ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಠಕ್ಕೆ ಧಕ್ಕೆ ಉಂಟು ಮಾಡಿಲ್ಲ: ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ

ಹಾನಗಲ್‌ ಮಠದ ಆಸ್ತಿ ಅಡವಿಟ್ಟು ಬ್ಯಾಂಕ್‌ನಿಂದ ಸಾಲ
Published 21 ಮಾರ್ಚ್ 2024, 4:27 IST
Last Updated 21 ಮಾರ್ಚ್ 2024, 4:27 IST
ಅಕ್ಷರ ಗಾತ್ರ

ಹುಬ್ಬಳ್ಳಿ/ಹಾವೇರಿ: ‘ಆರೋಗ್ಯ, ಶಿಕ್ಷಣ ಮತ್ತು ಮಠದ ಅಭಿವೃದ್ಧಿಗೆ ಶ್ರೀಮಠದ ಆಸ್ತಿಯನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಪಡೆದಿರುವೆ. ಬೇರೆ ಯಾವ ಮಠ, ಪೀಠಾಧಿಪತಿಗಳು ಆಸ್ತಿಯ ಮೇಲೆ ಸಾಲ ಮಾಡಿಲ್ಲವೇ’ ಎಂದು ಮೂರುಸಾವಿರಮಠದ ಹಾಗೂ ಹಾನಗಲ್ ಕುಮಾರೇಶ್ವರ ಮಠದ ಪೀಠಾಧಿಪತಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಪ್ರಶ್ನಿಸಿದರು.

ಹಾವೇರಿ ಜಿಲ್ಲೆಯ ‘ಹಾನಗಲ್‌ ಕುಮಾರೇಶ್ವರ ವಿರಕ್ತ ಮಠದ ಆಸ್ತಿಯನ್ನು ಸಹಕಾರಿ ಬ್ಯಾಂಕ್‌ನಲ್ಲಿ ಅಡವಿಟ್ಟು, ಸ್ವಾಮೀಜಿಯವರು ಸಾಲ ಮಾಡಿದ್ದೇಕೆ?’ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾದ ಹಿನ್ನೆಲೆಯಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದರು.

‘ಭಕ್ತರಿಗೆ ತಿಳಿಯದಂತೆ ಮಠದ ಆಸ್ತಿಯನ್ನು ಖಾಸಗಿ ಬ್ಯಾಂಕ್‌ನಲ್ಲಿ ಇಟ್ಟು, ದುರ್ಬಳಕೆ ಮಾಡಿಕೊಳ್ಳಲಾಗಿದೆ’ ಎಂಬ ಕೆಲ ಭಕ್ತರ ಆರೋಪಕ್ಕೆ ಉತ್ತರಿಸಿದ ಅವರು, ‘ಶ್ರೀಮಠಕ್ಕೆ ಧಕ್ಕೆ ತರಲು ಹಾಗೂ ಗೊಂದಲ ಸೃಷ್ಟಿಸಲು, ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದರು.

‘ಮಠಾಧಿಪತಿಗೆ, ಮಠದ ನಿರ್ವಹಣೆ ಜವಾಬ್ದಾರಿ ಇರುವವರಿಗೆ, ಮಠದ ಆಸ್ತಿಯ ಮೇಲೆ ಸಾಲ ಮಾಡುವ ಅಧಿಕಾರಿ ಇರುವುದಿಲ್ಲವೇ? ಕಾನೂನಿನಲ್ಲಿ ಇದಕ್ಕೇನಾದರೂ ವಿರೋಧ ಇದೆಯೇ? ಆಸ್ತಿಯ ಮೇಲೆ ಸಾಲ ಪಡೆಯುವುದು, ತೀರಿಸುವುದು ದೊಡ್ಡ ವಿಷಯವಲ್ಲ, ಮಹಾ ಅಪರಾಧವೂ ಅಲ್ಲ’ ಎಂದರು.

ಭಕ್ತರ ಆಕ್ಷೇಪ: ‘ಮಠದ ಆಸ್ತಿಯ ಮೇಲೆ ಸಾಲ ಮಾಡಿದ್ದು ಸರಿಯಾದ ಕ್ರಮವಲ್ಲ. ಮಠದ ಅಭಿವೃದ್ಧಿಗೆ ಅಥವಾ ಧಾರ್ಮಿಕ ಕಾರ್ಯಕ್ರಮಗಳಿಗೆ ಈ ಹಣ ವೆಚ್ಚವಾಗಿಲ್ಲ. ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತರು ದೇಣಿಗೆ ನೀಡಿ ಕಾರ್ಯಕ್ರಮ ಮಾಡುತ್ತಾರೆ. ಸಾಲ ಮಾಡಿದ ಬಗ್ಗೆ ಶ್ರೀಗಳು ಮಾಹಿತಿ ನೀಡಿದ ಮೇಲೆ ಆ ಬಗ್ಗೆ ತೀರ್ಮಾನಿಸುತ್ತೇವೆ’ ಎಂದು ಶ್ರೀಮಠದ ಹಾನಗಲ್‌ ಭಕ್ತರೊಬ್ಬರು ತಿಳಿಸಿದ್ದಾರೆ.

‘ಯಾವುದಕ್ಕೆ ಹಾನಗಲ್ ಮಠದ ಆಸ್ತಿಯ ಮೇಲೆ ಸಾಲ ಮಾಡಲಾಗಿದೆ ಎಂಬುದು ನಮ್ಮ ಗಮನಕ್ಕೆ ಇಲ್ಲ. ಈ ಬಗ್ಗೆ ಶ್ರೀಗಳೊಂದಿಗೆ ಮಾತನಾಡಿದ್ದು, ನಾಲ್ಕಾರು ದಿನದಲ್ಲಿ ಇದರ ಪೂರ್ಣ ಮಾಹಿತಿ ನೀಡುವ ಭರವಸೆ ನೀಡಿದ್ದಾರೆ’ ಎಂದು ಲಿಂ.ಕುಮಾರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕಲ್ಯಾಣಕುಮಾರ ಶೆಟ್ಟರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT