ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯಕ್ಕೆ ಘರ್ಷಣ ಭಾವ ತಂದ ಕವಿ ಸಿದ್ಧಲಿಂಗಯ್ಯ

Last Updated 11 ಜೂನ್ 2021, 19:30 IST
ಅಕ್ಷರ ಗಾತ್ರ

ಹಾವೇರಿ: ಖ್ಯಾತ ಕವಿ ಸಿದ್ಧಲಿಂಗಯ್ಯ ಇನ್ನಿಲ್ಲ ಎಂದು ಕೇಳಿದಾಗ ತಟ್ಟನೆ ಕಣ್ಣಹನಿ ಒಡೆದವು. 1979ರಿಂದ ಬಂಡಾಯ ಸಾಹಿತ್ಯ ಸಂಘಟನೆ ಮತ್ತು ಚಳವಳಿಯ ಮೂಲಕ ಕೂಡಿ ಬೆಳೆದ ನನ್ನಂಥವರಿಗೆ ಇದೊಂದು ದೊಡ್ಡ ಆಘಾತ.

ಸತತ ನಾಲ್ಕು ದಶಕಗಳ ಕಾಲದ ಸ್ನೇಹ ಇಷ್ಟು ಬೇಗನೆ ಮುಗಿದದ್ದು ಬೇಸರ ತಂದಿತು. ಯಾರೇ ಕವಿಗಳೇ ಎಂದು ಹೇಳಿದಾಗ ಸಿದ್ಧಲಿಂಗಯ್ಯ ಕಣ್ಣೆದುರು ಬರುತ್ತಿದ್ದರು. ಅಂತಹದೊಂದು ಛಾಪನ್ನು ಎಲ್ಲರ ಮನಸ್ಸಿನಲ್ಲಿ ಬಿತ್ತಿದ್ದರು. ಅಧಿಕಾರ, ಸ್ಥಾನಮಾನ, ಜನಪ್ರೀತಿ ಎಲ್ಲದರ ನಡುವೆ ಯಾರ ಸ್ನೇಹವನ್ನೂ ಕಡೆದುಕೊಳ್ಳದ ಸಿದ್ಧಲಿಂಗಯ್ಯ, ಎಷ್ಟೇ ವಿಚಾರ ಅಭಿಪ್ರಾಯ ಭೇದಗಳು ಇದ್ದಾಗಲೂ ಅವರ ಒಂದು ಮಗು ನಗು ಎಲ್ಲವನ್ನು ಮರೆಸಿ ಬಿಡುತ್ತಿತ್ತು.

1979 ಮಾರ್ಚ 9, 10 ಹಾಗೂ 11ರಂದು ಬೆಂಗಳೂರಿನಲ್ಲಿ ನಡೆದ ಮೊದಲ ಬಂಡಾಯ ಸಾಹಿತ್ಯ ಸಮ್ಮೇಳನದ ದಿನದಿಂದ ಕಂಡು ನೋಡಿ ಕೂಡಿ ಬೆಳೆದ ಪ್ರೀತಿ ವಿಶ್ವಾಸ ನಮ್ಮವು. ಜನರಿಂದ ದೂರ ಸರಿದು ಯಾವುದೋ ಒಂದು ಭ್ರಮಿಕ ಸುಳಿಗೆ ಕನ್ನಡ ಕಾವ್ಯ ಸಿಕ್ಕಾಗ ಅದಕ್ಕೊಂದು ಹೊಸ ಲೋಕ, ಹೊಸ ವಿಸ್ತಾರ ಕಟ್ಟಿ ಟ್ರೆಂಡ್‌ ಸೃಷ್ಟಿ ಮಾಡಿದವರು ಕವಿ ಸಿದ್ಧಲಿಂಗಯ್ಯ.

ಚಮತ್ಕಾರಿಕ ತರ್ಕ, ತಾತ್ವಿಕ ಸ್ಪರ್ಶ, ಹೋರಾಟದ ಕಿಚ್ಚು, ಮೈ ಮನಸ್ಸಿಗೆ ಹಚ್ಚುವ ಬೆಂಕಿ ಕಾವಿನ ಕಾವ್ಯ ಬರೆದವರು. ಒಮ್ಮೆ ಓದಿದರೆ ಸಾಕು ಮರೆಯಲಾಗದ್ದು, ಒಮ್ಮೆ ಕೇಳಿದರೆ ಸಾಕು ನಿರಂತರವಾಗಿ ಮೈ ಮನದಲ್ಲಿ ಗುಂಯ್‌ ಗುಡುವ ಕಾವ್ಯ ಶೈಲಿಯದು.

ನಾಡಿನ ನೂರಾರು ಸಂಘಟನೆಗಳ ದಲಿತ, ಸಮುದಾಯ, ಬಂಡಾಯ ಹಾಗೂ ಎಲ್ಲ ಜನಪರ ಹಾಡುಗಾರರು ಅವರ ಸಾಲುಗಳನ್ನು ಹಾಡಿದ್ದರು. ಗಟ್ಟಿ ಸಾಲುಗಳು ಅವುಗಳ ಹಿಂದೆ ನುಡಿದು ಗಿಜುಗುಡುತ್ತಿದ್ದ ತಮಟೆಯ ಲಯ, ಯಾವ ಕಾಲಕ್ಕೂ ಮರೆಯಲಾಗುವುದಿಲ್ಲ. ನಾಲ್ಕಾರು ಕವನ ಸಂಕಲನಗಳೇ ಅವರ ಇಡೀ ಕನ್ನಡ ಕಾವ್ಯ ಲೋಕ ಕಣ್ಬಿಟ್ಟು ನೋಡುವಷ್ಟು ಸಶಕ್ತ.

2018ರಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ (ದೆಹಲಿ) ಕನ್ನಡ ಭಾಷಾ ಸಲಹಾ ಸಮಿತಿಯ ಸದಸ್ಯನಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ಸಮಿತಿಗೆ ಕರ್ನಾಟಕದ ಸಂಚಾಲಕರು ಅವರೇ ಆಗಿದ್ದರು. ಡಾ.ಚಂದ್ರಶೇಖರ ಕಂಬಾರರ ಅಧ್ಯಕ್ಷತೆಯಲ್ಲಿ ನಾನು, ಡಾ.ಸರಜೂ ಕಾಟ್ಕರ, ಡಾ.ಬಾಳಾ ಸಾಹೇಬ ಲೋಕಾಪೂರ , ಮನು ಬಳಿಗಾರ, ಎಚ್.ಎಸ್. ಶಿವಪ್ರಕಾಶ ಹಾಗೂ ಪದ್ಮಿನಿ ನಾಗರಾಜ ಸದಸ್ಯರಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದೆವು. ಜನವರಿ 25, 2020 ಅವರ ಕೊನೆ ಭೇಟಿ ಅಕಾಡೆಮಿಯ ಸಭೆಯಲ್ಲಿ ಆಗಿತ್ತು. ಆನಂತರ ಒಂದೇ ಒಂದು ವರ್ಚುವಲ್ ಮೀಟಿಂಗ್‌ ನಡೆದಿತ್ತು.

ನಕ್ಕು ನಗಿಸಿ ಗಂಭೀರವಾಗಿ ನಡೆದು ಬರುತ್ತಿದ್ದ ಸಿದ್ಧಲಿಂಗಯ್ಯನವರ ವ್ಯಕ್ತಿತ್ವ ಮತ್ತು ಕಾವ್ಯ ಪ್ರಭಾವ ಇಂದಿಗೂ ಗಾಢವಾಗಿ ಆವರಿಸಿದೆ. ನಿನ್ನೆ ದಿನ, ನನ್ನ ಜನ ಬೆಟ್ಟದಂತೆ ಬಂದರು/ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು- ಈ ಸಾಲುಗಳನ್ನು ಶೂದ್ರ ಪತ್ರಿಕೆಯಲ್ಲಿ ಮೊದಲ ಬಾರಿಗೆ ಓದಿದಾಗ ರೋಮಾಂಚನಗೊಂಡಿದ್ದೆ. ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ, ಹಸಿವಿನಿಂದ ಸತ್ತವರು ಸೈಜುಗಲ್ಲು ಹೊತ್ತೋರು ಭಕ್ತರಪ್ಪ ಭಕ್ತರೊ– ಈ ಎಲ್ಲ ಹಾಡುಗಳು ಮೈ ಮನ ಸುಳಿಯಲ್ಲಿ ಈಗಲೂ ಸುಳಿಯುತ್ತಿವೆ ಎಂದು ಹಳೆಯ ನೆನಪುಗಳನ್ನು ಬಿಚ್ಚಿಟ್ಟರು.

ಕಾವ್ಯಕ್ಕೊಂದು ಘರ್ಷಣ ಭಾವ ತಂದು, ಅಗ್ರಹಾರ ಪರಂಪರೆಯ ಹಿನ್ನೆಲೆಯಿಂದ ಬಂದ ನನ್ನಂಥವರಿಗೆ ಅರಿವಿನ ಬೀಜ ಸಾಮಾಜಿಕ ನಿಜ ಚಿತ್ರಗಳನ್ನು ತೋರಿಸಿದ ಕವಿ. ಅವರ ಎಂ.ಎಲ್.ಸಿ ಯಾನ, ಅಮಿತಾ ಶಾ ಭೇಟಿ, ಸಿನಿಮಾದ ಪ್ರೀತಿ ಪ್ರೇಮದ ಹಾಡುಗಳ ಬರೆದಾಗ ಒಂದಿಷ್ಟು ಬೇಸರವೂ ಆಗಿತ್ತು.

ಆದರೆ, ಆ ಪುಟ್ಟ ನಾಲ್ಕು ಫೂಟಿನ ಕವಿ ಭೇಟಿಯಾದಗಲೆಲ್ಲ ನುಚ್ಚು ನೂರಾಗುತ್ತಿದ್ದವು. ಕೋಟ್ಯಂತರ ಜನರ ಕಣ್ಮಣಿಯಾಗಿದ್ದ ಕವಿ ಸಿದ್ಧಲಿಂಗಯ್ಯ ಕೋವಿಡ್ ಎಂಬ ಕರಾಳ ಕಾಲದಲ್ಲಿ ಮುಖ ತೋರಿಸದೆ ಮರೆಯಾದದ್ದು ಕಾಲದ ವಿಡಂಬನೆಯಾಗಿದೆ. ನಮಗೆ ಸೊಕ್ಕು ಇದ್ದಂತೆ ಕಾಲಕ್ಕೂ ಮಣಿಸುವ ತಾಕತ್ತು ಇದೆ ಎಂದು ಕೋವಿಡ್‌ ತೋರಿಸಿದೆ.

(ಲೇಖಕರು: ಬಂಡಾಯ ಕವಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT