ಗುರುವಾರ , ಆಗಸ್ಟ್ 5, 2021
28 °C

ಬೆಳಿಗ್ಗೆ ನರ್ಸ್‌, ರಾತ್ರಿ ಸೋಂಕಿತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾಸಿಟಿವ್‌ ಬಂದಿದ್ದರೂ, ನನಗೆ ಯಾವುದೇ ಸೋಂಕಿನ ಲಕ್ಷಣಗಳು ಇರಲಿಲ್ಲ. ಹಾಗಾಗಿ ‘ಕೋವಿಡ್‌ ಹೋರಾಟ’ದಲ್ಲಿ ಗೆದ್ದು ಬರುತ್ತೇನೆ ಎಂಬ ಅಚಲ ವಿಶ್ವಾಸವಿತ್ತು. ಅದರಂತೆಯೇ ಎಂಟು ದಿನಗಳಲ್ಲೇ ಗುಣಮುಖಳಾಗಿ ಆಸ್ಪತ್ರೆಯಿಂದ ಬಿಡುಗಡೆಯಾದೆ ಎನ್ನುತ್ತಾರೆ ಹಾವೇರಿ ಜಿಲ್ಲಾಸ್ಪತ್ರೆಯ ಸ್ಟಾಫ್‌ ನರ್ಸ್‌ ರಾಜಶ್ರೀ ಚೌಹಾಣ. 

ಜುಲೈ 9ರಂದು ‘ಕೋವಿಡ್‌ ವಾರ್ಡ್‌’ನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಡ್ಯೂಟಿ ಮಾಡಿ, ಮನೆಗೆ ಬಂದಿದ್ದೆ. ಮಧ್ಯಾಹ್ನ 2.30ರ ಸಮಯದಲ್ಲಿ ಡಿಎಚ್‌ಒ ಕಚೇರಿಯಿಂದ ‘ನಿಮಗೆ ಪಾಸಿಟಿವ್‌ ಬಂದಿದೆ’ ಎಂಬ ಕರೆ ಬಂತು. ಕ್ಷಣಕಾಲ ಗಾಬರಿಯಾದೆ. ಕೋವಿಡ್‌ ವಾರ್ಡ್‌ನಲ್ಲಿ ಬೆಳಿಗ್ಗೆ ನರ್ಸ್‌ ಆಗಿದ್ದ ನಾನು, ರಾತ್ರಿ ಸೋಂಕಿತೆಯಾಗಿದ್ದೆ. 

ನಮ್ಮ ಮನೆಯ ಪಕ್ಕದ ಸ್ಟಾಫ್‌ ನರ್ಸ್‌ವೊಬ್ಬರ ಪತಿಗೆ ಪಾಸಿಟಿವ್‌ ಬಂದಿತ್ತು. ಹೀಗಾಗಿ ನೆರೆಹೊರೆಯವರಾದ ನಾನು ಮತ್ತು ನನ್ನ ತಂಗಿ ಜುಲೈ 6ರಂದು ಗಂಟಲು ದ್ರವವನ್ನು ಪರೀಕ್ಷೆಗೆ ಕೊಟ್ಟಿದ್ದೆವು. ನನ್ನ ತಂಗಿಯ ವರದಿ ನೆಗೆಟಿವ್‌ ಬಂದಿತ್ತು. ನನ್ನದು ಪಾಸಿಟಿವ್‌ ಎಂದು ಬಂದಿತು. ರಾತ್ರಿ 8 ಗಂಟೆಗೆ ಆಂಬುಲೆನ್ಸ್‌ ಬಂದು ನನ್ನನ್ನು ಕರೆದೊಯ್ದಿತು. 

ಕೋವಿಡ್‌ ವಾರ್ಡ್‌ಗೆ ನಾನು ಸೋಂಕಿತೆಯಾಗಿ ಹೋದಾಗ, ಇತರ ಸೋಂಕಿತರ ಮುಖದಲ್ಲಿ ಆಶ್ಚರ್ಯ ಮತ್ತು ಸಹೋದ್ಯೋಗಿಗಳ ಮುಖದಲ್ಲಿ ಆತಂಕ, ಗಾಬರಿ ಕಾಣಿಸಿತು. ಹಿರಿಯ ಸಹೋದ್ಯೋಗಿಗಳು ನನಗೆ ಧೈರ್ಯ ತುಂಬಿದರು. ಸೋಂಕಿತರಿಗೆ ನಾನು ಹೇಳುತ್ತಿದ್ದ ಆತ್ಮವಿಶ್ವಾಸದ ನುಡಿಗಳು, ಸಲಹೆಗಳನ್ನು ನನಗೆ ನಾನೇ ಹೇಳಿಕೊಂಡೆ. ಇತರರಿಗೂ ಸ್ಥೈರ್ಯ ತುಂಬಿದೆ. 

ಸಹೋದ್ಯೋಗಿಗಳ ಉಪಚಾರ, ವೈದ್ಯರ ಚಿಕಿತ್ಸೆ, ಜಿಲ್ಲಾ ಶಸ್ತ್ರಚಿಕಿತ್ಸಕರ ಬೆಂಬಲ ಮತ್ತು ಪೌಷ್ಟಿಕ ಆಹಾರದಿಂದ ಬೇಗ ಗುಣಮುಖಳಾಗಿ ಹೊರಬಂದೆ. ನನ್ನ ತಂದೆ–ತಾಯಿ ಆತಂಕಕ್ಕೆ ಒಳಗಾಗುತ್ತಾರೆ ಎಂದು ಇದುವರೆಗೂ ಸೋಂಕು ತಗುಲಿದ ಬಗ್ಗೆ ತಿಳಿಸಿಲ್ಲ. ಈಗ 14 ದಿನ ಹೋಂ ಕ್ವಾರಂಟೈನ್‌ನಲ್ಲಿದ್ದು, ಆರೋಗ್ಯಕರವಾಗಿದ್ದೇನೆ. ಜೀವನದಲ್ಲಿ ಎಂಥ ಕಷ್ಟ, ಸವಾಲು ಬಂದರೂ ಎದುರಿಸುವ ಧೈರ್ಯ, ಆತ್ಮವಿಶ್ವಾಸ ಹೆಚ್ಚಾಗಿದೆ.

– ಸಿದ್ದು ಆರ್‌.ಜಿ.ಹಳ್ಳಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.