ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆ ಕೊರತೆ: ಪಾಳುಬಿದ್ದ ಹಿರೇಕೆರೂರು ಕ್ರೀಡಾಂಗಣ

ಅಥ್ಲೆಟಿಕ್‌ ಟ್ರ್ಯಾಕ್ ನಿರ್ಮಾಣಕ್ಕೆ ಬೇಡಿಕೆ: ಕೋಚ್‌ಗಳ ಕೊರತೆಯಿಂದ ಸೊರಗಿದ ಕ್ರೀಡೆ
Last Updated 26 ಮೇ 2022, 6:51 IST
ಅಕ್ಷರ ಗಾತ್ರ

ಹಿರೇಕೆರೂರು (ಹಂಸಭಾವಿ): ಕ್ರೀಡೆಯಲ್ಲಿ ಆಸಕ್ತಿ ಹಾಗೂ ಸಾಧನೆ ಮಾಡುವ ಹುಮ್ಮಸ್ಸಿನಲ್ಲಿರುವ ಹಿರೇಕೆರೂರು ಹಾಗೂ ಸುತ್ತಲಿನ ಗ್ರಾಮಗಳ ಯುವ ಪ್ರತಿಭೆಗಳಿಗೆ ತಾಲ್ಲೂಕು ಕ್ರೀಡಾಂಗಣದಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಸಾಧನೆಗೆ ಅಡ್ಡಿಯಾಗುತ್ತಿದೆ.

ತಾಲ್ಲೂಕು ಕ್ರೀಡಾಂಗಣ 8 ಎಕರೆ ವಿಸ್ತೀರ್ಣದ ವಿಶಾಲ ಜಾಗವನ್ನು ಹೊಂದಿದ್ದು, ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾ ಸೌಕರ್ಯವನ್ನು ಹೊಂದಿದೆ. ಆದರೆ, ಹೊರ ಕ್ರೀಡಾಂಗಣ ಅಥ್ಲೆಟಿಕ್ ಟ್ರ್ಯಾಕ್ ಹಾಗೂ ಸಿಂಥೆಟಿಕ್ ಸೌಕರ್ಯ ಹೊಂದಿಲ್ಲದೇ ಇರುವುದರಿಂದ ಕ್ರೀಡಾಭ್ಯಾಸಕ್ಕೆ ಕ್ರೀಡಾಪಟುಗಳಿಗೆ ಅನಾನುಕೂಲವಾಗಿದೆ. ಕ್ರೀಡಾ ಮೈದಾನ ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ.

ಕ್ರೀಡಾಂಗಣದ ತುಂಬ ಹುಲ್ಲು ಬೆಳೆದಿದೆ. ಇಲ್ಲಿ ವಾಲಿಬಾಲ್‌, ಫುಟ್‌ಬಾಲ್‌ ಸೇರಿದಂತೆ ಯಾವುದೇ ಕ್ರೀಡಾ ಅಂಕಣಗಳು ಇಲ್ಲ. ಸುತ್ತಲೂ ಗಿಡ-ಗಂಟೆ ಬೆಳೆದು ವಾಯುವಿಹಾರಕ್ಕೆ ಬರುವವರಿಗೆ ತೊಡಕಾಗಿದೆ.

ಸಿಬ್ಬಂದಿ ಕೊರತೆ:

ತಾಲ್ಲೂಕು ಕ್ರೀಡಾಂಗಣದಲ್ಲಿ ಒಬ್ಬರು ಕಾವಲುಗಾರರಿದ್ದು, ಎಲ್ಲ ಕೆಲಸಗಳನ್ನು ಅವರೊಬ್ಬರೇ ನಿರ್ವಹಣೆ ಮಾಡಬೇಕಿದೆ. ಸಿಬ್ಬಂದಿಗಳೇ ಇಲ್ಲದ ಕಾರಣ ಕ್ರೀಡಾಂಗಣ ನಿರ್ವಹಣೆ ಇಲಾಖೆಗೆ ದೊಡ್ಡ ಸವಾಲಾಗಿದೆ. ತಾಲ್ಲೂಕು ಕ್ರೀಡಾಂಗಣ ಉತ್ತಮವಾಗಿ ನಿರ್ವಹಿಸಲು ಹೊರಗುತ್ತಿಗೆ ಸಿಬ್ಬಂದಿ ತೆಗೆದುಕೊಳ್ಳಲು ಕ್ರೀಡಾ ಇಲಾಖೆ ಆಯುಕ್ತರು ಇದುವರೆಗೆ ಆದೇಶವನ್ನೇ ನೀಡಿಲ್ಲ.

ನಿರುಪಯುಕ್ತವಾದ ಶೌಚಾಲಯ:

ಒಳಾಂಗಣ ಕ್ರೀಡಾಂಗಣವು ಸುಸಜ್ಜಿತವಾದ ಕಟ್ಟಡ ಹೊಂದಿದ್ದು, ಇಲ್ಲಿ ಬ್ಯಾಡ್ಮಿಂಟನ್ ಕ್ರೀಡಾಪಟುಗಳು ಮಾತ್ರ ತಾಲೀಮು ನಡೆಸುತ್ತಾರೆ. ಶೌಚಾಲಯಗಳಿದ್ದರೂ ನೀರಿನ ಅಭಾವದಿಂದ ನಿರುಪಯುಕ್ತವಾಗಿವೆ. ಕ್ರೀಡಾಪಟುಗಳು ಶೌಚಕ್ಕೆ ಮನೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಅಲ್ಲದೇ ಕುಡಿಯುವ ನೀರನ್ನೂ ಕ್ರೀಡಾಪಟುಗಳೇ ತರಬೇಕಾಗಿದೆ.

ಕಾಂಪೌಂಡ್‌ ಕೊರತೆ:

‘ಕ್ರೀಡಾಂಗಣದ ಸುತ್ತಲೂ ತಡೆಗೋಡೆ ಇರದ ಕಾರಣ ಹಗಲು ಹೊತ್ತಿನಲ್ಲೇ ಮದ್ಯ ವ್ಯಸನಿಗಳು ಲಗ್ಗೆ ಇಟ್ಟು ಎಲ್ಲೆಂದರಲ್ಲಿ ಕುಳಿತು ಮದ್ಯದ ಬಾಟಲಿ ಎಸೆದು ಗಲೀಜು ಮಾಡುತ್ತಾರೆ. ಅವರನ್ನು ಕೇಳುವ ಧೈರ್ಯ ಯಾರಿಗೂ ಇಲ್ಲದಂತಾಗಿದೆ. ಇಲ್ಲಿರುವ ಕಟ್ಟಡದ ಕಿಟಕಿ ಗಾಜು, ಒಡೆದು ಹಾಕಿದ್ದಾರೆ’ ಎಂದು ಕ್ರೀಡಾಪಟು ವಿನಯ ಬಾಳಿಕಾಯಿ ಒತ್ತಾಯಿಸಿದರು.

ಇಲ್ಲಿ ಐದು ವರ್ಷಗಳ ಹಿಂದೆ ಸುಮಾರು 60ರಿಂದ 70 ಕ್ರೀಡಾಪಟುಗಳು ತಾಲೀಮು ನಡೆಸುತ್ತಿದ್ದರು. ಆದರೆ, ಸೌಲಭ್ಯಗಳ ಕೊರತೆಯಿಂದ ಬೇಸತ್ತು ಈಗ ಕೇವಲ 30 ಜನ ಬರುತ್ತಾರೆ. ಐದು ವರ್ಷಗಳ ಹಿಂದೆ ಜಿಮ್ ತರಬೇತಿಗಾಗಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಅದನ್ನು ಇನ್ನೂ ಬಳಕೆಗೆ ನೀಡುತ್ತಿಲ್ಲ. ಕ್ರೀಡಾಪಟುಗಳು ಖಾಸಗಿ ಜಿಮ್‌ನಲ್ಲಿ ಹೆಚ್ಚಿನ ಹಣ ನೀಡಿ ತಾಲೀಮು ನಡೆಸುವುದು ಕಷ್ಟವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಸರಿಪಡಿಸಬೇಕು ಎಂದು ಬ್ಯಾಡ್ಮಿಂಟನ್ ಕ್ರೀಡಾಪಟು ಸೂರಜ್ ಚೌಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT