ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಫೋನ್‌ ಇನ್ | ಚರ್ಮದ ಆರೋಗ್ಯಕ್ಕೆ ಪೌಷ್ಟಿಕ ಆಹಾರವೇ ಮದ್ದು

ಚರ್ಮರೋಗ ತಜ್ಞ ಡಾ.ರಾಘವೇಂದ್ರ ಜಿಗಳಿಕಪ್ಪ ಅಭಿಮತ
Last Updated 30 ಜೂನ್ 2020, 11:01 IST
ಅಕ್ಷರ ಗಾತ್ರ

ಹಾವೇರಿ: ಪೌಷ್ಟಿಕ ಆಹಾರ ಮತ್ತು ಕ್ರಮಬದ್ಧ ಜೀವನ ಶೈಲಿಯಿಂದ ನಿಮ್ಮ ತ್ವಚೆಯ ಸೌಂದರ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದು ಚರ್ಮರೋಗ ತಜ್ಞ ಡಾ.ರಾಘವೇಂದ್ರ ಜಿಗಳಿಕೊಪ್ಪ ಅವರ ಸ್ಪಷ್ಟ ಅಭಿಮತ.

ಸಿಹಿ ತಿಂಡಿ ಮತ್ತು ಎಣ್ಣೆ ಪದಾರ್ಥಗಳನ್ನು ಆದಷ್ಟೂ ಕಡಿಮೆ ಮಾಡಿ, ‘ಸಿ’ ವಿಟಮಿನ್‌ ಇರುವ ಪದಾರ್ಥಗಳನ್ನು ಹೆಚ್ಚು ಸೇವಿಸುವ ಮೂಲಕ ನಿಮ್ಮ ಚರ್ಮವನ್ನು ಕಾಂತಿಯುತವಾಗಿಟ್ಟುಕೊಳ್ಳಬಹುದು. 45 ನಿಮಿಷದ ವ್ಯಾಯಾಮ, ನಿತ್ಯ ಸ್ನಾನ, ಶುಭ್ರ ಬಟ್ಟೆ ಧರಿಸುವ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ವಿಶೇಷವಾಗಿ ನಿತ್ಯ 4ರಿಂದ 5 ಲೀಟರ್‌ ನೀರು ಕುಡಿಯುವುದರಿಂದ ಚರ್ಮ ಒಣಗುವುದನ್ನು ತಪ್ಪಿಸಿ, ತ್ವಚೆಯ ತಾಜಾತನ ಉಳಿಸಿಕೊಳ್ಳಬಹುದು ಎಂಬುದು ಅವರ ಸ್ಪಷ್ಟನುಡಿ.

* ಶಾಂತಾ, ಕರ್ಜಗಿ: 2 ತಿಂಗಳಿಂದ ‘ಗಜಕರ್ಣ’ ಸಮಸ್ಯೆ ಕಾಡುತ್ತಿದೆ. ಪರಿಹಾರ ತಿಳಿಸಿ?

– ಗಜಕರ್ಣ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗ. ನೀವು ಬಿಗಿ ಮತ್ತು ಒದ್ದೆ ಬಟ್ಟೆ ಧರಿಸಬೇಡಿ. ಬಟ್ಟೆಯನ್ನು ಬಿಸಿ ನೀರಿನಿಂದ ತೊಳೆಯುವುದರಿಂದ ಫಂಗಸ್‌ ಸಾಯುತ್ತವೆ. ನೀವು ಸೇರಿದಂತೆ ನಿಮ್ಮ ಮನೆಯಲ್ಲಿ ಇತರರಿಗೆ ಗಜಕರ್ಣ ಹರಡಿದ್ದರೆ ವೈದ್ಯರ ಬಳಿ ತೋರಿಸಿ, ಚಿಕಿತ್ಸೆ ಪಡೆಯಿರಿ.

‌* ಲಲಿತಾ, ಹಾವೇರಿ: ಹಣೆಯಲ್ಲಿ ಕುಂಕುಮ ಹಚ್ಚಿಕೊಂಡರೆ ‘ತುರಿಕೆ’ ಬರುತ್ತದೆ?

– ಶೇ 30ರಷ್ಟು ಹೆಣ್ಣುಮಕ್ಕಳಿಗೆ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ. ಕುಂಕುಮದಲ್ಲಿ ‘ಅರ್ಸೆನಿಕ್’‌ ಅಂಶ ಇರುವುದರಿಂದ ಈ ರೀತಿಯ ತುರಿಕೆ ಕಾಣಿಸುತ್ತದೆ.ಹಾಗಾಗಿ ಮೆಡಿಕಲ್‌ ಸ್ಟೋರ್‌ಗಳಲ್ಲಿ ಸಿಗುವ ಅರ್ಸೆನಿಕ್‌ ರಹಿತ ಕುಂಕುಮ ಬಳಸಿ. ರೆಡ್‌ ಕಲರ್‌ ಲಿಪ್‌ಸ್ಟಿಕ್‌ ಅನ್ನು ಕೂಡ ಕುಂಕುಮದ ರೀತಿ ಬಳಸಬಹುದು.

* ಸುಲೇಮಾನ್‌, ಹತ್ತಿಮತ್ತೂರು, ಸವಣೂರು: ಮೈ ಕಡಿತ ಮತ್ತು ಗಂಧೆ ಸಮಸ್ಯೆಗೆ ಪರಿಹಾರ ತಿಳಿಸಿ?

– ಹಸಿಮೆಣಸಿನಕಾಯಿ, ಬದನೆಕಾಯಿ, ನುಗ್ಗೇಕಾಯಿ ಮುಂತಾದ ಪದಾರ್ಥಗಳನ್ನು ಸೇವಿಸಿದಾಗ ಕೆಲವರಿಗೆ ಮೈಯಲ್ಲಿ ತುರಿಕೆ ಕಾಣಿಸುತ್ತದೆ. ಕೆಲವರಿಗೆ ಅತಿ ತಂಪಾದ ಮತ್ತು ಅತಿ ಬಿಸಿಯಾದ ಆಹಾರ ಸೇವಿಸಿದಾಗಲೂ ಈ ಸಮಸ್ಯೆ ಕಾಡುತ್ತದೆ. ಯಾವ ಆಹಾರದಿಂದ ಈ ರೀತಿ ಆಗುತ್ತದೆ ಎಂಬುದನ್ನು ಪತ್ತೆ ಹಚ್ಚಿ. ಅಂಥ ಆಹಾರವನ್ನು 3 ತಿಂಗಳು ಬಿಟ್ಟುಬಿಡಿ. ನಂತರವೂ ಸಮಸ್ಯೆ ಕಾಡಿದರೆ, ರಕ್ತ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಪಡೆಯಿರಿ.

* ಗುರುಲಿಂಗಪ್ಪ ಹುಲ್ಲಾಳ ವರ್ದಿ, ಬಿ.ಎಫ್‌.ಹೂಗಾರ ಕರ್ಜಗಿ: ಕಪ್ಪು ಕಲೆ, ಒಣ ಇಸುಬು ಸಮಸ್ಯೆಗೆ ಪರಿಹಾರ ನೀಡಿ...

– 50 ವರ್ಷ ಮೇಲ್ಪಟ್ಟವರಿಗೆ ಚರ್ಮದಲ್ಲಿನ ತೇವಾಂಶ ಕಡಿಮೆ ಆಗಿ ‘ಒಣ ಇಸುಬು’ ಸಮಸ್ಯೆ ತಲೆದೋರುತ್ತದೆ. ಹಾಗಾಗಿ ಸ್ನಾನವಾದ ನಂತರ ಕೊಬ್ಬರಿ ಎಣ್ಣೆ ಹಚ್ಚಿ. ನೀರನ್ನು ಜಾಸ್ತಿ ಕುಡಿಯಲು ಕೊಡಿ. 5.5 ಪಿ.ಎಚ್‌. ಇರುವ ಸಾಬೂನು ಬಳಸಿ. ಎಣ್ಣೆ ಪದಾರ್ಥ ಕಡಿಮೆ ಮಾಡಿ. ಅಗತ್ಯಬಿದ್ದರೆ ವೈದ್ಯರಿಗೆ ತೋರಿಸಿ.

* ಇಸ್ಮಾಯಿಲ್‌ ನದಾಫ್‌, ಹಾವೇರಿ: ಫಂಗಲ್‌ ಇನ್‌ಫೆಕ್ಷನ್‌ ಸಮಸ್ಯೆ ಇದೆ, ಕಡಿಮೆಯಾಗುತ್ತಿಲ್ಲ?

– ಇದೊಂದು ಅಂಟುರೋಗ.ನೀವು ಪಿ.ಜಿ.ಯಲ್ಲಿರುವುದರಿಂದ ಇತರರಿಂದ ನಿಮಗೆ ಬಂದಿರಬಹುದು. ಸ್ನೇಹಿತರೊಂದಿಗೆ ಬಟ್ಟೆ ವಿನಿಮಯ ಮಾಡಿಕೊಳ್ಳುವುದರಿಂದ, ಒಂದೇ ಬೆಡ್‌ ಬಳಸುವುದರಿಂದ ಕೆಲವೊಮ್ಮೆ ಈ ರೀತಿ ಸಮಸ್ಯೆಯಾಗುತ್ತದೆ. ಒದ್ದೆಯಾದ ಮತ್ತು ಬಿಗಿಯಾದ ಬಟ್ಟೆ ಬಳಸಬೇಡಿ. ವಾರಕ್ಕೊಮ್ಮೆ ಬೆಡ್‌ಶೀಟ್‌ಗಳನ್ನು ತೊಳೆಯಬೇಕು. ಒಂದೂವರೆಯಿಂದ 2 ತಿಂಗಳ ಚಿಕಿತ್ಸೆ ಪಡೆದರೆ, ಶಿಲೀಂಧ್ರ ಸೋಂಕು ನಿವಾರಣೆಯಾಗುತ್ತದೆ.

* ದಿವ್ಯಾ, ರಾಣೆಬೆನ್ನೂರು: ಪತಿಗೆ ನರಗುಳ್ಳೆ ಸಮಸ್ಯೆಯಿದೆ. ಪರಿಹಾರ ತಿಳಿಸಿ?

– ಇದು ಅನುವಂಶೀಯವಾಗಿ ಬರುವ ಸಮಸ್ಯೆ. ದೇಹದಲ್ಲಿ ಕೊಬ್ಬಿನಂಶ ಜಾಸ್ತಿ ಇದ್ದರೆ ನರಗುಳ್ಳೆ ಕಾಣಿಸಿಕೊಳ್ಳುತ್ತವೆ. ಹಾಗಾಗಿ ನಿತ್ಯ ವ್ಯಾಯಾಮ ಮಾಡುವುದು ಅಗತ್ಯ.

* ಭಾಗ್ಯಲಕ್ಷ್ಮಿ, ಹಿರೇಕೆರೂರು: ಮೂಗಿನ ಮೇಲೆ ಮೊಡವೆ, ಕಪ್ಪು ಕಲೆಗಳಾಗಿವೆ. ಚಿಕಿತ್ಸೆ ಏನು?

– ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕಡಿಮೆ ಮಾಡಿ. ಎಣ್ಣೆ ಮತ್ತು ಸಿಹಿ ಪದಾರ್ಥಗಳನ್ನು ಮಿತವಾಗಿ ಬಳಸಿ. ನಿತ್ಯ ನಾಲ್ಕು ಬಾರಿ ಮುಖವನ್ನು ತೊಳೆಯಬೇಕು. ಮೊಡವೆ ಕಿತ್ತುಕೊಳ್ಳಬಾರದು. ಇದಕ್ಕೆ ಆಯಿಂಟ್‌ಮೆಂಟ್‌ ಲಭ್ಯವಿದೆ.

* ಗುಡ್ಡದಯ್ಯ, ಹೊಸರಿತ್ತಿ: ಬಾಯಿಹುಣ್ಣು (ಅಲ್ಸರ್)‌ ಆಗಿದೆ, ಏನು ಮಾಡಬೇಕು?

– ಊಟದಲ್ಲಿ ವಿಟಮಿನ್‌ ಮತ್ತು ಮಿನರಲ್‌ ಕಡಿಮೆಯಾದರೆ ಬಾಯಿಯಲ್ಲಿ ಹುಣ್ಣು ಅಥವಾ ಗುಳ್ಳೆ ಕಾಣಿಸಿಕೊಳ್ಳುತ್ತದೆ. ತಂಬಾಕು, ಅಡಿಕೆ, ಗುಟ್ಕಾ ತಿನ್ನುವವರಿಗೆ ಶಿಲೀಂಧ್ರ ಸೋಂಕು ತಗಲುತ್ತದೆ. 6 ವಾರ ವಿಟಮಿನ್‌ ಮಾತ್ರೆ ಸೇವಿಸಬೇಕು ಮತ್ತು ಕ್ರೀಮ್‌ ಕೂಡ ಲಭ್ಯವಿದೆ.

* ನಾರಾಯಣ ಬಾಂಡ್ಗೆ, ಹಾವೇರಿ: ಮೊಣಕಾಲಿನಲ್ಲಿ ತುರಿಕೆ ಬರುತ್ತದೆ?

– ಚಳಿಗಾಲ, ಮಳೆಗಾಲದಲ್ಲಿ ಇಂಥ ಸಮಸ್ಯೆ ಹೆಚ್ಚು ಕಾಡುತ್ತದೆ. ಸಕ್ಕರೆಕಾಯಿಲೆ ಇದ್ದರೆ, 180 mg/dl ದಾಟದಂತೆ ನೋಡಿಕೊಳ್ಳಬೇಕು. ವಿಟಮಿನ್‌ ‘ಸಿ’ ಇರುವ ಹಣ್ಣುಗಳಾದ ದ್ರಾಕ್ಷಿ, ಕಿತ್ತಳೆ, ಮೂಸಂಬಿ, ಪೈನಾಪಲ್‌, ಕಿವಿ ಹಣ್ಣುಗಳನ್ನು ಹೆಚ್ಚು ತಿನ್ನಿ.

* ಅರುಣ್‌ಕುಮಾರ್‌ ಹಲಸೂರ, ಹಾವೇರಿ: ಸುಟ್ಟಕಲೆ ಹೋಗಲು ಏನು ಮಾಡಬೇಕು?

– ಬೆಂಕಿ ಮತ್ತು ಕಾದ ಎಣ್ಣೆಯಿಂದ ಚರ್ಮ ಸುಟ್ಟರೆ, ತಂಪಾದ ನೀರನ್ನು ತಕ್ಷಣ ಹಾಕಬೇಕು ಮತ್ತು ಒದ್ದೆ ಬಟ್ಟೆ ಹಾಕಬೇಕು. ಇದರಿಂದ ಚರ್ಮದ ಒಳಭಾಗ ಹೆಚ್ಚು ಹಾನಿಯಾಗುವುದನ್ನು ತಡೆಗಟ್ಟಬಹುದು. ನೀರು ಹಾಕುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ತೀವ್ರತೆ ಜಾಸ್ತಿಯಿದ್ದರೆ,ಆಸ್ಪತ್ರೆಗೆ ಕರೆದೊಯ್ಯಬೇಕು.ಲೇಸರ್‌ ಚಿಕಿತ್ಸೆಯಿಂದ ಸುಟ್ಟಕಲೆಗಳನ್ನು ಹೋಗಲಾಡಿಸಬಹುದು.

* ಮೂಗುಸಂದಿಯಲ್ಲಿ ಕಡಿತ ಬರುತ್ತದೆ. ಪರಿಹಾರವಿದೆಯೇ?

– ಶಿಲೀಂಧ್ರ ಸೋಂಕಿನಿಂದ ಕಡಿತ ಬರುತ್ತದೆ. ಎಣ್ಣೆ ತ್ವಚೆ ಇರುವವರಿಗೆ ಈ ಸಮಸ್ಯೆ ಹೆಚ್ಚು. ಹಾಗಾಗಿ ದಿನಕ್ಕೆ 5ರಿಂದ 6 ಬಾರಿ ಮುಖ ತೊಳೆಯಿರಿ. ಎಣ್ಣೆ ಪದಾರ್ಥ ಕಡಿಮೆ ತಿನ್ನಿ. 4 ವಾರ ಮಾತ್ರೆ ತೆಗೆದುಕೊಂಡರೆ ಕಡಿತ ನಿವಾರಣೆಯಾಗುತ್ತದೆ.

(ಹೆಚ್ಚಿನ ಮಾಹಿತಿಗೆ: ರಕ್ಷಾ ಹೆಲ್ತ್‌ಕೇರ್‌, ಮೊ: 73491 56276 ಸಂಪರ್ಕಿಸಿ)

*****

ಫೋನ್‌ ಇನ್‌ ನಿರ್ವಹಣೆ: ಸಿದ್ದು ಆರ್‌.ಜಿ.ಹಳ್ಳಿ, ಎಂ.ವಿ.ಗಾಡದ ಶಿಗ್ಗಾವಿ, ರಾಜೇಂದ್ರ ನಾಯಕ ಹಂಸಭಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT