ಮಂಗಳವಾರ, ಸೆಪ್ಟೆಂಬರ್ 28, 2021
22 °C
ಸ್ವಚ್ಛತೆ ಮರೀಚಿಕೆ: ವಿಷಜಂತುಗಳ ಕಾಟಕ್ಕೆ ಬೇಸತ್ತ ಪೊಲೀಸ್‌ ಕುಟುಂಬಸ್ಥರು

ವಸತಿಗೃಹಗಳ ಸುತ್ತ ಸಮಸ್ಯೆಗಳ ಹುತ್ತ

ದುರುಗಪ್ಪ ಕೆಂಗನಿಂಗಪ್ಪನವರ Updated:

ಅಕ್ಷರ ಗಾತ್ರ : | |

Prajavani

ಗುತ್ತಲ: ಪಟ್ಟಣದ ಪೊಲೀಸ್ ಠಾಣೆ ಮತ್ತು ಪೊಲೀಸ್‌ ಸಿಬ್ಬಂದಿಯ ಕುಟುಂಬದವರಿಗೆ ಮೀಸಲಿರುವ ವಸತಿಗೃಹಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕೊರತೆಯಿಂದಾಗಿ ಪೊಲೀಸರು ಮತ್ತು ಅವರ ಕುಟುಂಬಸ್ಥರು ಸಂಕಷ್ಟ ಎದುರಿಸುತ್ತಿದ್ದಾರೆ.   

ನಾಲ್ಕು ಎಕರೆ ಪ್ರದೇಶದಲ್ಲಿ ಪೊಲೀಸ್‌ ಠಾಣೆ ಸೇರಿದಂತೆ 16 ವಸತಿಗೃಹಗಳಿವೆ. ಶಿಥಿಲಾವಸ್ಥೆ ತಲುಪಿದ್ದ 8ರಿಂದ 10 ವಸತಿಗೃಹಗಳನ್ನು ಈಗಾಗಲೇ ನೆಲಸಮಗೊಳಿಸಲಾಗಿದೆ. ಆ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸುವ ಪ್ರಸ್ತಾವ ಇದೆ. ಆದರೆ, ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ.    

ಪಟ್ಟಣದ ಜನರ ಸಂಕಷ್ಟಕ್ಕೆ ಸ್ಪಂದಿಸುವ ಪೊಲೀಸ್‌ ಅಧಿಕಾರಿಗಳು ಮತ್ತು ಅವರ ಕುಟುಂಬಸ್ಥರು ವಿಷಜಂತುಗಳ ಭಯದಲ್ಲೇ ದಿನ ಕಳೆಯುತ್ತಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ಇಬ್ಬರು ಪೊಲೀಸರಿಗೆ ಹಾವು ಕಚ್ಚಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇಬ್ಬರೂ ಗುಣಮುಖರಾಗಿದ್ದಾರೆ.   

ಪೊಲೀಸ್‌ ಪರೇಡ್‌ ಮತ್ತು ಈ ಭಾಗದ ಮಕ್ಕಳು ಆಟವಾಡಲು ಬಳಕೆ ಆಗುತ್ತಿದ್ದ ಆಟದ ಮೈದಾನದಲ್ಲಿ ಅನುಪಯುಕ್ತ ಮತ್ತು ಜಪ್ತಿ ಮಾಡಿರುವ ವಾಹನಗಳನ್ನು ನಿಲ್ಲಿಸಲಾಗಿದೆ. ಅಕ್ರಮ ಮರಳು ಸಾಗಾಣಿಕೆಯಲ್ಲಿ ಬಳಸಲಾಗಿದ್ದ ಕಬ್ಬಿಣದ ತೆಪ್ಪ, ದೋಣಿಯನ್ನು ಹಾಕಿರುವುದರಿಂದ ಮೈದಾನವನ್ನು ಬಳಸಲು ಬಾರದಂತಾಗಿದೆ. 

ವಸತಿ ಗೃಹಗಳ ಸುತ್ತ ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿಲ್ಲದ ಕಾರಣ, ರಾತ್ರಿ ವೇಳೆ ಮಕ್ಕಳು ಮತ್ತು ಮಹಿಳೆಯರು ಓಡಾಡುವುದೇ ಕಷ್ಟವಾಗಿದೆ. ಸ್ವಚ್ಚತೆ ಇಲ್ಲದ ಕಾರಣ ಸೊಳ್ಳೆಗಳು ಹೆಚ್ಚಾಗಿ, ಸಾಂಕ್ರಾಮಿಕ ರೋಗ ಹರಡುವ ಭೀತಿ ನಿವಾಸಿಗಳನ್ನು ಕಾಡುತ್ತಿದೆ. 

ಠಾಣೆಗೆ ಒಂದು ಭಾಗದಲ್ಲಿ ತಡೆಗೋಡೆಯೇ ಇಲ್ಲ. ಹೀಗಾಗಿ, ಈ ಭಾಗದಲ್ಲಿ ಹಂದಿಗಳ ಹಾವಳಿ ಮತ್ತು ಕೊಳಚೆ ನೀರು ಸೇರುತ್ತಿದೆ. ಇಷ್ಟೆಲ್ಲ ಅವ್ಯವಸ್ಥೆ ಇದ್ದರೂ ಇದನ್ನು ಸರಿಪಡಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. 

‘ಮರಳು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕಬ್ಬಿಣದ ತೆಪ್ಪ ಮತ್ತು ಮರಳು ವಶಪಡಿಸಿಕೊಳ್ಳಲಾಗಿದ್ದು ಇದು ನ್ಯಾಯಾಲದಲ್ಲಿದೆ. ನ್ಯಾಯಾಲಯದ ತೀರ್ಪಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು. ಆದೇಶ ಬಂದ ಮೇಲೆ ತೆಪ್ಪಗಳನ್ನು ಹರಾಜು ಹಾಕಿ ಠಾಣೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು’ ಎಂದು ಹಾವೇರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನಮಂತರಾಯ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.