ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಡಗಿ: ಗಂಧದ ಮರ ಕಳವು

Published 31 ಜನವರಿ 2024, 4:14 IST
Last Updated 31 ಜನವರಿ 2024, 4:14 IST
ಅಕ್ಷರ ಗಾತ್ರ

ಬ್ಯಾಡಗಿ: ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಲ್ಲಿ ಬೆಳೆಸಲಾಗಿದ್ದ ಶ್ರೀಗಂಧದ 4 ಮರಗಳನ್ನು ಕತ್ತರಿಸಿರುವ ಕಳ್ಳರು ಒಂದನ್ನು ತೆಗೆದುಕೊಂಡು ಹೋಗಿರುವ ಘಟನೆ ಜ. 27ರ ತಡರಾತ್ರಿ ನಡೆದಿದೆ.

ಘಟನೆ ನಡೆದ ಎರಡು ದಿನಗಳ ಬಳಿಕ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾದರು. ಆದರೆ ದೂರು ಪತ್ರದ ಜೊತೆಗೆ ಉತಾರ ಪ್ರತಿ ಸಲ್ಲಿಸುವಂತೆ ಸೂಚಿಸಿದ ಕಾರಣ ಇನ್ನೂ ದೂರು ದಾಖಲಾಗಿಲ್ಲ. ಈ ಮೊದಲು ಶ್ರೀಗಂಧದ ಮರ ಕಳವಾಗಿರುವ ಬಗ್ಗೆ ಮೌಖಿಕವಾಗಿ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಘಟನೆ ಪಟ್ಟಣದ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ಮೊದಲು ಪೊಲೀಸ್ ಠಾಣೆಗೆ ದೂರು ಸಲ್ಲಿಸುವಂತೆ ಸೂಚಿಸಿದ್ದರು ಎಂದು ಲೋಕೋಪಯೋಗಿ ಇಲಾಖೆಯ ಎಇಇ ಉಮೇಶ ನಾಯ್ಕ ತಿಳಿಸಿದ್ದಾರೆ.

ಸರ್ಕಾರಿ ಕಚೇರಿ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರೂ ಶ್ರೀಗಂಧದ ಮರ ಕಡಿದು ಸಾಗಿಸುವಲ್ಲಿ ಕಳ್ಳರು ಚಾಣಾಕ್ಷತೆ ಮೆರೆದಿದ್ದಾರೆ. ಪಟ್ಟಣದ ನೆಹರೂ ನಗರ ಮತ್ತು ಮೇಲಗಿರಿ ಪ್ಲಾಟ್‌ನ ಮನೆಯ ಆವರಣದಲ್ಲಿ ಬೆಳೆಸಲಾಗಿದ್ದ ಶ್ರೀಗಂಧದ ಮರಗಳು ಕಳವಾಗಿದ್ದರೂ ಮನೆಯ ಮಾಲೀಕರು ದೂರು ಕೊಡಲು ಮುಂದಾಗಿಲ್ಲ. ಅರಣ್ಯ ಕಾಯ್ದೆಯ ಅನ್ವಯ ಮರ ಬೆಳೆಸಿರುವ ಬಗ್ಗೆ ಸ್ಥಳೀಯ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕಿದೆ. ಕಚೇರಿಗೆ ಅಲೆಯುವ ಉಸಾಬರಿ ಬೇಡ ಎಂದು ನಿವಾಸಿಗಳು ಸುಮ್ಮನಾಗಿದ್ದಾರೆ ಎನ್ನಲಾಗಿದೆ.

‘ಪಟ್ಟಣ ವ್ಯಾಪ್ತಿಯಲ್ಲಿ ಪೊಲೀಸರು ಗಸ್ತು ತಿರುಗುತ್ತಾರೆ. ಮರಗಳವಿನ ಪ್ರಕರಣಗಳ ದೂರುಗಳು ಐಪಿಸಿ ಸೆಕ್ಷನ್‌ಗೆ ಒಳಪಡುವುದರಿಂದ ಪೊಲೀಸ್ ಠಾಣೆಯಲ್ಲಿ ಮೊದಲು ದೂರು ದಾಖಲಾಗಬೇಕು. ಬಳಿಕ ಅವರು ಅರಣ್ಯ ಇಲಾಖೆಗೆ ವರ್ಗಾಯಿಸುತ್ತಾರೆ. ಅರಣ್ಯದಲ್ಲಿ ಕಳವಿನ ಪ್ರಕರಣಗಳು ಸಂಭವಿಸಿದರೆ ಮಾತ್ರ ನಮ್ಮಲ್ಲಿ ದೂರು ದಾಖಲಿಸಬಹುದು’ ಎಂದು ವಲಯ ಅರಣ್ಯಾಧಿಕಾರಿ ಕಾಂತೇಶ ಬೇಲೂರ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT