ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆ: ಶೇ 50 ಹಾಸಿಗೆ ಕಾಯ್ದಿರಿಸಿ

ಕೋವಿಡ್ ಕರ್ತವ್ಯ ನಿರಾಕರಿಸಿದರೆ ಕ್ರಮ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಎಚ್ಚರಿಕೆ
Last Updated 26 ಏಪ್ರಿಲ್ 2021, 14:29 IST
ಅಕ್ಷರ ಗಾತ್ರ

ಹಾವೇರಿ: ‘ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಮ್‍ಗಳಲ್ಲಿರುವ ಹಾಸಿಗೆಗಳ ಪೈಕಿ ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗಾಗಿ ಕಾಯ್ದಿರಿಸುವುದು ಕಡ್ಡಾಯ’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಜಿಲ್ಲಾ ಹಾಗೂ ತಾಲ್ಲೂಕು ಭಾರತೀಯ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ತಹಶೀಲ್ದಾರಗಳೊಂದಿಗೆ ಕೋವಿಡ್ ನಿಯಂತ್ರಣ ಮತ್ತು ಚಿಕಿತ್ಸೆಗೆ ಖಾಸಗಿ ವೈದ್ಯಕೀಯ ಸೇವೆ ಬಳಕೆ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಿಂದ ‘ವಿಡಿಯೋ ಸಂವಾದ’ ನಡೆಸಿದರು.

ಕೋವಿಡ್ ಆಸ್ಪತ್ರೆಗಳಾಗಿ ಪರಿವರ್ತಿಸಲು ಖಾಸಗಿ ನರ್ಸಿಂಗ್ ಹೋಮ್‍ಗಳು ಮುಂದೆ ಬಂದರೆ ಹಾಗೂ ಕೋವಿಡ್ ಟೆಸ್ಟ್ ಮಾಡಲು ಖಾಸಗಿ ಲ್ಯಾಬ್‍ಗಳು ಮುಂದೆ ಬಂದರೆ ಅನುಮತಿ ನೀಡಲಾಗುವುದು. ಪ್ರಾಮಾಣಿಕೃತ ಮಾರ್ಗಸೂಚಿಯಂತೆ ಚಿಕಿತ್ಸಾ ಮತ್ತು ತಪಾಸಣೆ ನಡೆಸಬೇಕಾಗುತ್ತದೆ. ವೈದ್ಯಕೀಯ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ತೊಂದರೆ, ರೆಮ್‍ಡಿಸಿವಿರ್ ಸೇರಿದಂತೆ ಲಸಿಕೆಗಳ ಕೊರತೆ ಇದ್ದರೆ ಜಿಲ್ಲಾಡಳಿತದಿಂದಲೇ ಪೂರೈಕೆಗೆ ಕ್ರಮವಹಿಸಲಾಗುವುದು ಎಂದರು.

ಜಿಲ್ಲೆಯ ಪ್ರತಿ ನರ್ಸಿಂಗ್ ಹೋಮ್‍ಗಳಲ್ಲಿರುವ ಸಾಮಾನ್ಯ ಬೆಡ್‍ಗಳ ಸಂಖ್ಯೆ, ಐಸಿಯು, ಆಕ್ಸಿಜನ್ ಬೆಡ್‍ಗಳ ಸಂಖ್ಯೆ ಸೇರಿದಂತೆ ಒಟ್ಟಾರೆ ಬೆಡ್‍ಗಳ ಸಂಖ್ಯೆಯ ಮಾಹಿತಿ ಹಾಗೂ ಜಿಲ್ಲೆಯ ನರ್ಸಿಂಗ್ ಹೋಮ್, ಖಾಸಗಿ ಕ್ಲಿನಿಕ್‍ನಲ್ಲಿ ಸೇವೆಯಲ್ಲಿರುವ ವೈದ್ಯರ ಮಾಹಿತಿಯನ್ನು ಲಿಖಿತವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮಾಹಿತಿ ನೀಡಿ ಎಂದರು.

ಜಿಲ್ಲೆಯಲ್ಲಿ ನಿತ್ಯ ನೂರರ ಗಡಿ ದಾಟುತ್ತಿದೆ. ಹೀಗೆ ಮುಂದುವರಿದರೆ ಪರಿಸ್ಥಿತಿ ಗಂಭೀರವಾಗಲಿದೆ. ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಜೊತೆ ಖಾಸಗಿ ವೈದ್ಯರು ಕೈಜೋಡಿಸಬೇಕು. ಜಿಲ್ಲೆಯಲ್ಲಿ ಕೋವಿಡ್‍ನಿಂದ ಸಾವುಗಳು ಉಂಟಾಗಬಾರದು. ಜನರಿಗೆ ತೊಂದರೆಯಾದರೆ ವೈದ್ಯರಿಗೆ ನಾನು ತೊಂದರೆ ಕೊಡುವೆ ಎಂದು ಎಚ್ಚರಿಕೆ ನೀಡಿದರು.

ತಪಾಸಣೆ ನಡೆಸಿ:

ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್ ಮಾತನಾಡಿ, ಖಾಸಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಐ.ಎಲ್.ಎ. ಮತ್ತು ಸಾರಿ ಲಕ್ಷಣಗಳಿದ್ದರೆ ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್. ತಪಾಸಣೆಗೆ ಒಳಪಡಿಸಬೇಕು. ನಿಮ್ಮಲ್ಲಿ ವ್ಯವಸ್ಥೆ ಇಲ್ಲದಿದ್ದರೆ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಹೇಳಿದರು.

ಐ.ಎಂ.ಎ. ಜಿಲ್ಲಾ ಅಧ್ಯಕ್ಷರಾದ ಡಾ.ರವಿಕುಮಾರ ಮಲ್ಲಾಡದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಡಾ.ಜಯಾನಂದ, ಡಾ.ದೇವರಾಜ್, ಡಾ.ನೀಲೇಶ್, ತಹಶೀಲ್ದಾರ ಗಿರೀಶ ಸ್ವಾದಿ, ಐ.ಎಂ.ಎ ಎಲ್ಲ ತಾಲೂಕಾ ಅಧ್ಯಕ್ಷರು, ಪದಾಧಿಕಾರಿಗಳು ವಿಡಿಯೊ ಸಂವಾದದ ಮೂಲಕ ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT