ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಗತ್ತಿಗೆ ಶಾಂತಿ ಸಂದೇಶ ಸಾರಿದ ಪೈಗಂಬರ್‌’

‘ಬಹಾರ್‌ ಎ ಮದೀನಾ’ ಕಾರ್ಯಕ್ರಮ
Last Updated 13 ನವೆಂಬರ್ 2019, 11:35 IST
ಅಕ್ಷರ ಗಾತ್ರ

ತಿಳವಳ್ಳಿ: ‘ವಿಶ್ವ ಮಾನವತಾ ಸಂದೇಶದ ಮೂಲಕ ಜಗತ್ತಿನ ಸಕಲ ಜೀವಾತ್ಮರಿಗೂ ಘನತೆ ಮತ್ತು ಗೌರವದ ಬದುಕಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ ಕೀರ್ತಿ ಪ್ರವಾದಿ ಮಹಮ್ಮದ್ ಪೈಗಂಬರ್‌ ಅವರಿಗೆ ಸಲ್ಲುತ್ತದೆ’ ಎಂದು ಸೂಫಿ ಹಜರತ್‌ ಗೌಸ್‌ ಮೊಯಿದ್ದೀನ್‌ ಅಲಿ ಶಾ ಖಾದ್ರಿ ಹೇಳಿದರು.

ಇಲ್ಲಿಗೆ ಸಮೀಪದ ಗೊಂದಿ ಗ್ರಾಮದಲ್ಲಿ ಗ್ಲೋಬಲ್ ಸೂಫಿ ಫೋರಂ ಮತ್ತು ಖಾನ್‌ಖಾ ಎ ಫಕ್ರಿಯಾ ಗೌಸಿಯಾ ಆಶ್ರಯದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ಆಯೋಜಿಸಲಾಗಿದ್ದ ‘ಬಹಾರ್‌ ಎ ಮದೀನಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂದಿನ ಅರಬ್ ದೇಶಗಳ ಜನರಲ್ಲಿ ಬೇರೂರಿದ್ದ ಹಲವಾರು ಅಂಧ ಮತ್ತು ಅಮಾನವೀಯ ಆಚರಣೆಗಳಿಗೆ ಪೈಗಂಬರ್ ತಮ್ಮ ಜೀವನ ಮತ್ತು ಸಂದೇಶಗಳ ಮೂಲಕ ತಿಲಾಂಜಲಿ ನೀಡಿದರು‘ ಎಂದು ಹೇಳಿದರು.

‘ಅರಬ್‌ನಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಜೀವಂತವಾಗಿ ಹೆಣ್ಣು ಮಕ್ಕಳನ್ನು ಹೂಳುವ ಅನಿಷ್ಟ ಸಂಪ್ರದಾಯ, ಬಡವರನ್ನು ಜೀವನ ಪೂರ್ತಿ ಗುಲಾಮರನ್ನಾಗಿ ನೇಮಿಸಿಕೊಂಡು ಕಾಡು ಪ್ರಾಣಿಗಳಂತೆ ಅವರನ್ನು ಬಳಸಿಕೊಳ್ಳುತ್ತಿದ್ದ ಶ್ರೀಮಂತರ ಮಾನವ ವಿರೋಧಿ ಚಟುವಟಿಕೆಗಳನ್ನು ಪ್ರವಾದಿ ಮಹಮ್ಮದ್‌ ಅರವರು ನಿಲ್ಲಿಸಿ ಮಾನವೀಯತೆಯ ಪಾಠವನ್ನು ಬೋಧಿಸಿದರು’ ಎಂದರು.

‘ಅಂದಿನ ಕಾಲದಲ್ಲಿ ವಿಧವಾ ವಿವಾಹವನ್ನು ಕಾನೂನು ಬದ್ಧಗೊಳಿಸಿ ಮಹಿಳೆಯರ ಗೌರವದ ಬದುಕಿಗೆ ನ್ಯಾಯ ಒದಗಿಸಿದ ಕೀರ್ತಿ ಪೈಗಂಬರ್‌ ಅವರಿಗೆ ಸಲ್ಲುತ್ತದೆ‘ ಎಂದು ಹೇಳಿದರು.

ಗ್ಲೋಬಲ್ ಸೂಫಿ ಫೋರಂ ಅಧ್ಯಕ್ಷ ಯಾಸೀರ ಅರಾಫತ್ ಮಕಾನ್‌ದಾರ ಮಾತನಾಡಿ, ‘ಪ್ರವಾದಿ ಮಹಮ್ಮದ ಪೈಗಂಬರ್‌ ಎಂದೂ ಹಿಂಸೆಗೆ ಪ್ರಚೋದನೆ ನೀಡಿದವರಲ್ಲ. ವಿನಃ ಕಾರಣ ಮಾನವ ಮತ್ತು ಪ್ರಾಣಿ, ಪಕ್ಷಿಗಳ ಹತ್ಯೆ ಮಹಾ ಪಾಪವೆಂದು ಸಾರಿದವರು. ಇಂತಹ ಮಹಾತ್ಮರ ಅನುಯಾಯಿಗಳು ಎಂದೂ ಯಾವುದೇ ಜೀವಿಯ ಮತ್ತು ಅಮಾಯಕರ ಹತ್ಯೆಯನ್ನು ಮಾಡುವುದಿಲ್ಲ, ಇಸ್ಲಾಂ ಹೆಸರಿನಲ್ಲಿ ಅಮಾಯಕರ ಹತ್ಯೆ ಮಾಡುತ್ತಿರುವವರು, ಹಿಂಸೆಯಲ್ಲಿ ತೊಡಗಿಕೊಂಡಿರುವವರು ಪ್ರವಾದಿ ಮಹಮ್ಮದ್ ಪೈಗಂಬರ್‌ ಅವರ ಅನುಯಾಯಿ ಆಗಿರಲಾರರು’ ಎಂದರು.

ಗ್ಲೋಬಲ್ ಸೂಫಿ ಫೋರಂ ಕಾರ್ಯದರ್ಶಿ ಮುಜೀಬುರ್‌ ರೆಹಮಾನ್‌ ಸೋಮಸಾಗರ ಮಾತನಾಡಿ, ‘ಪೈಗಂಬರ್‌ ಅವರ ಜೀವನ ಮತ್ತು ಸಂದೇಶಗಳು ಸಮಸ್ತ ಮಾನವ ಸಮುದಾಯಕ್ಕೆ ಪ್ರಸ್ತುತವಾಗಿದ್ದು, ಇಂತಹ ಮಹಾತ್ಮರನ್ನು ಕೇವಲ ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸದೆ ಪ್ರತಿಯೊಬ್ಬರು ಅದನ್ನು ತಮ್ಮ ಜೀವನಕ್ರಮದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ’ ಎಂದರು.

ಗ್ಲೋಬಲ್ ಸೂಫಿ ಫೋರಂ ಸಂಪನ್ಮೂಲ ವ್ಯಕ್ತಿ ಮೌಲಾನಾ ನಿಜಾಮುದ್ದೀನ್‌ ಖಾದ್ರಿ, ಪೈಗಂಬರ್‌ ಅವರ ಜೀವನ ಮತ್ತು ಸಂದೇಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಫೋರಂ ನಿರ್ದೇಶಕ ಅಬ್ದುಲ್ ರೆಹಮಾನ್‌ ಖಾದ್ರಿ, ತಬ್ರೇಜ್‌ ಬನವಾಸಿ ಸಂಗಡಿಗರಿಂದ ಮತ್ತು ಶಾಲಾ ಮಕ್ಕಳಿಂದ ಪ್ರವಾದಿ ಮಹಮ್ಮದ್ ಅವರ ಜೀವನ ಮತ್ತು ಸಂದೇಶ ಕುರಿತು ನಾಥ್‌ ಹಾಡಿದರು.

ಸೂಫಿ‌ ನಜೀರ್‌ ಅಹ್ಮದ ಖಾದ್ರಿ, ಫೋರಂ ನಿರ್ದೇಶಕ ಮಹ್ಮದ್‌ ಖಾಸಿಂ ಹವಾಲ್ದಾರ್, ಮುಖ್ಯ ಸಂಘಟಕ ರಫೀಕ್‌ ಅಹ್ಮದ್‌ ಪಿ.ಜೆ, ಮಾಧ್ಯಮ ಸಂಯೋಜಕ ಗೋಪಾಲರಾವ್‌ ನಾಯಕ, ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಅಜೀಜ್‌ ಬಂಕಾಪುರ, ಗೊಂದಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಮಹ್ಮದ್‌ ಗೌಸ್ ಗಡ್ಡದ, ಮೆಹಬೂಬ್‌ ಭೂಸಿ, ನೂರ್‌ ಅಹ್ಮದ್‌ ಸಕ್ಕರಕಡ್ಡಿ, ಮೆಹಬೂಬ ಅಲಿ ಹಿರೂರ, ಮುಬಾರಕ್‌ ಬನವಾಸಿ, ಜಾಕೀರ್‌ ಅಹ್ಮದ್‌ ಅತ್ತಾರ, ಖಲಂದರ್‌ ಪರೂದಿ, ಗೊಂದಿ ಅಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT