ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಕಾರ್ಮಿಕರಿಗೆ ಶ್ರಮಿಕ ರೈಲು ವ್ಯವಸ್ಥೆ

ಸ್ವಂತ ರಾಜ್ಯಗಳಿಗೆ ತೆರಳಲು ವ್ಯವಸ್ಥೆ: ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ
Last Updated 14 ಮೇ 2020, 14:32 IST
ಅಕ್ಷರ ಗಾತ್ರ

ಹಾವೇರಿ: ಉದ್ಯೋಗ ಇತರ ಕಾರಣಗಳಿಗಾಗಿ ಜಿಲ್ಲೆಯಲ್ಲಿ ಉಳಿದುಕೊಂಡಿರುವ ಝಾರ್ಖಂಡ್, ಬಿಹಾರ, ರಾಜಸ್ಥಾನ ಹಾಗೂ ಉತ್ತರ ಪ್ರದೇಶ ರಾಜ್ಯಗಳ ಕಾರ್ಮಿಕರು ಪ್ರಯಾಣ ವೆಚ್ಚ ಭರಿಸಿ ಸ್ವಂತ ರಾಜ್ಯಗಳಿಗೆ ತೆರಳಲು ವಿಶೇಷ ಶ್ರಮಿಕ ರೈಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿರುವ ಈ ನಾಲ್ಕು ರಾಜ್ಯಗಳ ಕಾರ್ಮಿಕರ ವಿವರನ್ನು ಸಲ್ಲಿಸಲು ತಹಶೀಲ್ದಾರಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಸೂಚನೆ ನೀಡಿದರು.

ತಾಲ್ಲೂಕು ಆಡಳಿತದೊಂದಿಗೆ ಗುರುವಾರ ವಿಡಿಯೊ ಸಂವಾದ ನಡೆಸಿದ ಅವರು ಈ ನಾಲ್ಕು ರಾಜ್ಯಗಳ ಕಾರ್ಮಿಕರ ಮಾಹಿತಿ ಸಂಗ್ರಹ, ಸೇವಾ ಸಿಂಧು ಆ್ಯಪ್‍ನಲ್ಲಿ ನೋಂದಣಿ ಹಾಗೂ ಪ್ರಯಾಣ ವ್ಯವಸ್ಥೆಯ ಉಸ್ತುವಾರಿಗಾಗಿ ತಾಲ್ಲೂಕುವಾರು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲು ಸೂಚನೆ ನೀಡಿದರು.

ಕಾರ್ಮಿಕರಿಗೆ ಬಸ್‌ ಸೌಲಭ್ಯ

ಆಯಾ ರಾಜ್ಯದ ಕಾರ್ಮಿಕರು ಈ ಜಿಲ್ಲೆಯೊಳಗಿದ್ದರೆ ಸ್ವ–ಇಚ್ಛೆಯ ಮೇರೆಗೆ ಅವರ ರಾಜ್ಯಕ್ಕೆ ತೆರಳಬಹುದು. ಜಿಲ್ಲೆಯಿಂದ ಹುಬ್ಬಳ್ಳಿ ರೈಲು ನಿಲ್ದಾಣದವರೆಗೆ ತೆರಳುವ ಕಾರ್ಮಿಕರಿಗೆ ರಾಜ್ಯ ರಸ್ತೆ ಸಾರಿಗೆ ಬಸ್ ವ್ಯವಸ್ಥೆ ಮಾಡಬೇಕು. ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿರಬೇಕು. ಒಂದೊಮ್ಮೆ ಅರ್ಜಿ ಸಲ್ಲಿಸಿ ಅನುಮೋದನೆ ಇಲ್ಲದಿದ್ದರೂ ಇವರ ಮಾಹಿತಿ ಪಡೆಯಬೇಕು. ಈವರೆಗೆ ಅರ್ಜಿ ಸಲ್ಲಿಸದೇ ಇರುವ ಕಾರ್ಮಿಕರು ತಮ್ಮ ಸ್ವಂತ ರಾಜ್ಯಕ್ಕೆ ತೆರಳಲು ಇಚ್ಛಿಸಿದಲ್ಲಿ ಅವರ ಮಾಹಿತಿಯನ್ನು ಸೇವಾ ಸಿಂಧುವಿನಲ್ಲಿ ದಾಖಲಿಸಬೇಕು. ದಾಖಲಾತಿಯ ಆರ್.ಡಿ.ನಂಬರ್ ಪಡೆದು ಸಲ್ಲಿಸಿದರೆ ಸಾಕಾಗುತ್ತದೆ ಎಂದು ತಿಳಿಸಿದರು.

ಉತ್ತರ ಪ್ರದೇಶ-235, ಬಿಹಾರ-60, ರಾಜಸ್ಥಾನ-11, ಝಾರ್ಖಂಡ್-7 ಜನರು ಇರುವುದಾಗಿ ಮಾಹಿತಿ ಇದೆ. ಮತ್ತೊಮ್ಮೆ ಪರಿಶೀಲಿಸಿ. ಈ ರಾಜ್ಯಗಳಿಗೆ ಯಾವ ದಿನಾಂಕ, ಯಾವ ಸಮಯದಲ್ಲಿ ಹುಬ್ಬಳ್ಳಿಯಿಂದ ರೈಲು ಹೊರಡಲಿದೆ ಎಂಬ ಮಾಹಿತಿಯನ್ನು ಹಾಗೂ ರೈಲು ಪ್ರಯಾಣ ವೆಚ್ಚದ ದರವನ್ನು ತಾಲ್ಲೂಕು ಆಡಳಿತಕ್ಕೆ ರವಾನಿಸಲಾಗುವುದು ಎಂದರು.

ಬಿಹಾರಕ್ಕೆ 19ರಂದು ರೈಲು

ಮೊದಲ ಹಂತದಲ್ಲಿ ಮೇ 19ರಂದು ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಬಿಹಾರ ರಾಜ್ಯಕ್ಕೆ ಹಾಗೂ ಜಾರ್ಖಂಡ್ ರಾಜ್ಯಕ್ಕೆ ರೈಲು ಹೊರಡಲಿದೆ. ಹುಬ್ಬಳ್ಳಿಯಿಂದ ಬಿಹಾರಕ್ಕೆ ಹೊರಟ ರೈಲು ನೇರವಾಗಿ ಬಿಹಾರ ರಾಜ್ಯದ ಕತೀಹಾರ ರೈಲು ನಿಲ್ದಾಣದಲ್ಲಿ ನಿಲ್ಲಲಿದೆ. ಝಾರ್ಖಂಡ್ ರಾಜ್ಯಕ್ಕೆ ತೆರಳುವ ರೈಲು ಹುಬ್ಬಳ್ಳಿಯಿಂದ ಹೊರಟು ಝಾರ್ಖಂಡ್ ರೈಲ್ವೆ ನಿಲ್ದಾಣದಲ್ಲಿ ನಿಲ್ಲಲಿದೆ. ಅದೇ ರೀತಿ ಹುಬ್ಬಳ್ಳಿಯಿಂದ ಆಯಾ ರಾಜ್ಯಕ್ಕೆ ಹೊರಡುವ ರೈಲುಗಳು ನೇರವಾಗಿ ರಾಜಸ್ಥಾನ, ಉತ್ತರ ಪ್ರದೇಶದಲ್ಲಿ ನಿಲ್ಲಲಿವೆ ಎಂದು ತಿಳಿಸಿದರು.

ಜಿಲ್ಲೆಯಿಂದ ನೇಮಕವಾದ ಅಧಿಕಾರಿಗಳು ಕಾರ್ಮಿಕರನ್ನು ನಿಗದಿತ ಸ್ಥಳದಲ್ಲಿ ಎಸ್.ಓ.ಪಿ. ಮಾರ್ಗಸೂಚಿಯಂತೆ ಆರೋಗ್ಯ ತಪಾಸಣೆ ನಡೆಸಬೇಕು. ಈ ಕುರಿತಂತೆ ವೈದ್ಯರಿಂದ ಪ್ರಮಾಣಪತ್ರ ಪಡೆದು ಆಯಾ ರಾಜ್ಯಗಳ ನೋಡಲ್ ಅಧಿಕಾರಿಗಳಿಗೆ ಕಳುಹಿಸಿ ಕೊಡಬೇಕು. ಸ್ಯಾನಿಟೈಸರ್, ಮಾಸ್ಕ್, ಊಟದ ಪಾಕೆಟ್‌, ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ಕಾರ್ಮಿಕರನ್ನು ಕಳುಹಿಸಿಕೊಡುವ ವ್ಯವಸ್ಥೆಯನ್ನು ಆಯಾ ತಹಶೀಲ್ದಾರ್‌ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ವಿಡಿಯೊ ಸಂವಾದದಲ್ಲಿ ಹಾವೇರಿ ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ತಹಶೀಲ್ದಾರ್‌ ಶಂಕರ್, ಚುನಾವಣಾ ತಹಶೀಲ್ದಾರ್‌ ಪ್ರಶಾಂತ ನಾಲವಾರ ಹಾಗೂ ಸವಣೂರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT