ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಬಡಾವಣೆಗೆ ಕಡಿವಾಣ ಹಾಕಿ: ಅಧಿಕಾರಿಗಳಿಗೆ ಸಚಿವ ಬೈರತಿ ಬಸವರಾಜು ಸೂಚನೆ

ಆಗಸ್ಟ್ 15ರೊಳಗಾಗಿ ಹಾವೇರಿ–ರಾಣೆಬೆನ್ನೂರು ಕುಡಿಯುವ ನೀರು ಕಾಮಗಾರಿಗೆ ಚಾಲನೆ
Last Updated 4 ಜುಲೈ 2020, 14:20 IST
ಅಕ್ಷರ ಗಾತ್ರ

ಹಾವೇರಿ: ಅನಧಿಕೃತ ಖಾಸಗಿ ಬಡಾವಣೆಗಳ ರಚನೆಗೆ ಕಡಿವಾಣ ಹಾಕಿ ನಗರಾಭಿವೃದ್ಧಿ ಪ್ರಾಧಿಕಾರದಿಂದಲೇ ಹೊಸ ನಿವೇಶನ ರಚಿಸಿ, ವಿತರಣೆಗೆ ಕ್ರಮವಹಿಸಲು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಸೂಚನೆ ನೀಡಿದರು.

ಹಾವೇರಿ ನಗರಸಭೆ ಸಭಾಂಗಣದಲ್ಲಿ ಶನಿವಾರ ನಗರಾಭಿವೃದ್ಧಿ ಪ್ರಾಧಿಕಾರ, ನಗರ ಕುಡಿಯುವ ನೀರು ಯೋಜನೆ, ಒಳಚರಂಡಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು ರೈತರ ಸಹಭಾಗಿತ್ವದಲ್ಲಿ ಹೊಸ ನಿವೇಶನ ರಚನೆಯಾಗಬೇಕು. ರೈತರಿಗೆ ಶೇ 50 ಹಾಗೂ ಪ್ರಾಧಿಕಾರಕ್ಕೆ ಶೇ 50ರ ಹಂಚಿಕೆ ಪ್ರಮಾಣದಲ್ಲಿ ಜಮೀನು ಪಡೆದು ನಿವೇಶನವಾಗಿ ಅಭಿವೃದ್ಧಿಪಡಿಸಿ ವಿತರಣೆಗೆ ಕ್ರಮವಹಿಸಬೇಕು. ಈ ಕೆಲಸ ತ್ವರಿತವಾಗಿ ಕೈಗೊಳ್ಳುವಂತೆ ಸೂಚನೆ ನೀಡಿದರು.

ಸಂಪನ್ಮೂಲ ಕ್ರೋಡೀಕರಿಸಿ:

ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಂಪನ್ಮೂಲ ಕ್ರೋಡೀಕರಣ ಕಾಮಗಾರಿಗಳಿಗೆ ಒತ್ತು ನೀಡಬೇಕು. ಸಿ.ಎ ಸೈಟ್‍ಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಖಾಸಗಿ ಬಡಾವಣೆಗಳ ನಿರ್ಮಾಣದಿಂದ ಸರ್ಕಾರಕ್ಕೆ ಆದಾಯವೂ ಕಡಿಮೆ, ಜನರಿಗೆ ಸಮಸ್ಯೆಯೂ ಹೆಚ್ಚು. ಮೂಲಸೌಕರ್ಯ ಕಲ್ಪಿಸುವುದು ಕಷ್ಟ. ಇದರ ಬದಲಾಗಿ ಸರ್ಕಾರದ ವತಿಯಿಂದಲೇ ನಗರಾಭಿವೃದ್ಧಿ ಪ್ರಾಧಿಕಾರದಿಂದಲೇ ನಿವೇಶನ ರಚನೆ ಕಾರ್ಯಕ್ಕೆ ಆದ್ಯತೆ ನೀಡುವಂತೆ ಸೂಚಿಸಿದರು.

ಆಗಸ್ಟ್ 15ಕ್ಕೆ ರಾಣೆಬೆನ್ನೂರಿನ ಕುಡಿಯುವ ನೀರು ಮತ್ತು ಯುಜಿಡಿ ಕಾಮಗಾರಿಗಳ ಉದ್ಘಾಟನೆ ಹಾಗೂ ಹಾವೇರಿ ನಗರದ ಎರಡನೇ ಹಂತದ ಕುಡಿಯುವ ನೀರಿನ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಈ ವೇಳೆಗೆ ಕಾಮಗಾರಿ ಸಿದ್ಧವಾಗದಿದ್ದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜುರಗಿಸಲಾಗುವುದು ಎಂದು ಎಚ್ಚರಿಸಿದರು.

ಶಿಗ್ಗಾವಿ ನಗರದ ಯುಜಿಡಿ ಯೋಜನೆ ಹಾಗೂ ಸವಣೂರ ಪಟ್ಟಣದ ಕುಡಿಯುವ ನೀರಿನ ಯೋಜನೆ, ಹಿರೇಕೆರೂರು ಪಟ್ಟಣದ ಕುಡಿಯುವ ನೀರಿನ ಯೋಜನೆ, ಒಳಚರಂಡಿ ಯೋಜನೆಯ ಪರಿಷ್ಕತ ಯೋಜನೆ, ಶಿಗ್ಗಾವಿ, ಸವಣೂರ, ಬಂಕಾಪುರ ಕುಡಿಯುವ ನೀರಿನ ಯೋಜನೆಗೆ ಪರ್ಯಾಯ ಜಲಾಶಯ ನಿರ್ಮಾಣ, ಹಾನಗಲ್ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ಕುರಿತಂತೆ ಪರಿಶೀಲಿಸಿ ಪ್ರಸ್ತಾವ ಸಲ್ಲಿಸುವಂತೆ ಸಂಬಂಧಿಸಿದ ಚೀಫ್‌ ಎಂಜಿನಿಯರ್‌ಗೆ ಸೂಚನೆ ನೀಡಿದರು.

ನೀರಿನ ಕಾಮಗಾರಿ ಪೂರ್ಣಗೊಳಿಸಿ:

ಜಿಲ್ಲೆಯ ನಗರ ಪ್ರದೇಶಗಳಲ್ಲಿ ಯು.ಜಿ.ಡಿ. ಕಾಮಗಾರಿ ಅನುಷ್ಠಾನಕ್ಕೆ ನಿವೇಶನ ಸಮಸ್ಯೆಗಳು ತಕಾರರುಗಳಿದ್ದರೆ ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಹಾಗೂ ಮಂದಗತಿಯಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಕಾಮಗಾರಿ ಹಾಗೂ ಯುಜಿಡಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ವಿಳಂಬಕ್ಕೆ ಅವಕಾಶ ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪೌರಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿ, ಸ್ಥಳೀಯವಾಗಿ ನಿರ್ಧಾರ ಕೈಗೊಂಡು ಘಟನೋತ್ತರ ಅನುಮೋದನೆಗೆ ಸರ್ಕಾರಕ್ಕೆ ಕಳುಹಿಸಿದರೆ ಅದನ್ನು ಬಗೆಹರಿಸಲಾಗುವುದು ಎಂದು ಸೂಚನೆ ನೀಡಿದರು.

ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಮುನ್ನೆಚ್ಚರಿಕೆ ಕುರಿತಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಮಾಹಿತಿ ನೀಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಆರ್.ವಾಸಣ್ಣ ಪ್ರಾಧಿಕಾರದ ಚಟುವಟಿಕೆಗಳ ಕುರಿತಂತೆ ವಿವರಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿ.ಪಂ.ಸದಸ್ಯ ಸಿದ್ಧರಾಜ ಕಲಕೋಟಿ, ನಗರಸಭೆ ಆಯುಕ್ತರಾದ ಬಸವರಾಜ ಜಿದ್ದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT