ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಳವಳ್ಳಿ: ಆಜಾದ್‌ ನಗರದಲ್ಲಿ ಸಾಂಕ್ರಾಮಿಕ ರೋಗದ ಭೀತಿ, ಸಮಸ್ಯೆಗಳ ಆಗರ

ಮೂಲಸೌಕರ್ಯ ಕಲ್ಪಿಸಲು ನಿವಾಸಿಗಳ ಒತ್ತಾಯ
Last Updated 19 ಜುಲೈ 2022, 19:30 IST
ಅಕ್ಷರ ಗಾತ್ರ

ತಿಳವಳ್ಳಿ: ಗ್ರಾಮದ 4 ಮತ್ತು 5ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಆಜಾದ್ ನಗರದ ರಸ್ತೆ ಕೆಸರುಗದ್ದೆಯಂತಾಗಿದ್ದು, ಯಾರ ಮನವಿಗೂ ಕವಡೆ ಕಿಮ್ಮತ್ತಿನ ಬೆಲೆಯೂ ಸಿಗದ ಬಗ್ಗೆ ಕಾಲೊನಿ ನಿವಾಸಿಗಳು ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.

ಹಲವು ದಶಕಗಳಿಂದ ಮಣ್ಣಿನ ರಸ್ತೆಯಲ್ಲಿ ಸಂಚಾರ ನಡೆಸುವ ದೌರ್ಭಾಗ್ಯ ಇಲ್ಲಿನ ನಿವಾಸಿಗಳಾಗಿದ್ದು, ಡಾಂಬರು ಹಾಗೂ ಸಿಸಿ ರಸ್ತೆಯ ಕಾಮಗಾರಿಯ ಕನಸು ಕನಸಾಗಿಯೇ ಉಳಿದಿದೆ.

‘ಈ ನಗರದಲ್ಲಿ ಮುಸ್ಲಿಂ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಇತರೆ ವರ್ಗದ ನೂರಾರು ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದಾರೆ. 10 ವರ್ಷಗಳಿಂದ ಇಲ್ಲಿಯವರೆಗೂ ಈ ಪ್ರದೇಶ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಫೈರೋಜ್‌ ಮೂಡಿ.

ಹದಗೆಟ್ಟ ರಸ್ತೆಗಳು:ಅಲ್ಪಸಂಖ್ಯಾತರ ಅನುದಾನದಲ್ಲಿ ಈಚೆಗೆ 100 ಮೀಟರ್ ಸಿಸಿ ರಸ್ತೆ ನಿರ್ಮಾಣವಾಗಿದೆ. ಆದರೆ ಉಳಿದ ರಸ್ತೆಗಳು ಮಣ್ಣಿನಿಂದ ಕೂಡಿದ್ದು, ಮಳೆಗಾಲದಲ್ಲಿ ಮಳೆಯ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಚರಂಡಿಯಾಗಿ ಮಾರ್ಪಟ್ಟಿದೆ. ರಸ್ತೆಯ ತುಂಬೆಲ್ಲ ತಗ್ಗು ದಿನ್ನೆಗಳು ನಿರ್ಮಾಣವಾಗಿವೆ. ತ್ಯಾಜ್ಯ ನೀರು ಸಂಗ್ರಹಗೊಂಡಿದೆ. ಮಕ್ಕಳು ವೃದ್ಧರು ಸಂಚರಿಸುವ ವೇಳೆ ಬಿದ್ದು, ಗಾಯಗಳಾದ ಘಟನೆ ನಡೆದಿವೆ.

ಚರಂಡಿ ದುರಸ್ತಿ ಪಡಿಸಿ:ರಸ್ತೆಯ ಎರಡು ಬದಿಯಲ್ಲಿ ಇರುವ ಚರಂಡಿಗಳು ದುಸ್ಥಿತಿಯಲ್ಲಿದ್ದು, ಚರಂಡಿ ನೀರು ಸರಾಗವಾಗಿ ಹರಿಯದೇ ಇರುವುದರಿಂದ ರಸ್ತೆಯ ಮೇಲೆ ಹಾಗೂ ನಗರದ ಮನೆಗಳ ಸುತ್ತಲೂ ನೀರು ನಿಲ್ಲುತ್ತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ.

‘ಗ್ರಾಮ ಪಂಚಾಯ್ತಿ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸದೇ ಇರುವುದರಿಂದ ಜನರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಇದೇ ಕಾಲೊನಿಯಲ್ಲಿ ಪುರಾಣ ಪ್ರಸಿದ್ಧ ಶಿವನ ದೇವಾಲಯವಿದ್ದು, ದೇವಾಲಯಕ್ಕೆ ತೆರಳುವ ರಸ್ತೆ ಚರಂಡಿ ಮತ್ತು ರಸ್ತೆ ಒಂದೇ ಆಗಿದೆ’ ಎಂದು ಸ್ಥಳೀಯ ನಿವಾಸಿ ಚೌಡಪ್ಪ ಶಿರೀಹಳ್ಳಿ ಆರೋಪಿಸಿದ್ದಾರೆ.

ತಗ್ಗು ಗುಂಡಿಗಳು:ನಾ.ಸು.ಹರ್ಡೀಕರ ವೃತ್ತದಿಂದ ಹಾವೇರಿ ಹಾಗೂ ಬ್ಯಾಡಗಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಮಳೆಗಾಲದಲ್ಲಿ ಈ ರಸ್ತೆಯ ಮೇಲೆ ಸಂಚರಿಸುವುದೆ ದೊಡ್ಡ ಸಮಸ್ಯೆಯಾಗಿದೆ. ರಸ್ತೆಯ ಉದ್ದಕ್ಕೂ ಆಳೆತ್ತರದ ತಗ್ಗು ಗುಂಡಿಗಳು ಬಿದ್ದಿರುವುದರಿಂದ ವಾಹನಗಳಿಗೆ ಮತ್ತು ಶಾಲಾ ಮಕ್ಕಳಿಗೆ ತುಂಬಾ ತೊಂದರೆಯುಂಟಾಗಿದೆ.

ಲೋಕೋಪಯೋಗಿ ಇಲಾಖೆಯವರು ಮಳೆಗಾಲದಲ್ಲಿ ರಸ್ತೆಯ ಗುಂಡಿಗಳಿಗೆ ಕಲ್ಲು– ಮಣ್ಣು ಹಾಕಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಹೊರತು ಯಾವುದೇ ರೀತಿಯ ರಸ್ತೆ ನಿರ್ಮಾಣ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

***

ಆಜಾದ್‌ ನಗರದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡದಿದ್ದರೆ ಇಲ್ಲಿಯ ನಿವಾಸಿಗಳಿಂದ ಉಗ್ರ ಹೋರಾಟ ಮಾಡಲಾಗುವುದು
– ಫಯಾಜ್‌ ಅಹಮದ್‌ ಮುಲ್ಲಾ, ಸ್ಥಳೀಯ ನಿವಾಸಿ

***

ಆಜಾದ ನಗರದ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗಳನ್ನು 15ನೇ ಹಣಕಾಸು ಮತ್ತು ನರೇಗಾ ಯೋಜನೆಯಡಿ ಶೀಘ್ರ ಕೈಗೆತ್ತಿಕೊಳ್ಳಲಾಗುವುದು
-ವಿಶ್ವನಾಥ ಮುದಿಗೌಡ್ರ. ಪಿಡಿಒ, ತಿಳವಳ್ಳಿ ಗ್ರಾಮ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT