ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘2030ಕ್ಕೆ ರೇಬಿಸ್‌ ಮುಕ್ತ ಭಾರತದ ಗುರಿ’

Last Updated 28 ಸೆಪ್ಟೆಂಬರ್ 2021, 16:33 IST
ಅಕ್ಷರ ಗಾತ್ರ

ಹಾವೇರಿ:ಈ ವರ್ಷದ ವಿಶ್ವ ರೇಬಿಸ್ ದಿನಾಚರಣೆಯ ಧ್ಯೇಯ ವಾಕ್ಯ ‘ರೇಬಿಸ್ ಲಸಿಕೆ ಹಾಕಿಸಿ, ರೋಗ ನಿವಾರಿಸಿ’ ಎಂದಾಗಿದೆ.ಈ ರೋಗದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, 2030ಕ್ಕೆ ಭಾರತವನ್ನು ರೇಬಿಸ್ ಮುಕ್ತ ದೇಶವನ್ನಾಗಿಸುವ ಉದ್ದೇಶ ಹೊಂದಲಾಗಿದೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೆಶಕ ಡಾ.ರಾಜೀವ್ ಎನ್. ಕೂಲೇರ ತಿಳಿಸಿದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಹಾವೇರಿ ಪ್ರಾಣಿದಯಾ ಸಂಘದ ಆಶ್ರಯದಲ್ಲಿ ಮಂಗಳವಾರ ಜಿಲ್ಲಾ ಪಶುವೈದ್ಯಕೀಯ ಪಾಲಿಕ್ಲಿನಿಕ್‌ನಲ್ಲಿ ಏರ್ಪಡಿಸಿದ್ದ ವಿಶ್ವ ರೇಬಿಸ್ ದಿನಾಚರಣೆ ಹಾಗೂ ಶ್ವಾನ ಮತ್ತು ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿವರ್ಷ ಸೆ.28ರಂದು ಸೂಕ್ಷ್ಮಜೀವಿಶಾಸ್ತ್ರದ ಪಿತಾಮಹ ಹಾಗೂ ರೇಬಿಸ್‌ ಲಸಿಕೆಯನ್ನು ಕಂಡುಹಿಡಿದ ಖ್ಯಾತ ವಿಜ್ಞಾನಿ ಲೂಯೀಸ್ ಪಾಶ್ಚರ್ (28-09-1895) ಅವರ ಮರಣದ ಶತಮಾನೋತ್ಸವದ ಅಂಗವಾಗಿ ವಿಶ್ವದಾದ್ಯಂತ 15 ವರ್ಷಗಳಿಂದ ಆಚರಿಸಲಾಗುತ್ತಿದೆ ಎಂದರು.

ಮೊದಲ ಬಾರಿಗೆ 1881ರಲ್ಲಿ ಹುಚ್ಚುನಾಯಿ ಕಡಿತಕ್ಕೊಳಗಾದ ಮಗುವಿಗೆ ಲಸಿಕೆ ಹಾಕಿ ಶುಶ್ರೂಷೆ ಮಾಡಿ ಗುಣಪಡಿಸಲಾಯಿತು. ಅಂದಿನಿಂದ ಸಂಶೋಧನೆಗಳು ನಡೆದು, ಈಗ ಪರಿಣಾಮಕಾರಿಯಾದ ಮತ್ತು ಒಳ್ಳೆಯ ಗುಣಮಟ್ಟದ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ಹೇಳಿದರು.

ಮುಖ್ಯ ಪಶುವೈದ್ಯಾದಿಕಾರಿಗಳು, ಡಾ.ಎಚ್.ಬಿ ಸಣ್ಣಕ್ಕಿಯವರು ರೇಬಿಸ್ ರೋಗದ ಕುರಿತು ರೈತರಿಗೆ ಮಾಹಿತಿ ನೀಡಿದರು. ಡಾ.ಕೆ.ಚಿದಾನಂದ, ಡಾ.ತ್ರಿವೇಣಿ, ಪ್ರಾಣಿ ದಯಾಸಂಘದ ರವಿ ಹಿಂಚಿಗೇರಿ, ರೋಟರಿ ಕ್ಲಬ್ ಅಧ್ಯಕ್ಷ ದಯಾನಂದ ಯಡ್ರಾಮಿ, ಕಾರ್ಯದರ್ಶಿ ವಿರೇಶ ಪಾಟೀಲ, ಶರತ್ ಮಲ್ಲನಗೌಡ್ರ, ಸಹಾಯಕ ಸದ್ಯಸರಾದ ಬಸವರಾಜ ಮಾಸೂರ ಇದ್ದರು. ಸಹಾಯಕ ನಿರ್ದೇಶಕ ಡಾ.ಡಿ.ಸಿ.ಬಸವರಾಜ ಸ್ವಾಗತಿಸಿದರು.

68 ಶ್ವಾನ ಮತ್ತು ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕೆ ಹಾಕಲಾಯಿತು ಮತ್ತು ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ಮೂಲಕ ರೇಬಿಸ್ ಕುರಿತು ಜಾಗೃತಿ ಮೂಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT