ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆ ಅರಳಲು ಪ್ರೋತ್ಸಾಹ ಅಗತ್ಯ: ಎನ್‌.ಎಂ. ಸಾಲಿ ಅಭಿಮತ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವ ಎನ್‌.ಎಂ. ಸಾಲಿ ಅಭಿಮತ
Last Updated 30 ಅಕ್ಟೋಬರ್ 2020, 16:35 IST
ಅಕ್ಷರ ಗಾತ್ರ

ಹಾವೇರಿ: ‘ಎಷ್ಟೇ ಪ್ರತಿಭೆ ಇದ್ದರೂ ಕೂಡಾ ಕಲಾವಿದನಿಗೆ ಜನ ಸಮುದಾಯದ ಪ್ರೋತ್ಸಾಹ ಬೇಕೇ ಬೇಕು. ಅತ್ಯಂತ ಸಣ್ಣ ಸಮುದಾಯ ಮತ್ತು ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಪರಶುರಾಮ ಲಮಾಣಿ ಜಾನಪದ ವಿಶ್ವವಿದ್ಯಾಲಯದ ದೃಶ್ಯ ಕಲಾ ಮಾಧ್ಯಮ ವಿಭಾಗದಲ್ಲಿ ಬೆಳೆಯುತ್ತಿರುವ ಚಿಗುರು. ಲಮಾಣಿ ಅವರಿಗೆ ಸಂಪೂರ್ಣ ಸಹಕಾರ ನೀಡಲಾಗುತ್ತದೆ’ ಎಂದು ಜಾನಪದ ವಿಶ್ವವಿದ್ಯಾಲಯದ ಕುಲಸಚಿವ ಎನ್‌.ಎಂ. ಸಾಲಿ ಹೇಳಿದರು.

ನಗರದ ಡಿ.ಸಿ.ಕಚೇರಿ ರಸ್ತೆಯ ಹಂಚಿನಮನಿ ಆರ್ಟ್‌ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಯುವ ಕಲಾವಿದ ಪರಶುರಾಮ ಲಮಾಣಿ ಅವರ ಎರಡು ದಿನಗಳ ‘ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ’ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಮಾತನಾಡಿ, ‘ಕಲೆ ಜೀವ ಭಯವನ್ನು ಕೂಡ ಮರೆಸುತ್ತದೆ. ಅಂತಹ ಶಕ್ತಿ ಲಲಿತಕಲೆಗಳಿಗಿವೆ. ತಾನೂ ಬೆಳೆಯಬೇಕು. ಇತರರನ್ನೂ ಬೆಳೆಸಬೇಕು. ಜೊತೆಗೆ ಸಮಾಜ ಪರವಾಗಿ ತುಡಿತಗಳಿರಬೇಕು. ಅಂತಹ ಸೌಜನ್ಯ ವಿವೇಕಗಳು ಪರಶುರಾಮರಲ್ಲಿವೆ. ಈತ ಬೆಳೆಯಬಲ್ಲ ಕಲಾವಿದ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಲಾವಿದ ಕರಿಯಪ್ಪ ಹಂಚಿನಮನಿ ಮಾತನಾಡಿ, ‘ಕಲೆ ಎಂದರೆ ಕತ್ತಲೊಳಗಿನ ಪಯಣವಿದ್ದಂತೆ. ಬೆಳಕನ್ನು ಹುಡುಕುವುದೇ ಕಲಾವಿದನ ಕೆಲಸ. ಪರಶುರಾಮ ಲಮಾಣಿ ಅತ್ಯಂತ ಸೂಕ್ಷ್ಮ ಮನಸ್ಸಿನ ಕಲಾವಿದರು. ನಮ್ಮ ಚಿತ್ರಗಳು, ನಮ್ಮ ಮನಸ್ಸಿನ ಬಿಂಬಗಳಾಗಿರಬೇಕು’ ಎಂದರು.

ಪರಶುರಾಮ ಲಮಾಣಿ ಅವರ ತಂದೆ ಶೇಖಪ್ಪ, ತಾಯಿ ಗಂಗವ್ವ ಅವರನ್ನು ಗಣ್ಯರು ಸನ್ಮಾನಿಸಿದರು. ಡಾ.ಶಂಕರ ಕುಂದಗೋಳ, ಅಶೋಕ ನೆಲ್ಲಗಿ ಮಾತನಾಡಿದರು. ನಾಗರತ್ನಾ ಪಾಟೀಲ, ಕೋಟೆಪ್ಪ ಸ್ವಾದಿ, ಶಾಂತಪ್ಪ ಲಮಾಣಿ ಹಾಗೂ ಶಂಕ್ರಪ್ಪ ಲಮಾಣಿ ಇದ್ದರು.

ಜಗದೀಶ ಚೌಟಗಿ ಸ್ವಾಗತಿಸಿದರೆ, ನಾಗರಾಜ ನಡುವಿನಮಠ ನಿರೂಪಿಸಿದರು. ಕಲಾವಿದ ಸಿದ್ಧಲಿಂಗಪ್ಪ ಕುರಬರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT