ಎಂ.ವಿ.ಗಾಡದ
ಶಿಗ್ಗಾವಿ: ‘ಏನಾಗಲಿ ಮುಂದೆ ಸಾಗು ನೀ’ ಎಂಬಂತೆ ಮಳೆ, ಗಾಳಿ, ಚಳಿ ಏನೇ ಬಂದರೂ ಕಾಯಕವನ್ನು ನಿಲ್ಲಿಸದೆ, ಓದುಗರ ಮನೆ ಬಾಗಿಲಿಗೆ ಪತ್ರಿಕೆ ತಲುಪಿಸುವಲ್ಲಿ ನಿರತರಾಗಿದ್ದಾರೆ ಪತ್ರಿಕಾ ವಿತರಕರು.
ನಿತ್ಯ ಬೆಳಿಗ್ಗೆ ಮನೆ, ಕಚೇರಿಗಳಿಗೆ ದೇಶ– ವಿದೇಶ, ರಾಜ್ಯ–ಸ್ಥಳೀಯ ಸಮಾಚಾರಗಳನ್ನೊಳಗೊಂಡ ಸುದ್ದಿ ಪತ್ರಿಕೆಗಳನ್ನು ವಿತರಿಸುತ್ತಾರೆ ಈ ‘ಕಾಯಕ ಜೀವಿ’ಗಳು. ಸೆಪ್ಟೆಂಬರ್ 4 ಪತ್ರಿಕಾ ವಿತರಕರ ದಿನ. ಈ ಸುಸಂದರ್ಭದಲ್ಲಿ ಸುದ್ದಿ ಸಮಾಚಾರವನ್ನು ಮನೆ–ಮನಗಳಿಗೆ ತಲುಪಿಸುವ ಈ ಸೇನಾನಿಗಳಿಗೆ ಸಲಾಂ ಹೇಳುವುದು ನಮ್ಮೆಲ್ಲರ ಕರ್ತವ್ಯ.
ನಿತ್ಯ ನಸುಕಿನ 4.30ರ ವೇಳೆಗೆ ಎದ್ದು ಸೈಕಲ್, ಬ್ಯಾಗ್ ಸಿದ್ಧ ಮಾಡಿಕೊಂಡು ಮನೆಯಿಂದ ಹೊರಡುತ್ತಾರೆ. ನಗರ, ಪಟ್ಟಣ ಅಥವಾ ಹಳ್ಳಿಗಳ ಬಸ್ ನಿಲ್ದಾಣ ಅಥವಾ ಪತ್ರಿಕೆಗಳ ವಾಹನಗಳು ಬರುವ ಕಡೆ ನಿಲ್ಲುತ್ತಾರೆ. ನಂತರ ಪತ್ರಿಕೆಗಳನ್ನು ಪ್ರತ್ಯೇಕಿಸಿ ಮನೆ ಮನೆಗಳಿಗೆ ತಲುಪಿಸುತ್ತಾರೆ. ಇದು ಇವರ ನಿತ್ಯ ಕಾಯಕ.
ಈ ಹಿಂದಿನಿಂದಲೂ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಯುವ ಸಮುದಾಯ ಪತ್ರಿಕಾ ವಿತರಕರಾಗಿ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಿರಿಯ ನಾಗರಿಕರು ಸಹ ಈ ವೃತ್ತಿಯಲ್ಲಿ ತೊಡಗಿದ್ದಾರೆ. ಈ ಎಲ್ಲ ವರ್ಗದರಿಗೆ ಇದು ಪಾರ್ಟ್ ಟೈಂ ಉದ್ಯೋಗದ ಜೊತೆಗೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉಲ್ಲಸಿತವಾಗಿಡುತ್ತದೆ.
‘ಕಳೆದ 21 ವರ್ಷಗಳಿಂದ ಪ್ರತಿಕಾ ಏಜೆಂಟರಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಸಾಕಷ್ಟು ಕಷ್ಟ–ನಷ್ಟಗಳನ್ನು ಎದುರಿಸಿಕೊಂಡು ಬಂದಿರುವೆ. ಇದು ಲಾಭದಾಯಕ ಕೆಲಸವಲ್ಲ. ಇದರಲ್ಲಿ ಸಮಾಜಕ್ಕಾಗಿ ನಮ್ಮ ಕೊಡುಗೆ ಎಂಬ ವಿಚಾರ ಮುಖ್ಯವಾಗಿದೆ’ ಎನ್ನುತ್ತಾರೆ ಹಾನಗಲ್ ಪತ್ರಿಕಾ ವಿತರಕ ಗುರುಮೂರ್ತಿ ಹೆಗಡೆ
ಓದುಗರ ಮನಗೆದ್ದ ಪತ್ರಿಕೆ: ‘ಪ್ರಜಾವಾಣಿ ಓದುಗರ ಮನಸ್ಸು ಮುಟ್ಟುವ ಪತ್ರಿಕೆಯಾಗಿದ್ದು, ಎಲ್ಲ ಕ್ಷೇತ್ರಗಳ ವಿಷಯಗಳು ನಿತ್ಯ ಪ್ರಕಟವಾಗುತ್ತವೆ. ಬೆಳಗಾದರೆ ಸಾಕು ಟೀ–ಕಾಫಿ ಕುಡಿಯುವ ಮುನ್ನ ಪತ್ರಿಕೆ ಮುಂದೆ ಇರಬೇಕು ಎನ್ನುವ ಗ್ರಾಹಕರು ಬಳಷ್ಟಿದ್ದಾರೆ. ಹೀಗಾಗಿ ಇಂತಹ ಓದುಗರ ಮುಂದೆ ನಮ್ಮೆಲ್ಲ ಕಷ್ಟಗಳು ದೂರಾಗುತ್ತವೆ. ವಿದ್ಯಾರ್ಥಿಗಳ ಸಾಧನೆಗೆ ಬೆಂಬಲವಾಗಿದೆ’ ಎಂದು ಸವಣೂರ ಪಟ್ಟಣದ ಏಜೆಂಟ್ ಆನಂದ ಬಡ್ನಿ ಅನಿಸಿಕೆ ವ್ಯಕ್ತಪಡಿಸಿದರು.
‘ಸಮಾಜದಲ್ಲಿ ಅಂಕು-ಡೊಂಕುಗಳನ್ನು ತಿದ್ದಿ, ಸುಂದರ, ಸದೃಢ ಸಮಾಜ ನಿರ್ಮಾಣದತ್ತ ಸಾಗುವ ಪತ್ರಿಕೆ ಕಾಯಕದ ಬಗ್ಗೆ ಓದುಗರ ಮೆಚ್ಚುಗೆ ತೃಪ್ತಿ ತಂದಿದೆ. ಲಾಭ, ನಷ್ಟಕ್ಕಿಂತ ಸಮಾಜಕ್ಕೆ ನಮ್ಮದೇಯಾದ ಕೊಡುಗೆ ನೀಡುವ ಸೇವಾ ಭಾವನೆ ಮುಖ್ಯವಾಗುತ್ತದೆ’ ಎಂದು ರಾಣೆಬೆನ್ನೂರು ತಾಲ್ಲೂಕು ಮಾಕನೂರಿನ ಪರಮೇಶಪ್ಪ ಹೊರಕೇರಿ ಹೇಳಿದರು.
‘ಆರೋಗ್ಯದ ಜತೆಗೆ ಆರ್ಥಿಕ ಪ್ರಬಲತೆಗಾಗಿ ಪತ್ರಿಕಾ ವಿತರಣೆ ಕಾಯಕ ಮುಖ್ಯವಾಗಿದೆ. ಹೀಗಾಗಿ ಕಳೆದ 15 ವರ್ಷಗಳಿಂದ ಪ್ರತಿಕೆಗಳನ್ನು ವಿತರಿಸುವ ಕೆಲಸದಲ್ಲಿ ನಿರತನಾಗಿದ್ದೇನೆ. ಈ ಕಾಯಕ ನನಗೆ ತೃಪ್ತಿ ತಂದಿದೆ’ ಎಂದರು ಶಿಗ್ಗಾವಿ ತಾಲ್ಲೂಕಿನ ಹುಲಗೂರಿನ ಪತ್ರಿಕಾ ವಿತರಕ ರಮೇಶ ಕೆರಿ.
‘ಸಂತೃಪ್ತಿ ಆರ್ಥಿಕ ಚೈತನ್ಯ ನೀಡಿದ ಕಾಯಕ’ ‘ಎರಡು ವರ್ಷಗಳಿಂದ ಪತ್ರಿಕೆಗಳನ್ನು ವಿತರಿಸುತ್ತಾ ಬಂದಿದ್ದು ಶ್ರಮದ ಹಿಂದೆ ಫಲವಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ. ದಿನಪತ್ರಿಕೆ ಕೊಡುವವರಿಗೆ ಸುದ್ದಿ ಪತ್ರಿಕೆಯಾದರೆ ಓದುಗರಿಗೆ ಜ್ಞಾನ ಭಂಡಾರದ ಸುದ್ದಿ ಸಮಾಚಾರ ತರುವ ಓಲೆಯಾಗಿದೆ’ ಎನ್ನುತ್ತಾರೆ ಹಿರೇಕೆರೂರು ಪತ್ರಿಕಾ ವಿತರಕ ಮುರಗೇಶ ಬಣಕಾರ. ‘ಪ್ರಜಾವಾಣಿ’ ಪತ್ರಿಕೆ ಜನಮನ ಗೆದ್ದಿದ್ದು ಉತ್ತಮ ಸ್ಥಾನಮಾನಗಳನ್ನು ತಂದುಕೊಡುವ ಆತ್ಮ ಸಂತೋಷ ನೀಡಿದೆ. ಹೀಗಾಗಿ ಪತ್ರಿಕಾ ವಿತರಣೆಯನ್ನು ಕಳೆದ 5 ವರ್ಷಗಳಿಂದ ಮಾಡುತ್ತಿದ್ದೇನೆ. ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎನ್ನುತ್ತಾರೆ ಬ್ಯಾಡಗಿ ಪತ್ರಿಕಾ ಏಜೆಂಟ್ ಟಿಪ್ಪುಸುಲ್ತಾನ ಹುಲಮನಿ. ‘ಕಳೆದ 58 ವರ್ಷಗಳಿಂದ ಪ್ರತಿಕಾ ವಿತರಕರಾಗಿ ಸೇವೆ ಮಾಡುತ್ತಿದ್ದು ಸಾರ್ವಜನಿಕರ ವಲಯದಲ್ಲಿ ಓದುಗರ ಸಹಕಾರದಿಂದ ಪತ್ರಿಕೆಗಳ ಸಂಖ್ಯೆ ಹೆಚ್ಚಳವಾಗಿದೆ. ಅದರಿಂದ ಆರ್ಥಿಕ ಸದೃಢತೆ ಹೊಂದಲು ಸಾಧ್ಯವಾಗಿದೆ. ಮೌಲ್ಯಾಧಾರಿತ ಬದುಕಿಗಾಗಿ ಪತ್ರಿಕಾ ವಿತರಣಾ ಕಾಯಕ ತೃಪ್ತಿ ತಂದಿದೆ’ ಎಂದರು ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಏಜೆಂಟ್ ಗಣಪತಿ ಭಟ್. ‘ಮಹಿಳೆಯರಿಗೆ ಮಕ್ಕಳಿಗೆ ಮತ್ತು ಆರೋಗ್ಯಕರ ಶಿಕ್ಷಣ ಕೃಷಿ ಚಟುವಟಿಕೆಗಳ ಸೇರಿದಂತೆ ವಿವಿಧ ಕ್ಷೇತ್ರದ ಕುರಿತು ವಿಶೇಷ ಲೇಖನಗಳು ಅಂಕಣಗಳು ಓದುಗರ ಮನ ಸೆಳೆಯುತ್ತಿವೆ. ಇದರಿಂದಾಗಿ ಪತ್ರಿಕೆ ವ್ಯಕ್ತಿಯ ವ್ಯಕ್ತಿತ್ವ ಬೆಳವಣಿಗೆ ಜತೆಗೆ ಸದೃಢ ಸಮಾಜ ನಿರ್ಮಾಣ ಮಾಡುವ ಮಾರ್ಗದರ್ಶಿಯಾಗಿದೆ’ ಎಂದು ಗುತ್ತಲದ ಏಜೆಂಟ್ ಸತೀಶ ಹಿರೇಮಠ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.