ಸಾವರ್ಕರ್‌ರನ್ನು ಇಂದಿರಾಗಾಂಧಿಯವರೇ ಪ್ರಶಂಸಿದ್ದಾರೆ: ಸಿಎಂ ಬೊಮ್ಮಾಯಿ

ಹಾವೇರಿ: ‘ಸಾವರ್ಕರ್ ಅವರ ಬಗ್ಗೆ ಮಾಜಿ ಪ್ರಧಾನಿ ಇಂದಿರಾಗಾಂಧಿಯವರೇ ‘ದೇಶದ ಶ್ರೇಷ್ಠ ಪುತ್ರ’ ಎಂದು ಬಣ್ಣಿಸಿದ್ದಾರೆ. ಐತಿಹಾಸಿಕ ಮಹಾಪುರುಷರ ಬಗ್ಗೆ ಪರ–ವಿರೋಧಗಳು ಎಲ್ಲ ಕಾಲದಲ್ಲೂ ಇರುತ್ತವೆ. ಆದರೆ, ಮಿತಿಮೀರಿ ಮಾತಾಡಿ ಒಂದು ವರ್ಗದ ಜನರ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಬಾರದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಮಾಜದ ಶಾಂತಿಯನ್ನು ಎಲ್ಲರೂ ಕಾಪಾಡಬೇಕು. ರಾಜ್ಯದ ಸಮಸ್ಯೆ, ಸವಾಲುಗಳ ಬಗ್ಗೆ ಚರ್ಚೆ ನಡೆಸಬೇಕು. ಐತಿಹಾಸಿಕ ಪುರುಷರ ಬಗ್ಗೆ ಅನಗತ್ಯ ಚರ್ಚೆಗಳು ನಡೆಯುತ್ತಿರುವುದು ಸರಿಯಲ್ಲ’ ಎಂದರು.
ಮೀಸಲಾತಿ ವಿಚಾರ
‘ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಬಗ್ಗೆ ನಿರ್ಧರಿಸುತ್ತೇವೆ. ನ್ಯಾಯಾಲಯಗಳ ತೀರ್ಪು ಸೇರಿದಂತೆ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಕೂಡಲಸಂಗಮದ ಶ್ರೀಗಳ ಜೊತೆ ಈ ಬಗ್ಗೆ ಮಾತನಾಡುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ
ಬಿಜೆಪಿಯವರದ್ದು ಜನೋತ್ಸವ ಅಲ್ಲ ಭ್ರಷ್ಟೋತ್ಸವ ಎಂಬ ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿ, ‘ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ದಿಂಬು, ಹಾಸಿಗೆ, ನೆಲ–ನೀರು ಯಾವುದನ್ನೂ ಕಾಂಗ್ರೆಸ್‌ನವರು ಬಿಟ್ಟಿಲ್ಲ. ಜನೋತ್ಸವದ ಬಗ್ಗೆ ಈಗಲೇ ಕಾಂಗ್ರೆಸ್‌ಗೆ ಭಯ ಶುರುವಾಗಿ ಟೀಕೆ ಮಾಡುತ್ತಿದ್ದಾರೆ. ಐದು ವರ್ಷಗಳ ಕಾಂಗ್ರೆಸ್ ಆಡಳಿತವನ್ನು ನೋಡಿಯೇ ಜನ ಅವರನ್ನು ತಿರಸ್ಕರಿಸಿದ್ದಾರೆ’ ಎಂದು ಕುಟುಕಿದರು.
ಮೊಟ್ಟೆ ಎಸೆತ ಘಟನೆಗೆ ಬಗ್ಗೆ ಪ್ರತಿಕ್ರಿಯಿಸಿ, ‘ಆ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ಸಿದ್ದರಾಮಯ್ಯ ಅವರಿಗೂ ಜೀವ ಬೆದರಿಕೆ ಬಂದಿದೆ ಎಂಬ ಸುದ್ದಿ ಮಾಧ್ಯಮಗಳಲ್ಲೇ ಬಂದಿದೆ. ಅದರ ಬಗ್ಗೆಯೂ ತನಿಖೆ ನಡೆದಿದೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.