ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರತಿ- ಮನ್ಮಥ’ರ ನಗಿಸಿ; ₹ 6 ಲಕ್ಷ ಬಹುಮಾನ ಗೆಲ್ಲಿ!

ಹೋಳಿ ಹಬ್ಬ: ರಾಣೆಬೆನ್ನೂರಿನಲ್ಲಿ ವಿಶಿಷ್ಟ ಆಚರಣೆ
ಮುಕ್ತೇಶ್ವರ ಪಿ. ಕೂರಗುಂದಮಠ
Published 26 ಮಾರ್ಚ್ 2024, 5:19 IST
Last Updated 26 ಮಾರ್ಚ್ 2024, 5:19 IST
ಅಕ್ಷರ ಗಾತ್ರ

ರಾಣೆಬೆನ್ನೂರು: ರಾಣೆಬೆನ್ನೂರಿನಲ್ಲಿ ಹೋಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಅಂತಹ ಆಚರಣೆಗಳಲ್ಲಿ ಜೀವಂತ ‘ರತಿ–ಮನ್ಮಥ’ ಪ್ರಸಂಗವೂ ಒಂದು. ಇಲ್ಲಿನ ದೊಡ್ಡಪೇಟೆ ರಾಮಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಳೆದ 65 ವರ್ಷಗಳಿಂದ ಜೀವಂತ ‘ರತಿ– ಮನ್ಮಥ’ರನ್ನು ಕೂರಿಸಿ, ಅವರನ್ನು ನಗಿಸುವ ಸ್ಪರ್ಧೆ ಆಯೋಜಿಸಲಾಗುತ್ತದೆ.

ಮಾರ್ಚ್ 26ರಂದು ಸಂಜೆ 7 ಗಂಟೆಯಿಂದ ರಾತ್ರಿ 12ರವರೆಗೆ ರಾಮಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜೀವಂತ ರತಿ–ಮನ್ಮಥರನ್ನು ಕೂರಿಸಲಾಗುತ್ತದೆ. ಇವರನ್ನು ನಗಿಸಲು ಜನರು ಮಾಡುವ ವಿವಿಧ ಕಸರತ್ತುಗಳು ವೈವಿಧ್ಯಮಯವಾಗಿರುತ್ತವೆ. ಆದರೆ ನಗಿಸಲು ಈವರೆಗೂ ಸಾಧ್ಯವಾಗದಿರುವುದು ಸೋಜಿಗ.

‘ಕರಟಕ ದಮನಕ’, ‘ಕಾಟೇರ’ ಸಿನಿಮಾಕ್ಕ ಬರತೀಯೇನ, ಕಾಮಣ್ಣ ಸ್ವಲ್ಪ ನಕ್ಕರ ನಗಪಾ, ಏನ ಚಿಂತಿ ಮಾಡಕ ಹತ್ತಿದಿ. ಲೋಕಸಭಾ ಚುನಾವಣೆ ಟಿಕೆಟ್‌ ಸಿಗಲಿಲ್ಲ ಅಂತಾ ಚಿಂತ್ಯಾಗ ಅದಿ ಏನ್‌, ಯಾವ ಪಕ್ಷದ ಟಿಕೆಟ್‌ ಬೇಕ ಹೇಳ್‌, ಬೇಕಾದ್ರ ಎಲ್ಲಾರನ್ನೂ ಬಿಟ್ಟು ನನ್ನ ಹತ್ತರ ಹೇಳ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಸತೀನಿ’..

‘ಈ ಬಾರಿ ಚೌಡವ್ವ ಜಾತ್ರೆಗೂ ಬರಲಿಲ್ಲ. ಜಾತ್ರೆಯಲ್ಲಿ ನಿನಗ ಬಳಿ, ಬೆಂಡು ಬೆತ್ತಾಸು, ಮೈಸೂರ ಪಾಕ್, ಮಿರ್ಚಿ ಮಂಡಕ್ಕಿ ಕೊಡಿಸಿ, ಪನ್ನಾಲಾಲ್‌ ಭವಿಷ್ಯ ಹೇಳಿಸಿ, ಡಿಸ್ಕೊ ಡ್ಯಾನ್ಸ್‌ ಆಡಿಸತೀನಿ. ಯವ್ವಾ ರತಿದೇವಿ.. ನೀನರ್‌ ಸ್ವಲ್ಪ ನಕ್ಕರ ನಗು. ಬಹುಮಾನದ ₹6 ಲಕ್ಷದ ಹಣ ಪೂರಾ ನಿಮಗೆ ಕೊಡ್ತೇವಿ. ಸುಮುಕ ಗಂಟು ಮಾರಿ ಹಾಕ್ಕೊಂಡ ಯಾಕ್‌ ಕುಂತಿಯ ಮಳ್ಳಿ.. ಮನ್ಮಥ ನಿನಗ ರಾತ್ರಿ ಮುತ್ತು ಕೊಡಬೇಕಾರ ಅವನ ಗಡ್ಡ, ಮೀಸಿ ನಿನಗ್‌ ಚುಚ್ಚಾಂಗಿಲ್ಲೇನ್‌? ಈ ವರ್ಷ ಹನಿಮೂನ್‌ಗೆ ಸವಾರಿ ಊಟಿಗೋ? ಮತ್ತೇಲ್ಲಿಗೋ?...’ ಈ ರೀತಿ ವೈವಿಧ್ಯಮಯ ಮಾತುಗಳು ಇಲ್ಲಿಗೆ ಆಗಮಿಸುವ ಸಾರ್ವಜನಿಕರಿಂದ ಕೇಳಿ ಬರುತ್ತವೆ. ರತಿ–ಮನ್ಮಥರನ್ನು ನಗಿಸಲು ಜನರು ನಾನಾ ರೀತಿಯಾಗಿ ಪ್ರಯತ್ನಿಸಿದರೂ ಅವರು ಮಾತ್ರ ಈವರೆಗೆ ಮಾತ್ರ ತುಟಿ ಬಿಚ್ಚಿಲ್ಲ.

ನಗೆಪಾಟಲಿಗೆ ಈಡಾಗುವ ಜನರು: ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರೂ ರತಿ–ಮನ್ಮಥರನ್ನು ನಗಿಸಲು ಪ್ರಯತ್ನಿಸುತ್ತಾರೆ. ಹಾಡು, ನೃತ್ಯ, ಹಾಸ್ಯ ಚಟಾಕಿ ಹಾರಿಸುತ್ತಾರೆ. ಈ ಸನ್ನಿವೇಶಕ್ಕೆ ನೆರೆದಿದ್ದವರೆಲ್ಲ ಹೊಟ್ಟೆ ಹುನ್ನಾಗುವಂತೆ ನಕ್ಕರೂ ರತಿ–ಮನ್ಮಥರು ಮಾತ್ರ ತುಟಿಕ್ ಪಿಟಿಕ್ ಅನ್ನದೆ ಸುಮ್ಮನೆ ಕುಳಿತಿರುತ್ತಾರೆ.

‘ರತಿ–ಮನ್ಮಥರಾಗಿ ಕುಳಿತಾಗ ಯಾವುದೇ ರೀತಿಯ ಹಾಸ್ಯ ಬರುವುದಿಲ್ಲ. ಇಬ್ಬರೂ ಪಕ್ಕದಲ್ಲಿ ಇರುವರೆಗೂ ಮುಖದಲ್ಲಿ ಗಂಭೀರತೆ ಇರುತ್ತದೆ. ಪ್ರೇಕ್ಷಕರು ಯಾವುದೇ ರೀತಿಯ ಹಾಸ್ಯ ಮಾಡಿದರೂ ನಾವು ನಗುವುದಿಲ್ಲ. ಅದೇನೋ ಗೊತ್ತಿಲ್ಲ, ಉಳಿದ ದಿನ ಸರಿಯಾಗಿಯೇ ಇರುತ್ತೇವೆ’ ಎಂದು ಮನ್ಮಥನ ಪಾತ್ರಧಾರಿ ಗದಿಗೆಪ್ಪ ರೊಡ್ಡನವರ ಹಾಗೂ ರತಿ ಪಾತ್ರಧಾರಿ ಕುಮಾರ ಹಡಪದ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ತರ ಕರ್ನಾಟಕ ಕಲಾ ಮೇಳದಲ್ಲಿ, ಬೆಂಗಳೂರಿನ ವಿಧಾನಸೌಧದಲ್ಲಿಯೇ ಜೀವಂತ ‘ರತಿ–ಮನ್ಮಥ’ ಪ್ರಸಂಗದ ಪ್ರದರ್ಶನ ನೀಡಿದ್ದೇವೆ. ಸರ್ಕಾರವು ನಮ್ಮಂತಹ ಕಲಾವಿದರನ್ನು ಗುರುತಿಸಬೇಕು. ಮಾಸಾಶನ ನೀಡಬೇಕು’ ಎನ್ನುವುದು ಇವರ ಮನವಿ.

ನಗಿಸಲು ಸಾಧ್ಯವಾಗದೆ ಬರಿಗೈಲಿ ವಾಪಸ್ ‌ರತಿ–ಮನ್ಮಥರನ್ನು ನಗಿಸಿದವರಿಗೆ ಅಜ್ಜಪ್ಪ ಜಂಬಗಿ ಮಹೇಶ ಕುದರಿಹಾಳ ಅನಿಲ ಸಿದ್ದಾಳಿ ಈಶ್ವರ ಚಿನ್ನಿಕಟ್ಟಿ ಎ.ಬಿ.ಪಾಟೀಲ ಕೊಟ್ರೇಶ ಕೆಂಚಪ್ಪನವರ ಹಾಗೂ ಕಮಿಟಿವರು ಸೇರಿ ₹6 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಸ್ಥಳೀಯರು ಮಾತ್ರವಲ್ಲದೆ ರಾಜ್ಯದ ವಿವಿಧೆಡೆಯಿಂದ ಬರುವ ಜನರು ರತಿ–ಮನ್ಮಥರನ್ನು ನಗಿಸಲು ಪ್ರಯತ್ನಿಸುತ್ತಾರೆ. ಆದರೆ ಕೊನೆಗೆ ಸಾಧ್ಯವಾಗದೆ ಬರಿಗೈಲಿ ವಾಪಸ್ಸಾದ ಪ್ರಸಂಗಗಳು ಪ್ರತಿವರ್ಷ ನಡೆದಿವೆ. ಹೀಗಾಗಿ ಬಹುಮಾನದ ಹಣ ಕಮಿಟಿ ಬಳಿಯೇ ಉಳಿಯುತ್ತಿದೆ.

ಅಚ್ಚರಿ ಮೂಡಿಸುವ ನೋಟ ಕಳೆದ 25 ವರ್ಷಗಳಿಂದ ಮನ್ಮಥನ ವೇಷವನ್ನು ಗದಿಗೆಪ್ಪ ರೊಡ್ಡನವರ ರತಿ ವೇಷವನ್ನು 33 ವರ್ಷಗಳಿಂದ ಕುಮಾರ ಹಡಪದ ನಿರ್ವಹಿಸುತ್ತಾ ಬಂದಿದ್ದಾರೆ. ಉಳಿದ ದಿನಗಳಲ್ಲಿ ಇವರಿಬ್ಬರೂ ಸಾಕಷ್ಟು ಹಾಸ್ಯಪ್ರಜ್ಞೆ ಹೊಂದಿರುತ್ತಾರೆ. ಆದರೆ ರತಿ–ಮನ್ಮಥರಾಗಿ ಕುಳಿತಾಗ ಇವರ ಶಿಸ್ತು ಸಂಯಮ ಗಾಂಭೀರ್ಯತೆ ಕಣ್ಣು ಪಿಳುಕಿಸುವ ನೋಟ ಕುಳಿತುಕೊಳ್ಳುವ ಭಂಗಿ ಜನರಿಗೆ ಅಚ್ಚರಿಯುಂಟು ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT