ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮ್ಮಿನಕಟ್ಟಿ: ನೀರು ಶುದ್ಧೀಕರಣ ಘಟಕವೇ ಅಶುದ್ಧ

ನಿರ್ವಹಣೆ ಕೊರತೆ : ಪಾಚಿ ಕಟ್ಟಿದ ತೊಟ್ಟಿಗಳು
Published 6 ಆಗಸ್ಟ್ 2024, 4:58 IST
Last Updated 6 ಆಗಸ್ಟ್ 2024, 4:58 IST
ಅಕ್ಷರ ಗಾತ್ರ

ತುಮ್ಮಿನಕಟ್ಟಿ: ಗ್ರಾಮದ ಜಲ ಶುದ್ಧೀಕರಣ ಘಟಕದ ತೊಟ್ಟಿಗಳು ಹಸಿರು ಪಾಚಿ ಕಟ್ಟಿವೆ. ನಿರ್ವಹಣೆ ಇಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಸ್ವಚ್ಛತೆ ಇಲ್ಲಿ ಮರೀಚಿಕೆಯಾಗಿದೆ. ನೀರನ್ನು ಶುದ್ಧೀಕರಿಸಿದೇ ತುಂಗಭದ್ರಾ ನದಿಯಿಂದ ನೇರವಾಗಿ ಪೂರೈಸುವ ಸ್ಥಿತಿ ನಿರ್ಮಾಣವಾಗಿದೆ.

ಸದ್ಯ ಪೂರೈಕೆ ಆಗುತ್ತಿರುವ ನೀರಿನ ಸೇವನೆ ಹಾಗೂ ವಾತಾವರಣದ ವೈಪರೀತ್ಯದಿಂದಾಗಿ ಜನರ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ. ಹೀಗಾಗಿ, ಜನರ ಮೇಲೆ ದುಷ್ಪರಿಣಾಮ ಬೀರುವ ಮುನ್ನ ಗ್ರಾಮ ಪಂಚಾಯಿತಿ  ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಶುದ್ಧೀಕರಿಸಿದ ನೀರನ್ನು ಪೂರೈಸಲು ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹಾಗೂ ಲೋಕೋಪಯೋಗಿ ಸಚಿವ ಅಶ್ವಥರೆಡ್ಡಿ ಅವರಿಂದ 1987ರಲ್ಲಿ ಈ ಜಲ ಶುದ್ಧೀಕರಣ ಘಟಕ ನಿರ್ಮಾಣದ ಅಡಿಗಲ್ಲು ಹಾಕಲಾಗಿತ್ತು. ಆಗ ಅಬ್ದುಲ್ ನಜೀರ್ ಸಾಬ್, ನೀರಾವರಿ ಸಚಿವರಾಗಿದ್ದರು. ಅಂದು ಎಲ್ಲರೂ ನೀಡಿದ ಸಹಕಾರದಿಂದ ನಿರ್ಮಾಣವಾದ ಈ ಜಲ ಶುದ್ಧೀಕರಣ ಘಟಕ, ರಾಜ್ಯದಲ್ಲೇ ಮೊದಲನೆಯದಾಗಿತ್ತು ಎಂದು ಸ್ಥಳೀಯರು ಹೇಳಿದರು.

ಸಕಾಲಕ್ಕೆ ನಿರ್ವಹಣೆ ಇಲ್ಲದೆ ತೊಟ್ಟಿಗಳು ಪಾಚಿ ಕಟ್ಟಿವೆ. ಸುತ್ತಲೂ ಗಿಡಗಂಟಿಗಳು ಬೆಳೆದು ಸ್ವಚ್ಛತೆ ಮಾಯವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಘಟಕ ಶುದ್ಧೀಕರಣ ಮಾಡದಿದ್ದರಿಂದ, ನಾನಾ ಸಮಸ್ಯೆಗಳು ಉಂಟಾಗುತ್ತಿವೆ. ಶುದ್ಧ ಕುಡಿಯುವ ನೀರಿನ ಬಗ್ಗೆ ಪ್ರಶ್ನಿಸಿದರೆ, ಈಗ ಕುಡಿಯುವ ನೀರನ್ನು ನದಿಯಿಂದ ನೇರವಾಗಿ ಪೂರೈಸುತ್ತಿಲ್ಲ. ಭೈರನಪಾದದ ಬಳಿ ಇರುವ ಶುದ್ಧೀಕರಣ ಘಟಕದಿಂದ ಪೂರೈಸಲಾಗುತ್ತಿದೆ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಜೊತೆಗೆ, ನೀರನ್ನು ಕುದಿಸಿ ಆರಿಸಿ ಕುಡಿಯುವಂತೆ ಹೇಳುತ್ತಿದ್ದಾರೆ ಎಂದು ಜನರು ತಿಳಿಸಿದರು.

‘ನೀರು ಶುದ್ಧೀಕರಣ ಘಟಕದ ತೊಟ್ಟಿಗಳನ್ನು ಸಂಪೂರ್ಣ ಒಣಗಲು ಬಿಡಲಾಗಿದೆ. ಒಣಗಿದ ಬಳಿಕ ಸ್ವಚ್ಛಗೊಳಿಸಿ, ಬೇರೆ ಮರಳು ಹಾಕಿ ಶುದ್ಧೀಕರಿಸಿದ ನೀರು ಪೂರೈಸಲಾಗುವುದು. ಆರಂಭದಲ್ಲಿ ನದಿ ನೀರನ್ನು ನೇರವಾಗಿ ಪೂರೈಸಿದ್ದು, ಈಗ ಪೂರೈಸುತ್ತಿಲ್ಲ. ಘಟಕದ ಸುತ್ತಲೂ ಈಗಾಗಲೇ ಸ್ವಚ್ಛತಾ ಕಾರ್ಯ ಆರಂಭಿಸಿದ್ದು, ಗಿಡಗಂಟಿ ತೆರವುಗೊಳಿಸಲಾಗುವುದು’ ಎಂದು ತುಮ್ಮಿನಕಟ್ಟಿ ಗ್ರಾ.ಪಂ. ಅಧ್ಯಕ್ಷ ಮಂಜುನಾಥ ಹೊನ್ನಾಳಿ ಹೇಳಿದರು.

ನಿರಂತರ ಮಳೆಯಾಗುತ್ತಿದ್ದು ತೊಟ್ಟಿಗಳನ್ನು ಸ್ವಚ್ಛಗೊಳಿಸಲು ಅವಕಾಶವಿಲ್ಲ. ಮಳೆ ಕಡಿಮೆಯಾದ ನಂತರ ತೊಟ್ಟಿಗಳನ್ನು ಸ್ವಚ್ಛಗೊಳಿಸಿ ಶುದ್ಧೀಕರಿಸಿದ ನೀರನ್ನು ಪೂರೈಸಲಾಗುವುದು.
ಬಸನಗೌಡ ಪಾಟೀಲ, ಪಿಡಿಒ, ತುಮ್ಮಿನಕಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT