ಆಸಕ್ತಿಗೆ ಒಲಿದ ಮೂರ್ತಿ ಕಲೆಗಾರಿಗೆ

7
ಮಣ್ಣು, ಸೋಪು, ಸಿಮೆಂಟ್‌ನಲ್ಲಿ ವಿವಿಧ ಮೂರ್ತಿಗಳ ತಯಾರಿಕೆ

ಆಸಕ್ತಿಗೆ ಒಲಿದ ಮೂರ್ತಿ ಕಲೆಗಾರಿಗೆ

Published:
Updated:
ಗಣೇಶಮೂರ್ತಿ ರಚನೆಯಲ್ಲಿ ಪ್ರದೀಪಕುಮಾರ ಹುನಗುಂದ

ಹಾನಗಲ್: ‘ಕಲೆ ಯಾರ ಸೊತ್ತಲ್ಲ, ಆಸಕ್ತರಿಗೆ ಒಲಿಯುತ್ತದೆ’ ಎಂಬ ನಾಣ್ನುಡಿಗೆ ತಕ್ಕಂತೆ, ಏಕಲವ್ಯನಂತೆ ಕಲೆಯನ್ನು ಕರಗತ ಮಾಡಿಕೊಂಡವರು ಪಟ್ಟಣದ ಪ್ರದೀಪಕುಮಾರ ಹುನಗುಂದ.

ತಾಯಿ ಮಾಡಿಕೊಡುತ್ತಿದ್ದ ಮಣ್ಣಿನ ಆಟಿಕೆ ವಸ್ತುಗಳಿಂದ ಪ್ರೇರಿತರಾಗಿ ಪ್ರದೀಪಕುಮಾರ ಅವರು ಮೂರ್ತಿ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ತಾವು ವಿದ್ಯಾರ್ಥಿಯಾಗಿದ್ದಾಗ ‘ಪ್ರತಿಭಾ ಕಾರಂಜಿ’ಗಳಲ್ಲಿ ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದಾರೆ.

ಕಲೆಯಲ್ಲಿಯೇ ವೃತ್ತಿ ಬದುಕನ್ನು ಕಂಡಕೊಳ್ಳುವ ಪ್ರಯತ್ನ ಮಾಡುತ್ತಿರುವ ಹುನಗುಂದ, ಮಣ್ಣು, ಕಲ್ಲು, ಸಿಮೆಂಟ್‌ ಹಾಗೂ ಸೋಪಿನಲ್ಲಿ ಕಲಾಕೃತಿಗಳನ್ನು ತಯಾರಿಸಿದ್ದಾರೆ. ಅಲ್ಲದೇ, ಕ್ರೀಡೆ, ಪೇಂಟಿಂಗ್, ರಂಗಭೂಮಿ ಚಟುವಟಿಕೆಯಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದಾರೆ.

ಮನೆಯಲ್ಲಿಯೇ ಒಂದು ಶೆಡ್‌ ನಿರ್ಮಿಸಿಕೊಂಡಿದ್ದು, ಸಿಮೆಂಟ್‌ನಿಂದ ಬೆದರುವ ಹೋರಿಗಳು ಹಾಗೂ ಮಣ್ಣು ಮತ್ತು ಸೋಪಿನಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ.

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ಮೂರ್ತಿಗೆ ನಿಷೇಧ ಬಿದ್ದ ಬಳಿಕ, ಇವರು ತಯಾರಿಸುವ ಮಣ್ಣಿನ ಹಾಗೂ ಸಿಮೆಂಟ್‌ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಳೆದ ಎಂಟು ವರ್ಷಗಳಿಂದ ಗಣೇಶ ಚತುರ್ಥಿಗೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ ಗಮನ ಸೆಳೆದಿದ್ದಾರೆ.

ತಾಲ್ಲೂಕಿನ ಸುತ್ತಲಿನ ಗ್ರಾಮಗಳ ಜಾತ್ರೆ, ಉತ್ಸವ, ಹೋರಿ ಬೆದರಿಸುವ ಸ್ಪರ್ಧೆಗಳಿಗೆ ಸ್ತಬ್ಧ ಚಿತ್ರ, ಎತ್ತುಗಳ ಮೂರ್ತಿ ತಯಾರಿಸಿ ಕೊಡುತ್ತಾರೆ.

ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಮಣ್ಣಿನಲ್ಲಿ ಕಲಾಕೃತಿ ರಚನೆಯ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ, ಮಣ್ಣಿನ ಕಲೆಯ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸುತ್ತಿದ್ದಾರೆ.

ಪ್ರತಿಭಾ ಕಾರಂಜಿ ಮತ್ತಿತರ ಸ್ಪರ್ಧೆಗಳ ಮಾದರಿ ರಚನೆಗಾಗಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: 7259509104 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !