ಸೋಮವಾರ, ಜೂನ್ 21, 2021
28 °C
ಸರ್ಕಾರಿ ಜಾಗ ಅತಿಕ್ರಮಣ: ಆರೋಪ

ತುಮ್ಮಿನಕಟ್ಟಿ: ಒತ್ತುವರಿ ತೆರವು ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮ್ಮಿನಕಟ್ಟಿ: ಸರ್ಕಾರಿ ಜಾಗ ಎನ್ನಲಾಗುತ್ತಿರುವ 37 ಗುಂಟೆ ಜಾಗವನ್ನು ಗ್ರಾಮದ ಸಿದ್ದರಾಮಪ್ಪ ಸದಾಶಿವಪ್ಪ ಹೊಸಮನಿ ಕುಟುಂಬ ಒತ್ತುವರಿ ಮಾಡಿಕೊಂಡಿದೆ ಎಂದು ಆರೋಪಿಸಿ, ಗ್ರಾಮ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳು ಗುರುವಾರ ತೆರವು ಕಾರ್ಯ ಕೈಗೊಂಡು ಜಾಗವನ್ನು ವಶಕ್ಕೆ ಪಡೆದಿದ್ದಾರೆ.

‘ಗ್ರಾಮ ಪಂಚಾಯ್ತಿಗೆ ಸೇರಿದ ಜಾಗವನ್ನು ಅತಿಕ್ರಮಿಸಿಕೊಂಡು ಕೃಷಿ ಚಟುವಟಿಕೆ ಕೈಗೊಂಡಿದ್ದರು. ಪಂಚಾಯ್ತಿ ವತಿಯಿಂದ 6 ತಿಂಗಳಲ್ಲಿ 3 ಬಾರಿ ಸರ್ವೆ ಮಾಡಿಸಿ ತೆರವುಗೊಳಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಒತ್ತುವರಿದಾರರು ಜಾಗ ಬಿಟ್ಟು ಕೊಡಲು ನಿರಾಕರಿಸಿದ್ದರು’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್‌.ಮಲ್ಲಾಡದ ಹೇಳಿದರು.

ನೀವು ಬೇರೆ ಜಾಗ ಬಳಸಿಕೊಳ್ಳಿ ಎಂದು ಒತ್ತುವರಿ ತೆರವು ಕಾರ್ಯಕ್ಕೆ ಹೊಸಮನಿ ಕುಟುಂಬಸ್ಥರು ಒಪ್ಪದ ಹಿನ್ನೆಲೆಯಲ್ಲಿ ಪೊಲೀಸರ ನೆರವು ಪಡೆದು ಜೆಸಿಬಿ ಬಳಸಿ ಒತ್ತುವರಿಯಾದ ಜಾಗವನ್ನು ಮರಳಿ ಪಡೆಯಲಾಗಿದೆ ಎಂದರು.

ಉದ್ದೇಶಿತ ಜಾಗದಲ್ಲಿ ಸ್ವಚ್ಛ ಭಾರತ ಮಿಷನ್‌ ಯೋಜನೆ ಅಡಿಯಲ್ಲಿ ₹60 ಲಕ್ಷ ವೆಚ್ಚದಲ್ಲಿ ಮಂಜೂರಾದ ‘ಮಲ ಕೆಸರು ತ್ಯಾಜ್ಯ ನಿರ್ವಹಣಾ ಘಟಕ’ ನಿರ್ಮಿಸಲಾಗುವುದು. ಇದೊಂದು ವಿನೂತನ ಯೋಜನೆಯಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ಭತ್ತದ ಬೆಳೆ ನಾಶ: ‘ಭತ್ತದ ಪಸಲು ಕಟಾವಿಗೆ ಬಂದಿತ್ತು. ಕಟಾವಿಗೆ ಕೆಲವು ದಿನಗಳ ಕಾಲಾವಕಾಶ ಕೊಡಿ ಎಂದು ಕೇಳಿದರೂ ಅವಕಾಶ ನೀಡದೆ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಪೊಲೀಸರು ಒಟ್ಟಾಗಿ ಜೆಸಿಬಿಯಿಂದ ಕಾಲುವೆ ತೆಗೆದು ಒಂದು ಎಕರೆ ಭತ್ತ ನಷ್ಟವಾಗುವಂತೆ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಈ ಜಾಗದಲ್ಲಿ ನಾವು ಕೃಷಿ ಚಟುವಟಿಕೆ ನಡೆಸುತ್ತಿದ್ದೇವೆ’ ಎಂದು ಒತ್ತುವರಿದಾರರು ಎನ್ನಲಾದ ಸಿದ್ದರಾಮಪ್ಪ ಹೊಸಮನಿ ದೂರಿದ್ದಾರೆ.

ಸ್ಥಳದಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ತಾಲ್ಲೂಕು, ಜಿಲ್ಲಾ ಹಂತದ ಅಧಿಕಾರಿಗಳು ಹಾಗೂ ಪೊಲೀಸರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.