ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಸಾಪ ಜನಸಾಮಾನ್ಯ ಪರಿಷತ್‌ ಆಗಲಿ’

Last Updated 16 ಏಪ್ರಿಲ್ 2021, 16:42 IST
ಅಕ್ಷರ ಗಾತ್ರ

ಹಾವೇರಿ: ‘ಕನ್ನಡ ಸಾಹಿತ್ಯ ಪರಿಷತ್ತನ್ನು‌ ಜನಸಾಮಾನ್ಯರ ಪರಿಷತ್‌ ಆಗಿಸುವ ಧ್ಯೇಯ ನನ್ನದಾಗಿದೆ. ನಾನು ಅಧಿಕಾರದ ಲಾಲಸೆಯಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ಬದಲಾಗಿ ಕನ್ನಡದ ಪರಿಚಾರಕನಾಗಿ ಸ್ಪರ್ಧಿಸುತ್ತಿದ್ದೇನೆ’ ಎಂದು ಕಸಾಪ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ.ಮಹೇಶ ಜೋಶಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಾನು ಕಳಸದ ಗುರುಗೋವಿಂದ ಭಟ್ಟರ ವಂಶಜರಾಗಿದ್ದೇನೆ. ನನಗೆ ಧಾರವಾಡ, ಗದಗ, ಹಾವೇರಿಯಲ್ಲಿ ಬಂಧುಗಳಿದ್ದಾರೆ. ಹೀಗಾಗಿ ಹಾವೇರಿ ನನಗೆ ತವರು ಮನೆ ಇದ್ದಂತೆ ಎಂದರು.

ಕೆಲವು ಆಕಾಂಕ್ಷಿಗಳು ಕಲ್ಯಾಣ ಕರ್ನಾಟಕದ ಪ್ರತಿನಿಧಿ, ಬೆಂಗಳೂರು ಪ್ರತಿನಿಧಿ ಎಂದು ಪರಿಚಯಿಸಿಕೊಳ್ಳುತ್ತಾರೆ. ಆದರೆ, ನಾನು ಅಖಂಡ ಕರ್ನಾಟಕದ ಪ್ರತಿನಿಧಿ ಎಂದು ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ. ನಾನು ಗೆದ್ದರೆ, ಪ್ರಾದೇಶಿಕ ಅಸಮಾನತೆ ಆಗದಂತೆ ನೋಡಿಕೊಳ್ಳುತ್ತೇನೆ. 25 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಮತದಾರರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ತಿಳಿಸಿದರು.

ಸಮ್ಮೇಳನ ಮುಂದೂಡಿಕೆ ಸರಿಯಲ್ಲ:

ಹಾವೇರಿಗೆ ಈ ಹಿಂದೆ ಸಿಕ್ಕಿದ್ದ ಸಮ್ಮೇಳನದ ಆತಿಥ್ಯ ಕಾರಣಾಂತರದಿಂದ ಕೈತಪ್ಪಿ ಹೋಗಿದೆ. ಹೀಗಾಗಿ ಮುಂಜಾಗ್ರತೆ ತೆಗೆದುಕೊಂಡು, ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡುವ ಮೂಲಕ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಬಹುದಿತ್ತು. ಜಾತ್ರೆ, ಚುನಾವಣೆಗಳಲ್ಲಿ ಲಕ್ಷಾಂತರ ಜನ ಸೇರುತ್ತಾರೆ. ಹೀಗಾಗಿ, ಕೋವಿಡ್‌ ನೆಪದಲ್ಲಿ ಸಮ್ಮೇಳನ ಮುಂದೂಡಿಕೆ ಸರಿಯಲ್ಲ ಎಂದರು.

ದೂರದರ್ಶನ ಚಂದನದ ಜನಪ್ರಿಯ ಕಾರ್ಯಕ್ರಮ ‘ಮಧುರ ಮಧುರವೀ ಮಂಜುಳಗಾನ’ದ ರೂವಾರಿ ಮತ್ತು ‘ಥಟ್‌ ಅಂತ ಹೇಳಿ’ ಕಾರ್ಯಕ್ರಮವನ್ನು ವಿಸ್ತಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ರಾಜಕೀಯದಲ್ಲಿ ತಟಸ್ಥನಾಗಿ, ಕನ್ನಡ ಪಂಥದ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದರು.

ಪ್ರಣಾಳಿಕೆ

ಕಸಾಪ ಸದಸ್ಯತ್ವ ಪಡೆಯುವ ವಿಧಾನವನ್ನು ಸರಳೀಕೃತಗೊಳಿಸುವುದು, ಕನ್ನಡದಲ್ಲಿಯೇ ಪ್ರಾಥಮಿಕ ಶಿಕ್ಷಣದ ಅನುಷ್ಠಾನಕ್ಕೆ ಒತ್ತು, ಕನ್ನಡ ಶಾಲೆಗಳು ಮುಚ್ಚದ ಹಾಗೆ ಜಾಗ್ರತೆ, ಕನ್ನಡ ಅನ್ನದ ಭಾಷೆಯಾಗಲು ಎಲ್ಲ ರೀತಿಯ ಪ್ರಯತ್ನ, ಮಹಿಳೆಯರಿಗೆಸಮ್ಮೇಳನಾಧ್ಯಕ್ಷರ ಸ್ಥಾನಮಾನ ಹಾಗೂ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಅರಳಿಹಳ್ಳಿನಾಗರಾಜ, ಪ್ರಕಾಶ, ನಬಿಸಾಬ್‌ ಕುಷ್ಟಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT