ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗಳಲ್ಲಿ ಕೊರೊನಾ ಸೋಂಕು ತಡೆಗಟ್ಟಿ

ಹಾವೇರಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ: ಶಾಸಕ ನೆಹರು ಓಲೇಕಾರ ಸೂಚನೆ
Last Updated 27 ಏಪ್ರಿಲ್ 2021, 14:29 IST
ಅಕ್ಷರ ಗಾತ್ರ

ಹಾವೇರಿ: ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡದಂತೆ ತಡೆಯಲು ಅಧಿಕಾರಿಗಳು ಜಾಗೃತಿಯಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ನೆಹರು ಓಲೇಕಾರ ಸೂಚನೆ ನೀಡಿದರು.

ತಾಲ್ಲೂಕು ಪಂಚಾಯಿತಿಸಭಾಭವನದಲ್ಲಿ ಮಂಗಳವಾರ ನಡೆದ ಹಾವೇರಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಹಾಗೂ ಎಲ್ಲ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ಕೋವಿಡ್-19 ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ಗ್ರಾಮಗಳಲ್ಲೂ ಪರಿಣಾಮಕಾರಿಯಾಗಿ ಲಾಕ್‍ಡೌನ್ ಅನುಷ್ಠಾನಗೊಳ್ಳಬೇಕು. ಗ್ರಾಮದಿಂದ ಗ್ರಾಮಕ್ಕೆ ಅನಗತ್ಯವಾಗಿ ಓಡಾಟ ನಿರ್ಬಂಧಿಸಬೇಕು. ಗ್ರಾಮದ ಕಟ್ಟೆಗಳಲ್ಲಿ ಗುಂಪುಗೂಡಿ ಹರಟೆ ಹೊಡೆಯುವುದನ್ನು ತಡೆಯಬೇಕು. ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಯಿಂದ ಗ್ರಾಮಗಳಿಗೆ ಬರುವ ವ್ಯಕ್ತಿಗಳ ಬಗ್ಗೆ ನಿಗಾವಹಿಸಬೇಕು. ಪಾಸಿಟಿವ್ ವ್ಯಕ್ತಿಗಳ ಸಂಪರ್ಕವನ್ನು 24 ತಾಸಿನಗೊಳಗೆ ಪತ್ತೆ ಹಚ್ಚಿ ತಪಾಸಣೆಗೊಳಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ಗ್ರಾಮದಲ್ಲೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಆರೋಗ್ಯಾಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಗ್ರಾಮಗಳಲ್ಲಿ ಅಂತರ ಕಾಯ್ದುಕೊಳ್ಳಲು, ಮಾಸ್ಕ್‌ ಧರಿಸಲು ಅರಿವು ಮೂಡಿಸಬೇಕು. ಗುಂಪುಗೂಡದಂತೆ ಡಂಗೂರ ಸಾರಿಸಿ ರೋಗ ನಿರೋಧ ಶಕ್ತಿ ಹೆಚ್ಚಿಸುವ ಕಷಾಯ ಹಾಗೂ ಬಿಸಿನೀರು ಕುಡಿಯಲು ಅರಿವು ಮೂಡಿಸಿ ಎಂದು ಸಲಹೆ ನೀಡಿದರು.

ನೀರಿನ ಸಮಸ್ಯೆ ಪರಿಹರಿಸಿ:

ಬೇಸಿಗೆ ಇರುವುದರಿಂದ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾದಲ್ಲಿ ತಕ್ಷಣ ಅಧಿಕಾರಿಗಳು ಸ್ಪಂದಿಸಬೇಕು. ಜನರ ಸಮಸ್ಯೆಯನ್ನು ನಿವಾರಿಸುವಂತೆ ಸೂಚನೆ ನೀಡಿದರು.

ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಮಾತನಾಡಿ, ತಾಲೂಕಿನ ಕೋವಿಡ್ ಪಾಸಿಟಿವ್ ಪ್ರಕರಣಗಳು, ಸಂಪರ್ಕಿತರ ಪತ್ತೆ, ವ್ಯಾಕ್ಸಿನ್ ನೀಡಿಕೆ, ತಪಾಸಣೆ ಕುರಿತಂತೆ ಸಭೆಗೆ ಮಾಹಿತಿ ನೀಡಿದರು.

ತಹಶೀಲ್ದಾರ್‌ ಗಿರೀಶ ಸ್ವಾದಿ ಮಾತನಾಡಿ, ಮಂಗಳವಾರ ರಾತ್ರಿ 9ರಿಂದ ಮುಂದಿನ 14 ದಿನ ಲಾಕ್‌ಡೌನ್‌ ಇರಲಿದೆ. ಈ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅನಗತ್ಯವಾಗಿ ಮನೆಯಿಂದ ಹೊರಬರಬಾರದು. ಮಾಸ್ಕ್‌ ಇಲ್ಲದೆ ಓಡಾಡುವವರಿಗೆ ದಂಡ ವಿಧಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚಿಸಲಾದ ಕೋವಿಡ್ ಟಾಸ್ಕ್‌ಫೋರ್ಸ್‌ ಸಮಿತಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜಪ್ಪ ಮಾತನಾಡಿ, ಪಿಡಿಒಗಳಿಗೆ ಲಾಕ್‍ಡೌನ್ ಇರುವುದಿಲ್ಲ. ಐಡಿ ಕಾರ್ಡ್ ಧರಿಸಿ ಕರ್ತವ್ಯ ನಿರ್ವಹಿಸಬೇಕು. ಗ್ರಾಮೀಣ ಭಾಗದಲ್ಲಿ ಒಂದು ಸಣ್ಣ ಅಂಗಡಿಗಳು ತೆರೆಯದಂತೆ ನಿಗಾವಹಿಸಬೇಕು. ಕೋವಿಡ್ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಕನಿಷ್ಠ 30 ಜನರ ಗಂಟಲು ದ್ರವ ಪರೀಕ್ಷೆ ಮಾಡಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT