ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊರಡೂರ ಆಶ್ರಮ ದೇಶಪ್ರೇಮದ ಪ್ರತೀಕ’

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಸಾಮೂಹಿಕ ಶ್ರಮದಾನ
Last Updated 11 ಆಗಸ್ಟ್ 2021, 15:25 IST
ಅಕ್ಷರ ಗಾತ್ರ

ಹಾವೇರಿ: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗಾಗಿ ಕೊರಡೂರ ಗ್ರಾಮ ಸೇವಾಶ್ರಮದಲ್ಲಿ ಬುಧವಾರ ಸಾಮೂಹಿಕ ಶ್ರಮದಾನದ ಮೂಲಕ ಆಶ್ರಮದ ಆವರಣವನ್ನು ಸ್ವಚ್ಛಗೊಳಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಶ್ರಮದಾನದಲ್ಲಿ ಗ್ರಾಮದ ನೂರಾರು ಯುವಕರು ಸ್ವಯಂ ಪ್ರೇರಣೆಯಿಂದ ಭಾಗವಹಿಸಿ, ಅಧಿಕಾರಿಗಳಿಗೆ ಹಾಗೂ ಗ್ರಾಮಸ್ಥರಿಗೆ ನೆರವಾದರು.

ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಈ ಆಶ್ರಮ ದೇಶದಲ್ಲೇ ಒಂದು ಐತಿಹಾಸಿಕ ಕುರುಹು ಆಗಿದೆ. ಸ್ವಾತಂತ್ರ್ಯ ಯೋಧ ಮೈಲಾರ ಮಹಾದೇವಪ್ಪನವರ ಕರ್ಮಭೂಮಿಯಾದ ಕೊರಡೂರ ಗ್ರಾಮ ದೇಶಪ್ರೇಮದ ಪ್ರತೀಕವಾಗಿದೆ ಎಂದರು.

ಗಾಂಧೀಜಿಯವರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಮೈಲಾರ ಮಹದೇವಪ್ಪ ಅವರು ದಂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿದ ಕರ್ನಾಟಕ ಏಕೈಕ ವ್ಯಕ್ತಿಯಾಗಿದ್ದರು. ಇಂತಹ ಮಹಾನ್ ವ್ಯಕ್ತಿಯಿಂದ ಸ್ಥಾಪಿಸಲಾದ ಕೊರಡೂರ ಆಶ್ರಮ ಪವಿತ್ರವಾದ ಸ್ಥಳ. ಈ ಸ್ಥಳವನ್ನು ಇಲ್ಲಿನ ಯುವಕರು ಜತನದಿಂದ ಕಾಪಾಡಿಕೊಳ್ಳಬೇಕು, ಅಭಿವೃದ್ಧಿಪಡಿಸಬೇಕು. ಇದೊಂದು ಪ್ರವಾಸಿ ತಾಣವಾಗಿ ಬೆಳೆಸಬೇಕು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಸವರಾಜಪ್ಪ ಮಾತನಾಡಿ, ‘ಈ ಆಶ್ರಮ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ. ಮನರೇಗಾ ಸೇರಿದಂತೆ ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಯ ವಿವಿಧ ಅನುದಾನದಲ್ಲಿ ಕೊರಡೂರ ಗ್ರಾಮ ಸೇವಾಶ್ರಮದ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲಾಗುವುದು. ಆವರಣದಲ್ಲಿ ಉದ್ಯಾನ, ಇಲ್ಲಿನ ಐತಿಹಾಸಿಕ ಬಾವಿಯ ಪುನಶ್ಚೇತನ ಸೇರಿದಂತೆ ಗಾಂಧೀಜಿಯವರ ಸಾಬರಮತಿ ಆಶ್ರಮದ ಮಾದರಿಯಲ್ಲಿ ಅಭಿವೃದ್ಧಿಗೆ ಶ್ರಮಿಸಲಾಗುವುದು’ ಎಂದು ಹೇಳಿದರು.

ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರಿಯ ಸ್ಮಾರಕ ಟ್ರಸ್ಟ್‌ ತಿಪ್ಪನಗೌಡ ಮಾತನಾಡಿ, ‘ಸ್ವಾತಂತ್ರ್ಯ ಸೇನಾನಿಗಳನ್ನು ಸಿದ್ಧಗೊಳಿಸುವುದು, ಪ್ರತಿಯೊಬ್ಬ ಯುವಕರು ಆರೋಗ್ಯವಂತ ಜೀವನವನ್ನು ಸೃಷ್ಟಿಕೊಳ್ಳುವಂತೆ ಮಾಡುವುದು, ಖಾದಿ ಉತ್ಪಾದನೆ, ಅಸ್ಪೃಶ್ಯತೆ ನಿವಾರಣೆ ಮಾಡುವ ಉದ್ದೇಶದಿಂದ ಈ ಆಶ್ರಮವನ್ನು ನಿರ್ಮಿಸಲಾಯಿತು’ ಎಂದು ಹೇಳಿದರು.

ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ್ ಅವರು ಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚನ್ನಪ್ಪ ಅರಳಿ, ಈರಣ್ಣ ಕೋರಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ವಂದಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಜಿಲ್ಲಾ ಗ್ರಂಥಾಲಯ ಅಧಿಕಾರಿ ಪ್ರಸನ್ನ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾರದಾ ಜಾಲವಾಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬಾಲೆಹೊಸೂರು, ಸದಸ್ಯರಾದ ಸಂಗಯ್ಯ ಕಿತ್ತೂರಮಠ, ಬಸವಚಿತಪ್ಪ ಕಾಳೆ, ಫಕ್ಕಿರೇಶ ಕೋಡಬಾಳ, ಫಕ್ಕಿರೇಶ ಅರಳಿ, ಸಂಗಣ್ಣ ಅರಳಿ, ಚನ್ನಪ್ಪ ಅರಳಿ, ಸ್ಥಳಿಯ ಬಸವೇಶ್ವರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಶಿಕ್ಷಕರ ವೃಂದದ ಪದಾಧಿಕಾರಿಗಳು, ಗ್ರಾಮಸ್ಥರು ಶ್ರಮದಾನದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT