀಕ್ಷಿಸುವ ಪ್ರಯೋಗಾಲಯ ಹಾಗೂ ಸಾವಿರಾರು ಜನರಿಗೆ ಉದ್ಯೋಗ, ಇಲ್ಲಿಯ ಮೆಣಸಿನಕಾಯಿ ಮಾರುಕಟ್ಟೆ ಇನ್ನಷ್ಟು ವಿಸ್ತರಣೆಯಾಗಬೇಕು ಎಂಬುದು ಕೃಷಿಕ ಸಮಾಜದ ಅಧ್ಯಕ್ಷ ಗಂಗಣ್ಣ ಎಲಿ ಅವರ ಒತ್ತಾಯ.

ಸೂರು ಇಲ್ಲದ ಬಡಜನರಿಗೆ ನಿವೇಶನ ಹಂಚಿಕೆ ಆಗಬೇಕಿದೆ. ಜಿಲ್ಲೆಯ ತುಂಗಭದ್ರಾ, ವರದಾ ನದಿ ತೀರದಿಂದ ತಾಲ್ಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸುವಿಕೆ, ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆ ಪೂರ್ಣಗೊಂಡಿದ್ದರೂ, ಕಾಲುವೆಗಳು ಸಮರ್ಪಕವಾಗಿಲ್ಲ. ಇದರಿಂದ ಹಾನಿಗೊಳಗಾದ ರೈತರಿಗೆ ಪರಿಹಾರದ ಜೊತೆಗೆ ಕಾಲುವೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂಬುದು ಮಾಜಿ ಸೈನಿಕ ಎಂ.ಡಿ.ಚಿಕ್ಕಣ್ಣನವರ ಒತ್ತಾಯ.

‘ಬಸನಕಟ್ಟಿ ಕೆರೆಗೆ ನೀರು ತುಂಬಿಸಿ’

ಐದು ವರ್ಷಗಳ ಹಿಂದೆ ಸಮೀಪದ ಬಸನಕಟ್ಟಿ ಕೆರೆಯನ್ನು ₹1ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾರ್ಯ ಅಪೂರ್ಣಗೊಂಡಿದೆ. ಅಂದಿನ ಪುರಸಭೆ ಅಧ್ಯಕ್ಷರ ಅವಧಿಯಲ್ಲಿ ಬಸನಕಟ್ಟಿ ಕೆರೆಯ ಸುತ್ತಲೂ ಗೋಡೆ ಮಾತ್ರ ನಿರ್ಮಿಸಲಾಗಿದ್ದು, ನೀರು ಸಂಗ್ರಹಿಸುವ ಕೆಲಸವಾಗಿಲ್ಲ. ಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಂಡಿರುವ ಆಣೂರು, ಬುಡಪನಹಳ್ಳಿ ಕೆರೆ ತುಂಬಿಸುವ ಯೋಜನೆಗೆ ಶೀಘ್ರ ಚಾಲನೆ ಕೊಡಬೇಕು. ಕೆರೆಗಳ ಹೂಳೆತ್ತುವ ಕಾರ್ಯವಾಗಬೇಕು ಎಂದು ರೈತ ಮುಖಂಡ ರುದ್ರಗೌಡ ಕಾಡನಗೌಡ್ರ ಆಗ್ರಹಿಸುತ್ತಾರೆ.

***

ಕಳಪೆ ಕಾಮಗಾರಿಯಿಂದಾಗಿ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿವೆ. ದೂರದೃಷ್ಠಿ ಹೊಂದಿರುವ ಯೋಜನೆಗಳನ್ನು ರೂಪಿಸಬೇಕಿದೆ
– ರಾಜಶೇಖರ ಹೊಸಳ್ಳಿ, ಸಾಮಾಜಿಕ ಕಾರ್ಯಕರ್ತ

24X7 ಕುಡಿಯುವ ನೀರಿನ ಯೋಜನೆ ಅನುಷ್ಠಾನವಾಗಬೇಕು. ನಗರದ ಮಧ್ಯದಲ್ಲಿ ಹಾದು ಹೋಗುವ ಬೃಹತ್ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಬೇಕು
– ರಾಮಣ್ಣ ಉಕ್ಕುಂದ, ವರ್ತಕ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT