ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾನಗಲ್ | ಪೈಪ್‌ ದುರಸ್ತಿ: ಕೆಲ ಕೆರೆಗಳ ನೀರು ಸ್ಥಗಿತ

ಬಾಳಂಬೀಡ ಏತ ನೀರಾವರಿ ಯೋಜನೆ: ದುರಸ್ತಿ ನೆಪದಲ್ಲಿ ನೀರು ಬಂದ್
Published 10 ಜುಲೈ 2024, 5:05 IST
Last Updated 10 ಜುಲೈ 2024, 5:05 IST
ಅಕ್ಷರ ಗಾತ್ರ

ಹಾನಗಲ್: ತಾಲ್ಲೂಕಿನ ಜೀವನದಿಯಾದ ವರದಾ ನದಿಯಲ್ಲಿ ನೀರಿನ ಮಟ್ಟ ಕ್ರಮೇಣ ಹೆಚ್ಚಾಗುತ್ತಿದೆ. ನದಿಯ ನೀರನ್ನು  ತಾಲ್ಲೂಕಿನ ಕೆರೆಗೆ ಹರಿಸುವ ಬಾಳಂಬೀಡ ಏತ ನೀರಾವರಿ ಯೋಜನೆಯ ಪ್ರಾಯೋಗಿಕ ಕೆಲಸಕ್ಕೆ ಕೆಲದಿನಗಳ ಹಿಂದೆಯಷ್ಟೇ ಚಾಲನೆ ನೀಡಲಾಗಿದ್ದು, ಪೈಪ್ ದುರಸ್ತಿಯಿಂದಾಗಿ ಸದ್ಯಕ್ಕೆ ಕೆಲ ಕೆರೆಗಳಿಗೆ ನೀರು ಹರಿಸುವಿಕೆ ಸ್ಥಗಿತಗೊಳಿಸಲಾಗಿದೆ.

ವರದಾ ನದಿ ನೀರು ಬಳಸಿಕೊಂಡು ತಾಲ್ಲೂಕಿನ 162 ಕೆರೆಗಳಿಗೆ ನೀರು ತುಂಬಿಸುವ ಬಾಳಂಬೀಡ ಯೋಜನೆ ರೂಪಿಸಲಾಗಿತ್ತು. ಕಾಮಗಾರಿ ಆರಂಭಗೊಂಡ ಬಳಿಕ 196 ಕೆರೆಗಳ ನೀರು ತುಂಬಿಸಲು ಯೋಜನೆ ವಿಸ್ತರಣೆ ಮಾಡಲಾಗಿದೆ. 

‘ವರದಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ. ಜುಲೈ 1ರಿಂದ 96 ಕೆರೆಗಳಿಗೆ ನೀರು ಹರಿಸಲಾಗುತ್ತಿತ್ತು. 5 ಮೋಟರ್ ಪೈಕಿ ನಾಲ್ಕು ಮೋಟರ್‌ ಸಕ್ರಿಯಗೊಳಿಸಲಾಗಿತ್ತು. ಆದರೆ, ಸಮರ್ಪಕ ರೀತಿಯಲ್ಲಿ ಕೆರೆಗಳಿಗೆ ನೀರು ತಲುಪುತ್ತಿರಲಿಲ್ಲ. ಈ ಬಗ್ಗೆ ಪರಿಶೀಲಿಸಿದಾಗ, ಪೈಪ್‌ಗಳಲ್ಲಿ ಸೋರಿಕೆ ಮತ್ತು ಕೃಷಿ ಚಟುವಟಿಕೆಯ ಸಮಯದಲ್ಲಿ ಪೈಪ್‌ಗಳಿಗೆ ಹಾನಿ ಆಗಿರುವುದು ಕಂಡುಬಂದಿದೆ. ಹೀಗಾಗಿ, ತಾತ್ಕಾಲಿಕವಾಗಿ ಕೆಲ ಕೆರೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಯುಟಿಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರುದ್ರಪ್ಪ ಎ.ಎಸ್‌ ತಿಳಿಸಿದರು

’11ನೇ ಪೀಡರ್ ಅಡಿ 12 ಕೆರೆಗಳಿವೆ. ಈ ಮಾರ್ಗದಲ್ಲಿ ಪೈಪ್‌ ದುರಸ್ತಿ ಕೆಲಸ ಆರಂಭಿಸಲಾಗಿದೆ. ಹೀಗಾಗಿ, 12 ಕೆರೆಗಳಿಗೆ ನೀರು ಹರಿಸುವುದನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಎಲ್ಲ ಪೈಪ್‌ಗಳು ದುರಸ್ತಿಯಾದ ನಂತರ, ಪುನಃ ನೀರು ಹರಿಸಲಾಗುವುದು’ ಎಂದರು.

ಮಳೆ ಆಶಾದಾಯಕವಾಗಿ ಬೀಳುತ್ತಿಲ್ಲ. ವರದಾ ನದಿಯಲ್ಲಿ ನೀರಿನ ಹರಿವು ಪ್ರಮಾಣ ಹೆಚ್ಚುತ್ತಿಲ್ಲ. ಲಭ್ಯವಿರುವ ನೀರನ್ನು ಬಳಸಿಕೊಂಡು ಕೆರೆ–ಕಟ್ಟೆಗಳ ತುಂಬಿಸುವ ಪ್ರಯತ್ನ ನಡೆದಿದೆ.
ಶ್ರೀನಿವಾಸ ಮಾನೆ, ಹಾನಗಲ್ ಶಾಸಕ

ಐದು ವರ್ಷಗಳ ನಿರೀಕ್ಷೆ

2019ರಲ್ಲಿ ₹ 386 ಕೋಟಿ ವೆಚ್ಚದಲ್ಲಿ ಬಾಳಂಬೀಡ ಏತ ನೀರಾವರಿ ಯೋಜನೆ ರೂಪಿಸಲಾಗಿತ್ತು. ಕಾಮಗಾರಿ ಆರಂಭವಾದ ದಿನದಿಂದಲೂ ಹಲವು ತಾಂತ್ರಿಕ ಕಾರಣದಿಂದ ನೀರು ಹರಿಸಲು ಸಾಧ್ಯವಾಗಿರಲಿಲ್ಲ. 5 ವರ್ಷಗಳ ಬಳಿಕ ತಾಂತ್ರಿಕ ಅಡಚಣೆಗಳಿಲ್ಲದೇ ಜುಲೈ 1ರಿಂದ ನೀರು ಹರಿಸಲು ಪ್ರಾರಂಭಿಸಲಾಗಿದ್ದು, ಇದೀಗ ಪೈಪ್‌ ದುರಸ್ತಿ ಹೆಸರಿನಲ್ಲಿ ಮತ್ತೆ ನೀರು ಬಂದ್ ಮಾಡಿರುವುದು ರೈತರಿಗೆ ನಿರಾಸೆ ಮೂಡಿಸಿದೆ.

’ಕೆರೆಗೆ ನೀರು ಹರಿಸುವ ಈ ಪ್ರಕ್ರಿಯೆ ಕೇವಲ ಪ್ರಾಯೋಗಿಕವಾಗಿದ್ದು, ಸದ್ಯ 98 ಕೆರೆಗಳಿಗೆ ಮಾತ್ರ ವರದಾ ನದಿಯ ನೀರು ಹರಿಸಲಾಗುತ್ತಿತ್ತು. ಇದೀಗ ಆ ನೀರು ಬಂದ್ ಮಾಡಲಾಗಿದೆ’ ಎಂದು ಅಧಿಕಾರಿ ಹೇಳಿದರು.

‘ತಾಲ್ಲೂಕಿನ ಪ್ರತಿಯೊಂದು ಕೆರೆಗೂ ವರದಾ ನದಿ ನೀರು ಬರಬೇಕು. ನದಿಯಲ್ಲಿ ನೀರಿನ ಹರಿವು ಇದ್ದಾಗಲೂ ತಾಂತ್ರಿಕ ಅಡಚಣೆಗಳ ನೆಪ ಹೇಳಿ ಯೋಜನೆಯನ್ನು ಸ್ಥಗಿತಗೊಳಿಸುವುದು ಸರಿಯಲ್ಲ. ಕಳೆದ ವರ್ಷವೇ ಈ ಯೋಜನೆ ಸೇವೆಗೆ ಸಿದ್ಧಗೊಂಡಿತ್ತು. ಹೆಸ್ಕಾಂ ಮತ್ತಿತರ ಕಾರಣ ನೀಡಿ ನೀರು ಹರಿಸಲಿಲ್ಲ. ಈ ಯೋಜನೆ ನಂಬಿಕೊಂಡು ರೈತರು ನಾನಾ ಬೆಳೆ ಬೆಳೆದಿದ್ದಾರೆ. ನೀರು ನೀಡದಿದ್ದರೆ, ಬೆಳೆಗಳು ನೆಲಕಚ್ಚಲಿವೆ’ ಎಂದು ರೈತರು ಅಳಲು ತೋಡಿಕೊಂಡರು.

ಬಾಳಂಬೀಡ ಏತ ನೀರಾವರಿ ಯೋಜನೆ ಮೂಲಕ ಸದ್ಯ ಹಾನಗಲ್‌ನ ಆನಿಕೆರೆಗೆ ವರದಾ ನದಿ ನೀರು ಹರಿಸಲಾಗುತ್ತಿದೆ. ಇದರಿಂದ ಕೆರೆಗೆ ಅಲ್ಪಪ್ರಮಾಣದಲ್ಲಿ ನೀರು ಸಿಗಲಿದೆ.

ನೀರು ನೀಡದ ‘ಬಸಾಪುರ ಏತ’

ಹಾನಗಲ್ ತಾಲ್ಲೂಕಿನ 60 ಕೆರೆಗಳು ಹಾಗೂ 6 ಸಾವಿರ ಎಕರೆ ಕೃಷಿ ಭೂಮಿಗೆ ನೀರಾವರಿ ಒದಗಿಸುವ ಉದ್ದೇಶದಿಂದ ರೂಪಿಸಿರುವ ಬಸಾಪುರ ಏತ ನೀರಾವರಿ ಯೋಜನೆಯೂ ಸದ್ಯಕ್ಕೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ರೈತರಿಗೆ ನೀರು ಒದಗಿಸುವ ಉದ್ದೇಶದಿಂದ ಆರಂಭಿಸಿರುವ ಈ ಯೋಜನೆಯ ನೀರು ಇದುವರೆಗೂ ರೈತರಿಗೆ ತಲುಪುತ್ತಿಲ್ಲ. ಪೈಪ್ ಹಾಗೂ ದುರಸ್ತಿ ನೆಪ ಹೇಳುತ್ತಲೇ ಅಧಿಕಾರಿಗಳು ಯೋಜನೆಯನ್ನು ಮುಂದೂಡುತ್ತಿದ್ದಾರೆ. ಸದ್ಯದ ಮಳೆಗಾಲದ ಸಂದರ್ಭದಲ್ಲೂ ಯೋಜನೆಯಿಂದ ನೀರು ಸಿಗದಿದ್ದಕ್ಕೆ ರೈತರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT