ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 19ರವರೆಗೆ ರಾತ್ರಿ ಕರ್ಫ್ಯೂ ಜಾರಿ

ಚಿತ್ರಮಂದಿರ, ಪಬ್‌ ತೆರೆಯಲು ಅನುಮತಿ ಇಲ್ಲ: ಜಿಲ್ಲಾಧಿಕಾರಿ
Last Updated 4 ಜುಲೈ 2021, 14:19 IST
ಅಕ್ಷರ ಗಾತ್ರ

ಹಾವೇರಿ: ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಪರಿಷ್ಕೃತ ಆದೇಶದನ್ವಯ ಜಿಲ್ಲೆಯಲ್ಲಿ ಜುಲೈ 19ರ ಬೆಳಿಗ್ಗೆ 6 ಗಂಟೆವರೆಗೆ ನಿಗದಿತ ಚಟುವಟಿಕೆ ಹೊರತುಪಡಿಸಿ, ಉಳಿದೆಲ್ಲ ಚಟುವಳಿಕೆಗಳಿಗೆ ಅನುಮತಿ ನೀಡಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಾದ್ಯಂತ ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ರಾತ್ರಿ ಕಫ್ರ್ಯೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅತ್ಯವಶ್ಯ ಹಾಗೂ ತುರ್ತು ಚಟುವಟಿಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಚಿತ್ರಮಂದಿರಗಳು ಮತ್ತು ಪಬ್‍ಗಳಿಗೆ ಅನುಮತಿ ಇರುವುದಿಲ್ಲ. ಕೋವಿಡ್ ಪ್ರಮಾಣಿತ ಎಸ್‍ಒಪಿ ಅನುಸರಿಸಿ ಸ್ಪರ್ಧಾತ್ಮಕ ತರಬೇತಿಗೆ ಮಾತ್ರ ಈಜುಕೊಳಗಳನ್ನು ತೆರೆಯಲು ಅನುಮತಿಸಿದೆ. ಕ್ರೀಡಾಪಟುಗಳ ಅಭ್ಯಾಸಕ್ಕೆ ಮಾತ್ರ ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಪ್ರೇಕ್ಷಕರಿಗೆ ಅನುಮತಿ ಇರುವುದಿಲ್ಲ.

ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಅಕಾಡೆಮಿಕ್, ಸಾಂಸ್ಕೃತಿಕ, ಧಾರ್ಮಿಕ ಸಭೆ-ಸಮಾರಂಭ ಮತ್ತು ಇತರೆ ಜನ ಸೇರುವ ಕಾರ್ಯಕ್ರಮಗಳಿಗೆ ಅನುಮತಿ ಇರುವುದಿಲ್ಲ. ಮದುವೆ, ಕೌಟುಂಬಿಕ ಶುಭ ಸಮಾರಂಭಗಳಿಗೆ ಸರ್ಕಾರದ ಹಿಂದಿನ ಮಾರ್ಗಸೂಚಿಯಂತೆ 100 ಜನರಿಗೆ ಮೀರದಂತೆ ಅನುಮತಿ ನೀಡಲಾಗಿದೆ. ಅಂತ್ಯಸಂಸ್ಕಾರಕ್ಕೆ 20 ಜನರು ಮೀರದಂತೆ ನಡೆಸಲು ಅನುಮತಿ ನೀಡಲಾಗಿದೆ.

ದೇವಸ್ಥಾನ, ಧಾರ್ಮಿಕ ಸ್ಥಳಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಆದರೆ ಯಾವುದೇ ಸೇವೆಗಳಿಗೆ ಅನುಮತಿ ಇರುವುದಿಲ್ಲ. ಶೇ 100ರಷ್ಟು ಸಾಮರ್ಥ್ಯದವರೆಗೆ ಸಾರ್ವಜನಿಕ ಸಾರಿಗೆಗಳಿಗೆ ಅನುಮತಿ ನೀಡಲಾಗಿದೆ.
ಎಲ್ಲಾ ಅಂಗಡಿಗಳು, ರೆಸ್ಟೋರೆಂಟ್‍ಗಳು, ಮಾಲ್‍ಗಳು, ಖಾಸಗಿ ಕಚೇರಿಗಳು ಮತ್ತು ಮುಚ್ಚಿದ ಸ್ಥಳಗಳಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 ಅನ್ವಯ ಕ್ರಮ ಕೈಗೊಳ್ಳಲಾಗುವುದು. ಶೈಕ್ಷಣಿಕ ಸಂಸ್ಥೆಗಳು, ಟುಟೋರಿಯಲ್ಸ್‌ ಮತ್ತು ಕಾಲೇಜುಗಳು ಮುಂದಿನ ಆದೇಶದವರೆಗೆ ಮುಚ್ಚಲ್ಪಟ್ಟಿರುತ್ತವೆ.

ಕೋವಿಡ್-19 ನಿಯಂತ್ರದನ ದೃಷ್ಟಿಯಿಂದ ಸಾರ್ವಜನಿಕರು ನಿಯಂತ್ರಣ ಕ್ರಮಗಳಾವಗಿ ಮಾಸ್ಕ್ ಧಾರಣೆ, ಅಂತರ ಕಾಪಾಡುವುದು ಹಾಗೂ ವೈಯಕ್ತಿಕ ಮತ್ತು ಸಾಮಾಜಿಕ ಸ್ವಚ್ಛತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾಸ್ಕ ಧರಿಸದೇ ಓಡಾಡುವವವರಿಗೆ ನಗರ ಪ್ರದೇಶಗಳಲ್ಲಿ ₹250 ಹಾಗೂ ಇತರೆ ಪ್ರದೇಶಗಳಲ್ಲಿ ₹100 ದಂಡವನ್ನು ವಿಧಿಸಲಾಗುವುದು.

ಸಾರ್ವಜನಿಕರಲ್ಲಿ ಅಂತರವನ್ನು ಕಾಪಾಡುವ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ 144 ಸೆಕ್ಷನ್‌ ಜಾರಿಯಲ್ಲಿರುತ್ತದೆ. ಯಾವುದೇ ವ್ಯಕ್ತಿ ಈ ನಿರ್ದೇಶನಗಳನ್ನು ಪಾಲಿಸಲು ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ದಂಡನೆಗೆ ಅರ್ಹರಾಗುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT