ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ನೀತಿಸಂಹಿತೆ ಉಲ್ಲಂಘಿಸಿದರೆ ಅಗತ್ಯ ಕ್ರಮ

ಪಶ್ಚಿಮ ಶಿಕ್ಷಕರ ಮತಕ್ಷೇತ್ರ ಚುನಾವಣೆ: ರಾಜಕೀಯ ಪಕ್ಷಗಳ ಜೊತೆ ಜಿಲ್ಲಾಧಿಕಾರಿ ಸಭೆ
Last Updated 13 ಮೇ 2022, 14:12 IST
ಅಕ್ಷರ ಗಾತ್ರ

ಹಾವೇರಿ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಮತಕ್ಷೇತ್ರಕ್ಕೆ ಭಾರತ ಚುನಾವಣಾ ಆಯೋಗ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದೆ. ಆಯೋಗದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಜಕೀಯ ಪಕ್ಷಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಜೂನ್ 17ರವರೆಗೆ ಮಾದರಿ ನೀತಿಸಂಹಿತೆ ಜಾರಿಯಲ್ಲಿದ್ದು, ಮಾದರಿ ನೀತಿಸಂಹಿತೆ ಉಲ್ಲಂಘಿಸಿದರೆ ಚುನಾವಣಾ ಆಯೋಗದ ನಿರ್ದೇಶನದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಭ್ಯರ್ಥಿಗಳಿಗೆ, ಚುನಾವಣಾ ಏಜೆಂಟರುಗಳಿಗೆ, ಪೋಲಿಂಗ್ ಏಜೆಂಟರುಗಳಿಗೆ ಕಡ್ಡಾಯವಾಗಿ ಎರಡೂ ಡೋಸ್ ಲಸಿಕೆಗಳಾಗಿರಬೇಕು. ಒಂದು ವೇಳೆ ಎರಡೂ ಡೋಸ್ ಲಸಿಕೆಗಳಾಗಿರದಿದ್ದಲ್ಲಿ ಮತದಾನದ ದಿನ ಮತ್ತು ಮತ ಎಣಿಕೆ ದಿನಕ್ಕೆ ಅನ್ವಯವಾಗುವಂತೆ 48 ಗಂಟೆಗಳ ಹಿಂದಿನ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ ಎಂದರು.

ಒಂದೇ ಡೋಸ್ ಲಸಿಕೆಯಾಗಿದ್ದಲ್ಲಿ ಮತದಾನದ ದಿನ ಮತ್ತು ಮತ ಎಣಿಕೆ ದಿನಕ್ಕೆ ಅನ್ವಯವಾಗುವಂತೆ 72 ಗಂಟೆಗಳ ಹಿಂದಿನ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಮತ ಪ್ರಚಾರದ ವೇಳೆಯಲ್ಲಿ ಭೌತಿಕ ಅಂತರ, ಸ್ಯಾನಿಟೇಜರ್ ಮತ್ತು ಮಾಸ್ಕ್‌ ಬಳಕೆ ಕಡ್ಡಾಯವಾಗಿದೆ. ಪ್ರಚಾರಕ್ಕೆ ಅಭ್ಯರ್ಥಿ ಒಳಗೊಂಡಂತೆ ಕೇವಲ ಐದು ಜನರಿಗೆ ಅವಕಾಶವಿದೆ ಎಂದು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಬಿಜೆಪಿ ಮುಖಂಡ ಪ್ರಭು ಹಿಟ್ನಳ್ಳಿ ಹಾಗೂ ಭಾರತೀಯ ಕಮ್ಯುನಿಸ್ಟ್‌ ಪಕ್ಷದ ಮುಖಂಡ ರುದ್ರಪ್ಪ ಜಾಬೀನ್ ಇದ್ದರು.

ಸಿಬ್ಬಂದಿ ನೇಮಕ:

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಮತಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣೆ ಪ್ರಕ್ರಿಯೆ ಹಾಗೂ ವಿವಿಧ ಮಾಹಿತಿ ಕ್ರೋಢಿಕರಿಸಲು ಆರಂಭಿಸಲಾದ ನಿಯಂತ್ರಣ ಕೊಠಡಿ(24X7) ದೂ: 08375-249100/103 ನಿರ್ವಹಣೆಗೆ ಅಗತ್ಯ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ನಿಯಂತ್ರಣ ಕೊಠಡಿಯ ನೋಡಲ್ ಅಧಿಕಾರಿಯಾಗಿ ಜಿಲ್ಲಾ ಸಾಂಖ್ಯಿಕ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ ಆರ್.ಪಾಟೀಲ ಅವರನ್ನು ನೇಮಕ ಮಾಡಲಾಗಿದೆ. ಮೇಲ್ವಿಚಾರಣಾ ಅಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಪ್ರೊಬೇಷನರ ಅಧಿಕಾರಿ(ಗ್ರೇ-2) ವೈ.ಟಿ. ಪೂಜಾರ (ಮೊ.94806 24434) ಅವರನ್ನು ನೇಮಕ ಮಾಡಲಾಗಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ, ಮಧ್ಯಾಹ್ನ 3ರಿಂದ ರಾತ್ರಿ 10ರವರೆಗೆ ಹಾಗೂ ರಾತ್ರಿ 10ರಿಂದ ಬೆಳಿಗ್ಗೆ 7 ಗಂಟೆವರೆಗೆ ಮೂರು ಪಾಳಿಯಲ್ಲಿ ಸಿಬ್ಬಂದಿ ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT