ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ| ಗ್ರಾಮಸ್ಥರಿಂದ ‘ಸೈನಿಕರ ಕಟ್ಟೆ’ ನಿರ್ಮಾಣ

ವರ್ದಿ ಗ್ರಾಮದಲ್ಲಿ ಜ.26ರಂದು ಉದ್ಘಾಟನೆ: ದೇಣಿಗೆ ನೀಡಿದ ಕೂಲಿಕಾರ್ಮಿಕರು
Last Updated 22 ಜನವರಿ 2020, 20:00 IST
ಅಕ್ಷರ ಗಾತ್ರ

ಹಾವೇರಿ: ದೇಶದ ಮೇಲಿನ ಅಭಿಮಾನ ಮತ್ತು ಸೈನಿಕರ ಮೇಲಿನ ಪ್ರೀತಿಯ ದ್ಯೋತಕವಾಗಿ ಹಾನಗಲ್‌ ತಾಲ್ಲೂಕು ವರ್ದಿ ಗ್ರಾಮಸ್ಥರು ₹ 3.5 ಲಕ್ಷ ವೆಚ್ಚದಲ್ಲಿ ರಾಷ್ಟ್ರಧ್ವಜ ಕಟ್ಟೆ (ಸೈನಿಕರ ಕಟ್ಟೆ) ನಿರ್ಮಿಸಿದ್ದಾರೆ.

ಗ್ರಾಮದ ಮಾರುತಿ ಯುವಕ ಸಂಘ ಮತ್ತು ರಾಷ್ಟ್ರಧ್ವಜ ಸಂಘದ ಆಶ್ರಯದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‘ರಾಷ್ಟ್ರಧ್ವಜ ಕಟ್ಟೆ’ಯನ್ನುಜ.26ರ ಗಣರಾಜ್ಯೋತ್ಸವ ದಿನ ಉದ್ಘಾಟಿಸಲು ಗ್ರಾಮಸ್ಥರು ಭರದ ಸಿದ್ಧತೆ ನಡೆಸಿದ್ದಾರೆ.

ವರ್ದಿ ಗ್ರಾಮದ ಹೃದಯಭಾಗದಲ್ಲಿರುವ ಈ ಕಟ್ಟೆಯಲ್ಲಿ ಬಾವುಟ ಹಿಡಿದು ನಿಂತಿರುವ ವೀರಯೋಧರ ನಾಲ್ಕು ಪ್ರತಿಮೆಗಳು, ಮಧ್ಯಭಾಗದಲ್ಲಿ ರಾಷ್ಟ್ರಲಾಂಛನವಾದ ‘ಅಶೋಕ ಸ್ತಂಭ’ ಮತ್ತು ‘ಅಶೋಕ ಚಕ್ರ’ ಹಾಗೂ ಸೈನಿಕರ ಶೌರ್ಯ–ಸಾಹಸದ ಪ್ರತೀಕವಾಗಿ ಎರಡು ಸಿಂಹಗಳ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ.

ಉದಾರ ನೆರವು:

‘ರಾಷ್ಟ್ರಧ್ವಜ ಕಟ್ಟೆ ನಿರ್ಮಾಣಕ್ಕಾಗಿ ಗ್ರಾಮದಲ್ಲಿರುವ 500 ಮನೆಗಳಿಂದ ದೇಣಿಗೆ ಸಂಗ್ರಹಿಸಿದ್ದೇವೆ. ವಿಶೇಷವೆಂದರೆ ನಮ್ಮ ಊರಿನ ಸುಮಾರು 100 ಕಟ್ಟಡ ಕಾರ್ಮಿಕರು ತಾವು ಕೂಡಿಟ್ಟ ಹಣವನ್ನು ಉದಾರವಾಗಿ ನೀಡಿದ್ದಾರೆ.ಗ್ರಾಮ ಪಂಚಾಯ್ತಿ ಸದಸ್ಯರು, 14ನೇ ಹಣಕಾಸು ಯೋಜನೆಯಡಿ ₹ 67 ಸಾವಿರ ಅನುದಾನ ನೀಡಿ ಬೆಂಬಲಿಸಿದ್ದಾರೆ. ಇದಕ್ಕೆ ಯಾವುದೇ ಉದ್ಯಮಿ ಅಥವಾ ರಾಜಕಾರಣಿಗಳಿಂದ ಹಣ ಸಂಗ್ರಹಿಸಿಲ್ಲ’ ಎನ್ನುತ್ತಾರೆ ಗ್ರಾಮಸ್ಥ ರೇವಣೇಶ್‌ ಬಾರ್ಕಿ.

ಕಟ್ಟಡ ಕಾರ್ಮಿಕರು ಸಂಜೆ 6ರಿಂದ ರಾತ್ರಿ11ರವರೆಗೂ ಧ್ವಜ ಕಟ್ಟೆ ನಿರ್ಮಾಣಕ್ಕಾಗಿ ಉಚಿತವಾಗಿ ಕೆಲಸ ಮಾಡಿದ್ದಾರೆ. ಕಲಾವಿದ ಬಸವರಾಜು ಈಳೀಗೇರ್‌ ಪ್ರತಿಮೆಗಳನ್ನು ರೂಪಿಸಿಕೊಟ್ಟರೆ, ಇದರ ವಿನ್ಯಾಸವನ್ನು ರಮೇಶ್‌ ಜಾಡರ್‌ ನಿರ್ವಹಿಸಿದ್ದಾರೆ. ಪೇಂಟಿಂಗ್‌ ಕೆಲಸದ ಹೊಣೆಯನ್ನು ಮುದ್ದಪ್ಪ ಪಿ.ಗಾಣಿಗೇರ್‌ ಹೊತ್ತಿದ್ದರು.

‘ಈ ಕಟ್ಟೆ, ದೇಶಾಭಿಮಾನ ಬೆಳೆಸಲು, ದೇಶ ರಕ್ಷಿಸಲು ಪ್ರೇರಣೆಯಾಗಲಿ ಎಂಬುದು ನಮ್ಮ ಉದ್ದೇಶ’ ಎಂದು ಗ್ರಾಮಸ್ಥ ಹೊನ್ನಗೌಡ ಪಾಟೀಲ್‌ ತಿಳಿಸಿದರು.

ನೆರೆಯಿಂದ ಜಲಾವೃತ:

‘ಈ ಸ್ಥಳದಲ್ಲಿ ಮೊದಲಿನಿಂದಲೂ ಧ್ವಜದ ಕಟ್ಟೆ ಇತ್ತು. ರಸ್ತೆ ಕಾಮಗಾರಿ ಸಂದರ್ಭ ಸ್ವಲ್ಪ ಹಾಳಾಗಿತ್ತು. ನಂತರ ಗ್ರಾಮಸ್ಥರು ಕಟ್ಟೆಯನ್ನು ಮರುನಿರ್ಮಿಸಲು ನಿರ್ಧರಿಸಿದರು. 2019ರ ಆ.15ರಂದು ಉದ್ಘಾಟನೆ ನಡೆಸಬೇಕಿತ್ತು. ಆದರೆ ಪ್ರವಾಹದಿಂದಾಗಿ, ಕಟ್ಟೆ ಸಂಪೂರ್ಣ ಜಲಾವೃತವಾಯಿತು. ಮತ್ತೆ ದುರಸ್ತಿ ಮಾಡಿ, ಸುಣ್ಣ ಬಣ್ಣಗಳಿಂದ ಅಲಂಕರಿಸಲಾಯಿತು’ ಎಂದು ಗ್ರಾಮಸ್ಥ ಬಸವರಾಜ ಬಾರ್ಕಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT