ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹1 ಕೋಟಿ ಕಾಮಗಾರಿ ನನೆಗುದಿಗೆ: ಬಸನಕಟ್ಟೆ ಒಡಲು ಸೇರುತ್ತಿದೆ ಕಲುಷಿತ ನೀರು

Published 18 ಡಿಸೆಂಬರ್ 2023, 7:48 IST
Last Updated 18 ಡಿಸೆಂಬರ್ 2023, 7:48 IST
ಅಕ್ಷರ ಗಾತ್ರ

ಬ್ಯಾಡಗಿ: ವಿದ್ಯಾನಗರ ಹಾಗೂ ಬೆಟ್ಟದ ಮಲ್ಲೇಶ್ವರ ನಗರಗಳಿಂದ ಹರಿದು ಬರುವ ಕೊಳಚೆ ನೀರು ಬಸನಕಟ್ಟೆ ಕೆರೆಯ ಒಡಲು ಸೇರುತ್ತಿದೆ. ಕೆರೆಯಲ್ಲಿ ಈಗ ಜಾಲಿ ಹಾಗೂ ಇನ್ನಿತರ ಗಿಡಗಳು ಬೆಳೆದು ನಿಂತಿದ್ದು, ಕೊಳಚೆ ನೀರಿನಿಂದ ದುರ್ವಾಸನೆ ಬೀರುತ್ತಿದೆ. 

‘ಐದು ವರ್ಷಗಳ ಹಿಂದೆ ಪುರಸಭೆ ಜಾನುವಾರುಗಳಿಗಾಗಿ ಮೀಸಲಿಟ್ಟಿದ್ದ ಬಸನಕಟ್ಟೆ ಕೆರೆಯನ್ನು ಅಭಿವೃದ್ಧಿಪಡಿಸಲು ಮುಂದಾಯಿತು. ಇದಕ್ಕಾಗಿ ಬಿಡುಗಡೆಯಾದ ₹1 ಕೋಟಿ ಅನುದಾನ ಖರ್ಚಾಯಿತೇ ಹೊರತು ಗುಣಮಟ್ಟದ ಕಾಮಗಾರಿ ಪೂರ್ಣಗೊಳ್ಳಲಿಲ್ಲ. ಇದರಲ್ಲಿ ಹಣದ ದುರ್ಬಳಕೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಸಮಗ್ರ ತನಿಖೆ ಮಾಡಬೇಕು’ ಎಂದು ಮಾಜಿ ಸೈನಿಕ ಮಲ್ಲೇಶಪ್ಪ ಚಿಕ್ಕಣ್ಣನವರ ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಉಂಟಾಗಬಹುದಾದ ನೀರಿನ ಸಮಸ್ಯೆಯನ್ನು ನೀಗಿಸುವ ಉದ್ದೇಶದಿಂದ ಈ ಹಿಂದೆ ಐದು ಎಕರೆ ಪ್ರದೇಶದಲ್ಲಿನ ಅರ್ಧ ಭಾಗದಲ್ಲಿ ಕುಡಿಯುವ ನೀರಿನ ಹೊಂಡ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಬಸನಕಟ್ಟೆ ಕೆರೆಯನ್ನು ನಿರ್ಮಿಸಲಾಗಿತ್ತು.

ನಂತರ ಕುಡಿಯುವ ನೀರಿನ ಹೊಂಡದ ಸುತ್ತಲೂ ಬೇಲಿ ನಿರ್ಮಿಸಿ ಸಾಕಷ್ಟು ಅಭಿವೃದ್ಧಿಪಡಿಸಿದ ಬಳಿಕ ಅದರಲ್ಲಿ ತುಂಗಭದ್ರಾ ನದಿ ತೀರದಿಂದ ಕುಡಿಯುವ ನೀರನ್ನು ಸಂಗ್ರಹಿಸಲಾಗುತ್ತಿದೆ. ಈಗ ಪಟ್ಟಣದ ಜನಸಂಖ್ಯೆ ಸಹ ಹೆಚ್ಚಾಗಿದ್ದು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಕುಡಿಯುವ ನೀರಿನ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶ ಈಡೇರಿಲ್ಲ.

ನೀರು ಪೂರೈಕೆಯಲ್ಲಿ ವ್ಯತ್ಯಯ:

‘ತುಂಗಭದ್ರಾ ನದಿ ತೀರದಿಂದ ನೀರು ಪೂರೈಕೆಯಾಗುವ ಸಂದರ್ಭಗಳಲ್ಲಿ ಪೈಪ್‌ ಒಡೆದೋ, ವಿದ್ಯುತ್‌ ನಿಲುಗಡೆಯಿಂದಲೋ ವಾರಗಟ್ಟಲೆ ಕುಡಿಯುವ ನೀರಿನ ಪೂರೈಕೆ ಸ್ಥಗಿತಗೊಳ್ಳುತ್ತದೆ. ಆ ವೇಳೆ ಪಟ್ಟಣದ ಜನತೆ ಕುಡಿಯುವ ನೀರಿಗಾಗಿ ಹೊಂಡವನ್ನು ಅವಲಂಬಿಸಬೇಕಾಗುತ್ತದೆ. ಪಟ್ಟಣದ ಜನಸಂಖ್ಯೆಯ ಸಾಮರ್ಥ್ಯಕ್ಕೆ ತಕ್ಕಂತೆ ಬಸನಕಟ್ಟೆ ಕೆರೆಯನ್ನು ಅಭಿವೃದ್ಧಿಪಡಿಸಿ ಹೊಂಡವಾಗಿ ನಿರ್ಮಿಸಿ ನದಿ ನೀರು ಸಂಗ್ರಹಕ್ಕೆ ಮುಂದಾಗಬೇಕು’ ಸಾಮಾಜಿಕ ಕಾರ್ಯಕರ್ತ ರಾಜಣ್ಣ ಹೊಸಳ್ಳಿ ಆಗ್ರಹಿಸಿದರು.

ಬರಿದಾದ ಕೆರೆ–ಕಟ್ಟೆ:

‘ಈ ಬಾರಿ ಮಳೆಯ ತೀವ್ರ ಕೊರತೆಯಿಂದ ನದಿ, ಕೆರೆ ಕಟ್ಟೆಗಳು ಬರಿದಾಗಿವೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುವಂತಾಗಿದೆ. ಶೀಘ್ರ ಗತಿಯಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಿದರೆ, ಸಂಗ್ರಹವಾಗಿರುವ ಕೊಳಚೆ ನಿರ್ಮೂಲನೆಯ ಜೊತೆಗೆ ಪಟ್ಟಣದ ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತರಾಗಲು ಸಾಧ್ಯವಿದೆ. ಈ ಕುರಿತು ಶಾಸಕರ ನೇತೃತ್ವದಲ್ಲಿ ಪುರಸಭಾ ಸದಸ್ಯರು ಹಾಗೂ ಮುಖಂಡರು ಮುಂದಾಗಬೇಕು’ ಎಂದು ನಾಗರಿಕರು ಒತ್ತಾಯಿಸಿದ್ದಾರೆ. 

‘ಕೆರೆಯ ಪಕ್ಕದಲ್ಲಿ ಕೆರೆ ಕೋಡಿ ದುರ್ಗಾದೇವಿ, ಗಂಗಾ ಪರಮೇಶ್ವರಿ ದೇವಸ್ಥಾನ ಹಾಗೂ ಸಿಬಾರಗಳಿವೆ. ನಿತ್ಯ ಜನತೆ ವಾಯು ವಿಹಾರಕ್ಕೆಂದು ಬೆಟ್ಟದ ಮಲ್ಲೇಶ್ವರ ಗುಡ್ಡಕ್ಕೆ ಈ ರಸ್ತೆಯ ಮೂಲಕ ತೆರಳುತ್ತಾರೆ. ಕೊಳಚೆಯಿಂದಾಗಿ ವಾತಾವರಣ ಮಲಿನವಾಗುತ್ತಿದೆ. ಅದರ ನಿವಾರಣೆಗೆ ಪುರಸಭೆ ಮುಂದಾಗಬೇಕು’ ಎಂದು ನಿವೃತ್ತ ನೌಕರರ ಸಂಘದ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ.

ಬ್ಯಾಡಗಿ ಬಸನಕಟ್ಟಿ ಕೆರೆಯ ದಡದಲ್ಲಿ ಕಸದ ರಾಶಿ ಸೃಷ್ಟಿಯಾಗಿದ್ದು ಕೆರೆಯ ಒಡಲು ಸೇರುತ್ತಿದೆ 
ಬ್ಯಾಡಗಿ ಬಸನಕಟ್ಟಿ ಕೆರೆಯ ದಡದಲ್ಲಿ ಕಸದ ರಾಶಿ ಸೃಷ್ಟಿಯಾಗಿದ್ದು ಕೆರೆಯ ಒಡಲು ಸೇರುತ್ತಿದೆ 
ಅಮೃತ ಯೋಜನೆಯಡಿ ₹10 ಕೋಟಿ ಅನುದಾನ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಿದ್ದು ಶೀಘ್ರ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗಿದೆ
ಬಸವರಾಜ ಶಿವಣ್ಣನವರ ಶಾಸಕ
ಬಸನಕಟ್ಟೆ ಕೆರೆಯ ಹೂಳೆತ್ತಿ ಸುತ್ತಲೂ ತಡೆಗೋಡೆ ನಿರ್ಮಿಸಿ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
ವಿನಯಕುಮಾರ ಹೊಳೆಯಪ್ಪಗೋಳ ಮುಖ್ಯಾಧಿಕಾರಿ ಬ್ಯಾಡಗಿ ಪುರಸಭೆ
ಕೊಳಚೆ ನೀರಿನಿಂದ ದುರ್ವಾಸನೆ
ಬಸನಕಟ್ಟೆ ಕೆರೆಯು ಗಾಂಧಿನಗರ ಸ್ವಾಮಿ ವಿವೇಕಾನಂದ ನಗರ ಇಸ್ಲಾಂಪುರ ಓಣಿ ಶಿವಪುರ ಬಡಾವಣೆ ಇವುಗಳ ಮಧ್ಯದಲ್ಲಿದ್ದು ಅಲ್ಲಿಯ ಜನತೆ ಸೊಳ್ಳೆ ಹಾಗೂ ವಿಷಜಂತುಗಳಿಂದ ರೋಸಿ ಹೋಗಿದ್ದಾರೆ. ಕೆರೆಯ ಒಡಲು ಸೂಕ್ತ ನಿರ್ವಹಣೆಯಿಲ್ಲದೆ ಕೊಳಚೆ ನೀರಿನಿಂದ ತುಂಬಿ ಹೋಗಿದ್ದು ಗಬ್ಬು ವಾಸನೆ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಿ ಕುಡಿಯುವ ನೀರು ಸಂಗ್ರಹಕ್ಕೆ ಮುಂದಾಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT