ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಕಾಮಗಾರಿ: ಕ್ರೀಡಾಪಟುಗಳಿಗೆ ಕಿರಿಕಿರಿ

ನಿರ್ವಹಣೆ ಇಲ್ಲದೇ ಪಾಳುಬಿದ್ದ ಮೈದಾನ: ಮಳೆ ಬಂದರೆ ಸೋರುವ ಒಳಾಂಗಣ ಕ್ರೀಡಾಂಗಣ
Last Updated 20 ಮೇ 2022, 19:30 IST
ಅಕ್ಷರ ಗಾತ್ರ

ಹಾವೇರಿ: ಯುವಜನರ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಸಲು ನೆರವಾಗಬೇಕಾದ ‘ಸಿಎಂ ತವರು ಕ್ಷೇತ್ರ’ದ ತಾಲ್ಲೂಕು ಕ್ರೀಡಾಂಗಣವೇ ಸೌಕರ್ಯ ಮತ್ತು ನಿರ್ವಹಣೆಯ ಕೊರತೆಯಿಂದ ಬಳಲುತ್ತಿದೆ.

ಪಟ್ಟಣದ ಹುಲಗೂರ ರಸ್ತೆಯಲ್ಲಿನ ಶಿಗ್ಗಾವಿಯ ತಾಲ್ಲೂಕು ಕ್ರೀಡಾಂಗಣಒಟ್ಟು 6 ಎಕರೆ 23 ಗುಂಟೆ ವಿಸ್ತೀರ್ಣ ಹೊಂದಿದೆ. ಈ ಕ್ರೀಡಾಂಗಣದಲ್ಲಿ ಅಥ್ಲೆಟಿಕ್‌ ಟ್ರ್ಯಾಕ್‌ ಮತ್ತು ಯಾವುದೇ ಕ್ರೀಡಾ ಅಂಕಣಗಳು ಇರುವುದಿಲ್ಲ. ಇದರಿಂದ ಕ್ರೀಡಾ ಚಟುವಟಿಕೆಗಳಿಗೆ ತೀವ್ರ ಧಕ್ಕೆಯಾಗಿದೆ.

ಪೆವಿಲಿಯನ್‌ ಕಟ್ಟಡ ಅತ್ಯಂತ ದುಸ್ಥಿತಿಯಲ್ಲಿದೆ. ವಿದ್ಯುತ್‌ ಸೌಲಭ್ಯ ಮತ್ತು ಫೆಡ್‌ಲೈಟ್‌ ಅಳವಡಿಕೆ ಕಾರ್ಯ ಇದುವರೆಗೂ ಅನುಷ್ಠಾನಗೊಂಡಿಲ್ಲ. ಮೂಲಸೌಕರ್ಯಗಳಿಂದ ವಂಚಿತವಾದ ಈ ಕ್ರೀಡಾಂಗಣ ಹೆಸರಿಗಷ್ಟೇ ಎಂಬಂತಿದೆ.

ಒಬ್ಬನೇ ಕಾವಲುಗಾರ:

ಶಿಗ್ಗಾವಿ ತಾಲ್ಲೂಕು ಕ್ರೀಡಾಂಗಣದ ಕೋಟ್ಯಂತರ ರೂಪಾಯಿ ಆಸ್ತಿಯನ್ನು ನೋಡಿಕೊಳ್ಳಲು ಮತ್ತು ನಿರ್ವಹಣೆ ಮಾಡಲು ಒಬ್ಬನೇ ಕಾವಲುಗಾರನಿದ್ದಾನೆ. ಆತನೇ ಹಗಲು–ರಾತ್ರಿ ಸೇರಿ ದಿನದ 24 ಗಂಟೆ ನಿರ್ವಹಣೆ ಮಾಡಬೇಕಿದೆ. ಸಿಬ್ಬಂದಿ ಕೊರತೆಯಿಂದ ಕ್ರೀಡಾಂಗಣವನ್ನು ಉತ್ತಮವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕ್ರೀಡಾ ಇಲಾಖೆ ಅಧಿಕಾರಿಗಳು ಅಸಹಾಯಕತೆ ತೋಡಿಕೊಂಡಿದ್ದಾರೆ.

ಕಳಪೆ ಕಾಮಗಾರಿ ಆರೋಪ:

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ 2017ರಲ್ಲಿ ‘ಒಳಾಂಗಣ ಕ್ರೀಡಾಂಗಣ’ವನ್ನು ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನಿರ್ಮಾಣವಾದ ಒಂದೆರಡು ವರ್ಷಗಳಲ್ಲೇಗೋಡೆಗಳು ಸಂಪೂರ್ಣ ಬಿರುಕು ಬಿಟ್ಟಿವೆ. ಮಳೆ ಬಂದರೆ ಚಾವಣಿ ಸೋರುತ್ತದೆ. ಗೋಡೆಗಳ ಮೇಲೆ ನೀರು ಜಿನುಗುತ್ತದೆ. ಹೀಗಾಗಿ ಒಳಾಂಗಣ ಕ್ರೀಡಾಂಗಣ ಅತ್ಯಂತ ದುಸ್ಥಿತಿಯಲ್ಲಿದೆ ಎಂದು ಕ್ರೀಡಾಪಟುಗಳು ದೂರಿದರು.

ಕ್ರೀಡಾಪಟುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ನಿರ್ವಹಣೆ ಮಾಡಲು ಸಿಬ್ಬಂದಿ ಕೊರತೆ ಕಾಡುತ್ತಿದೆ. ಇಲಾಖೆಯಿಂದ ನಿರ್ವಹಿಸಲು ಹೊರಗುತ್ತಿಗೆ ನೀಡಲು 2 ಬಾರಿ ಆನ್‌ಲೈನ್‌ ಮೂಲಕ ಟೆಂಡರ್ ಪ್ರಕಟಿಸಿದರೂ ಈವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹೀಗಾಗಿ ಇಲ್ಲಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

‘ಹೊರಾಂಗಣ ಕ್ರೀಡಾಂಗಣದಲ್ಲಿ ಸಾರ್ವಜನಿಕರು ದನಕರುಗಳನ್ನು ಮೇಯಿಸಲು ಬಿಡುತ್ತಿದ್ದಾರೆ. ಕ್ರೀಡಾಂಗಣದ ಸುತ್ತ ವಾಸಿಸುವ ಜನರು ಕಸಕಡ್ಡಿ ತ್ಯಾಜ್ಯ ವಸ್ತುಗಳನ್ನು ಮೈದಾನದಲ್ಲಿ ಸುರಿಯುತ್ತಿದ್ದಾರೆ. ಅದರಿಂದ ದುರ್ವಾಸನೆ ಹರಡುತ್ತಿದೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ಮದ್ಯದ ಬಾಟಲಿಗಳು, ಪ್ಲಾಸ್ಟಿಕ್‌ ಚೀಲಗಳು ಎಲ್ಲೆಡೆ ಹರಡಿವೆ.ಇನ್ನು ಕೆಲವರು ಮೈದಾನದಲ್ಲೇ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಕ್ರೀಡಾಪಟುಗಳು ಆಗ್ರಹಿಸಿದ್ದಾರೆ.

‘ಕ್ರೀಡಾಂಗಣದ ಕಾಂಪೌಂಡ್‌ ಎತ್ತರಿಸಿ, ಅದರ ಮೇಲೆ ತಂತಿ ಬೇಲಿ ಹಾಕಬೇಕು. ಕ್ರೀಡಾಪಟುಗಳಿಗೆ ಸಾಕಷ್ಟು ಆಟದ ಸಾಮಗ್ರಿಗಳನ್ನು ವಿತರಿಸಬೇಕು. ಕನಿಷ್ಠ ಮೂವರು ಕಾವಲುಗಾರರನ್ನು ನೇಮಿಸಬೇಕು. ಜಿಲ್ಲೆ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಗಳನ್ನು ಏರ್ಪಡಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು’ ಎಂದು ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಕಬಡ್ಡಿ ಕ್ರೀಡಾಪಟು ರಮೇಶ ಇಂಗಳಗಿ ಒತ್ತಾಯಿಸಿದರು.

***

ಕ್ರೀಡಾಂಗಣದಲ್ಲಿ ವಿದ್ಯುತ್ ದೀಪವಿಲ್ಲ, ಕುಡಿಯುವ ನೀರಿಲ್ಲ, ಶೌಚಾಲಯವಿಲ್ಲ. ಹೀಗಾಗಿ ಕ್ರೀಡಾಪಟುಗಳು ಕ್ರೀಡಾಂಗಣಕ್ಕೆ ಬರಲು ಹಿಂಜರಿಯುತ್ತಾರೆ
– ಸಾಧಿಕ್‌ ಸವಣೂರ, ಕ್ರಿಕೆಟ್‌ ತರಬೇತುದಾರ

***

ಒಳಾಂಗಣ ಕ್ರೀಡಾಂಗಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಧ್ವಜದ ಕಟ್ಟೆ ಇಂದು ನಾಳೆ ಬೀಳುವಂತಾಗಿದೆ. ಮೆಟ್ಟಿಲುಗಳು ಒಡೆದು ಹಾಳಾಗಿವೆ

– ಉಮೇಶ ಗೌಳಿ, ಶಿಗ್ಗಾವಿ ಸ್ಪೋರ್ಟ್ಸ್‌ ಕ್ಲಬ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT