ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಭದ್ರೇಶ್ವರ ಸ್ವಾಮಿ ಭವ್ಯ ರಥೋತ್ಸವ

ರಟ್ಟೀಹಳ್ಳಿ: ಭಕ್ತಿಯಲ್ಲಿ ಮಿಂದೆದ್ದ ಸಹಸ್ರಾರು ಭಕ್ತರು
Last Updated 13 ಏಪ್ರಿಲ್ 2022, 4:57 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ಪಟ್ಟಣದ ಆರಾಧ್ಯ ದೈವ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ಮಂಗಳವಾರ ಜರುಗಿತು.

ಕಳೆದು ಎರಡು ವರ್ಷಗಳಿಂದ ಕೋವಿಡ್ ಕಾರಣ ಐತಿಹಾಸಿಕ ವೀರಭದ್ರೇಶ್ವರ ಜಾತ್ರೆಯನ್ನು ಅತ್ಯಂತ ಸರಳವಾಗಿ ಆಚರಿಸಲಾಗಿತ್ತು. ಮಂಗಳವಾರ ನಸುಕಿನಲ್ಲಿ ಪ್ರಾರಂಭವಾದ ರಥೋತ್ಸವವು ಅಕ್ಕಿಪೇಟೆ, ಬಸವಣ್ಣ ದೇವರ ದೇವಸ್ಥಾನ, ಶ್ರೀ ಕುಮಾರೇಶ್ವರ ಕಾಲೇಜು ರಸ್ತೆ ತಲುಪಿ ನಂತರ ಅದೇ ಮಾರ್ಗವಾಗಿ ಮರಳಿ ದೇವಸ್ಥಾನ ತಲುಪಿತು.

ಮಾರ್ಗಮಧ್ಯದಲ್ಲಿ ಭಕ್ತರು ರಥಕ್ಕೆ ಬಾಳೆಹಣ್ಣು ಎಸೆದು, ರಥದ ಗಾಲಿಗೆ ತೆಂಗಿನಕಾಯಿ ಒಡೆದರು. ಈ ವೇಳೆ ಪಟ್ಟಣದ ಹಲವಾರು ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದು, ಜಾತ್ರೆಗೆ ಆಗಮಿಸುವ ಭಕ್ತರಿಗೆ ನೀರು, ತಂಪು ಪಾನೀಯ, ಮಜ್ಜಿಗೆ ವ್ಯವಸ್ಥೆ ಕೈಗೊಂಡಿದ್ದರು.

ದುಂಡಿ ಬಸವೇಶ್ವರ ರಥೋತ್ಸವ

ಶಿಗ್ಗಾವಿ: ತಾಲ್ಲೂಕಿನ ಚಿಕ್ಕಮಲ್ಲೂರ ಗ್ರಾಮದಲ್ಲಿ ಸೋಮವಾರ ದುಂಡಿ ಬಸವೇಶ್ವರ ರಥೋತ್ಸವವು ಭಕ್ತ ಸಮೂಹದ ನಡುವೆ ಸಡಗರ ಸಂಭ್ರಮದಿಂದ ಜರುಗಿತು.

ಮಂತ್ರವಾಡಿ ಕೆಂಜೆಡೆ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಗಂಜೀಗಟ್ಟಿ ಮಠದ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ದುಂಡಿ ಬಸವೇಶ್ವರ ರಥೋತ್ಸವಕ್ಕೆ ಚಾಲನೆ ನೀಡಿದರು.

ಹಿರೇಬಿದರಿ: ಗ್ರಾಮ ದೇವತಾ ಉತ್ಸವ

ಹಿರೇಬಿದರಿ (ಕುಮಾರಪಟ್ಟಣ): ಗ್ರಾಮ ದೇವತಾ ಉತ್ಸವದ ಹಿನ್ನೆಲೆಯಲ್ಲಿ ಸೋಮವಾರ ಹಿರೇಬಿದರಿ ಗ್ರಾಮದ ಜಲಮರಡಿ (ಪ್ಲಾಟ್‌) ಶಿವಾನಂದ ಆಶ್ರಮದ ಬಳಿ ಶಾಸಕ ಅರುಣಕುಮಾರ ಪೂಜಾರ ದೇವತೆಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಗ್ರಾಮದ ಎಲ್ಲ ಸಮುದಾಯದ ಜನರು ಕೂಡಿ ಗ್ರಾಮದ ಹಬ್ಬ ಆಚರಿಸುವುದರಿಂದ ಸಾಮರಸ್ಯತೆ ಮತ್ತು ಮಧುರ ಬಾಂಧವ್ಯ ಬೆಸೆಯಲಿದೆ ಎಂದರು.

ಗ್ರಾಮ ದೇವತೆಗೆ ಪೂಜೆ, ಕುಂಕುಮಾರ್ಚನೆ, ಫಲ-ಪುಷ್ಪ ಸಮರ್ಪಣೆ, ಕಲಶ ಆರತಿ, ಸಕಲ ವಾದ್ಯಗಳೊಂದಿಗೆ ನದಿಸ್ನಾನ ಮತ್ತು ಪೂಜೆ ಮುಗಿದ ಬಳಿಕ ದೇವಿ ಮೆರವಣಿಗೆ ಆರಂಭಗೊಂಡಿತು. ಆರ್ಕೆಸ್ಟ್ರಾ ಕಲಾವಿದರ ಹಾಡುಗಳಿಗೆ ಮಕ್ಕಳು ಮತ್ತು ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಮಂಗಳವಾರ ಬೆಳಿಗ್ಗೆ ದೇವಿಗೆ ಅಭಿಷೇಕಾರ್ಚನೆ, ಪುರಾಣ ಪಠಣ, ಉಡಿ ತುಂಬುವ ಕಾರ್ಯ,ಕಲಶ ಕನ್ನಡಿ, ಸಂಗೀತ ವಾದ್ಯಗಳೊಂದಿಗೆ ವೈಭವದ ದೇವಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಿಂಹಾಸನ ಕಟ್ಟೆ ತಲುಪಿತು. ಬಳಿಕ ಹಾಸ್ಯಗಾರರಿಂದ ಹಾಸ್ಯದ ಹೊನಲು ಮತ್ತು ಭಜನಾ ಕಾರ್ಯಕ್ರಮ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT