ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ರಸ್ತೆಗಳಲ್ಲಿ ಬೀದಿನಾಯಿ, ಬಿಡಾಡಿ ದನಗಳಿವೆ ಎಚ್ಚರಿಕೆ!

ರಸ್ತೆ ಸಂಚಾರಕ್ಕೆ ತೊಡಕು– ಬೈಕ್‌ ಸವಾರರ ಪರದಾಟ
Last Updated 17 ಜುಲೈ 2022, 19:31 IST
ಅಕ್ಷರ ಗಾತ್ರ

ಹಾವೇರಿ: ರಸ್ತೆಗಳಲ್ಲಿ ಅಡ್ಡಲಾಗಿ ಮಲಗಿರುವ ಬಿಡಾಡಿ ದನಗಳು, ಬೈಕ್‌ಗಳಿಗೆ ಅಡ್ಡ ನುಗ್ಗಿ ಅಪಘಾತಕ್ಕೆ ಕಾರಣವಾಗುವ ಹಂದಿಗಳು, ಮಕ್ಕಳನ್ನು ಕಚ್ಚಿ ಪೋಷಕರಿಗೆ ತಲೆನೋವಾಗಿರುವ ಬೀದಿ ನಾಯಿಗಳು... ಇವು ಜಿಲ್ಲೆಯ ನಗರ ಮತ್ತು ಪಟ್ಟಣಗಳಲ್ಲಿ ಕಂಡು ಬರುವ ಪ್ರಮುಖ ಸಮಸ್ಯೆಗಳಾಗಿವೆ.

ಹಾವೇರಿ ನಗರದಲ್ಲಿ ಚರಂಡಿಯ ತ್ಯಾಜ್ಯ ಮತ್ತು ಕೊಳಚೆಯನ್ನು ರಸ್ತೆ ತುಂಬ ಹರಡಿ, ವಾತಾವರಣ ಕಲುಷಿತಗೊಳಿಸುತ್ತಿರುವ ಹಂದಿಗಳಿಂದ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ತಲೆದೋರಿದೆ. ರಾತ್ರಿ ವೇಳೆ ಹಂದಿಗಳ ಕಿರುಚಾಟದಿಂದ ನಾಗರಿಕರ ನಿದ್ರೆಗೆ ಭಂಗವಾಗುತ್ತಿದೆ. ಚಿಕ್ಕಮಕ್ಕಳನ್ನು ಕಚ್ಚಿರುವ ಪ್ರಕರಣಗಳೂ ನಡೆದಿವೆ.

ಮಾರ್ಚ್‌ ತಿಂಗಳಲ್ಲಿ ಹಾವೇರಿ ನಗರಸಭೆಯಿಂದ ಸುಮಾರು 200 ಹಂದಿಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿತ್ತು. ಮತ್ತೆ ಜುಲೈ 10ರೊಳಗೆ ಎಲ್ಲ ಹಂದಿಗಳನ್ನು ನಗರದಿಂದ ಸ್ಥಳಾಂತರ ಮಾಡಲು ಹಂದಿ ಮಾಲೀಕರಿಗೆ ನಗರಸಭೆ ಆದೇಶ ಹೊರಡಿಸಿತ್ತು. ಸುಮಾರು 70 ಹಂದಿಗಳನ್ನು ಮಾಲೀಕರು ಸೆರೆ ಹಿಡಿದು ನಾಗೇಂದ್ರನಮಟ್ಟಿ ದೊಡ್ಡಿಗೆ ಸಾಗಿಸಿದ್ದರು. ಈಗ ಮತ್ತೆ ಜುಲೈ 18ಮತ್ತು 19ರಂದು ಹಂದಿಗಳನ್ನು ಹಿಡಿಯುವ ಕಾರ್ಯಾಚರಣೆಗೆ ಹಾವೇರಿ ನಗರಸಭೆ ಮುಂದಾಗಿದೆ.

ನಗರ ಸ್ಥಳೀಯ ಸಂಸ್ಥೆಗಳು ಬಿಡಾಡಿ ದನಗಳನ್ನು ಗೋಶಾಲೆಗೆ ಕಳುಹಿಸಬೇಕು, ಬೀದಿನಾಯಿಗಳನ್ನು ನಿಯಂತ್ರಿಸಲು ಸಂತಾನಶಕ್ತಿ ಹರಣ ಚಿಕಿತ್ಸೆಯನ್ನು ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಬೇಸತ್ತ ಜನ
ಬ್ಯಾಡಗಿ:
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಚಿಕ್ಕ ಮಕ್ಕಳು, ವಯಸ್ಸಾದವರು ಓಡಾಡುವುದು ದುಸ್ತರವಾಗಿದೆ. ನಾಯಿಗಳು ಗುಂಪುಗೂಡಿ ಕಚ್ಚಾಡುವುದರಿಂದ ಜನರಲ್ಲಿ ಭಯ ಮನೆ ಮಾಡಿದೆ. ಕೂಡಲೇ ಬೀದಿ ನಾಯಿಗಳು ಹಾಗೂ ಹಂದಿಗಳನ್ನು ನಿಯಂತ್ರಿಸಬೇಕು ಎಂದು ನಿವಾಸಿ ಚಿಕ್ಕಪ್ಪ ಛತ್ರದ ಆಗ್ರಹಿಸಿದ್ದಾರೆ.

‘ಹಂದಿಗಳನ್ನು ಹಿಡಿದು ಸಾಗಿಸಿದ್ದು, ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನಶಕ್ತಿ ಹರಣ ಚಿಕಿತ್ಸೆ ಕೊಡಿಸಲು ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಯೇಸು ಬೆಂಗಳೂರ.

ಹಂದಿ, ನಾಯಿ ನಿಯಂತ್ರಿಸಿ
ಸವಣೂರು:
ಹಂದಿ, ಬೀದಿನಾಯಿಗಳ ಹಾವಳಿಯಿಂದ ಪಟ್ಟಣದ ವಾಹನ ಸವಾರರು ಪರದಾಡುವಂತಾಗಿದೆ.ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳ ಹಿಂಡಿನಿಂದ ಸಂಚಾರಕ್ಕೆ ಅಡಚಣೆಯಾಗಿದೆ. ಹಂದಿಗಳು ನಗರದಲ್ಲಿ ಎಗ್ಗಿಲ್ಲದೆ ಓಡಾಡಿ ಎಲ್ಲೆಂದರಲ್ಲಿ ತ್ಯಾಜ್ಯ ಹರಡುತ್ತಿವೆ. ಹಂದಿ ಮತ್ತು ಬೀದಿನಾಯಿಗಳನ್ನು ಬೇರೆಡೆಗೆ ಸಾಗಿಸಿ ಎಂಬುದು ಇಲ್ಲಿನ ಸಾರ್ವಜನಿಕರ ಆಗ್ರಹ.

‘ಸವಣೂರು ಪಟ್ಟಣದಲ್ಲಿ ಹಂದಿಗಳ ಮಾಲೀಕರ ಸಭೆಯನ್ನು ಮಾಡಿ ಸುಮಾರು 500ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದು ಬೇರೆಡೆ ಸಾಗಿಸಲಾಗಿದೆ. ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತೇವೆ’ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಕೃಷ್ಣಾ ಕಟ್ಟಿಮನಿ.

ತಡಸ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರು ಹಂದಿ ಹಾಗೂ ಬೀದಿನಾಯಿಗಳ ಕಾಟಕ್ಕೆ ಬೇಸತ್ತು ಹೊಗಿದ್ದಾರೆ. ತಡಸ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಂದಿಗಳು ಅಪಾರ ಪ್ರಮಾಣದಲ್ಲಿದ್ದು, ಗ್ರಾಮಿಣ ಭಾಗದಲ್ಲಿ ಸ್ವಚ್ಛತೆ ಕಣ್ಮರೆಯಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪ.

ರಸ್ತೆಯಲ್ಲೇ ಬೀಡುಬಿಟ್ಟ ದನಗಳು
ಹಾನಗಲ್
: ಹಂದಿ ಹಾಗೂ ಬೀದಿ ನಾಯಿಗಳ ಹಾವಳಿಯಿಂದ ಪಟ್ಟಣದ ಸ್ವಚ್ಛತೆ ಹದಗೆಟ್ಟಿದೆ. ಬಿಡಾಡಿ ದನಗಳು ರಸ್ತೆಯಲ್ಲಿ ಜಮಾಯಿಸಿ ಸುಗಮ ಸಂಚಾರಕ್ಕೆ ಸಂಚಕಾರ ತಂದೊಡ್ಡಿವೆ. ದನಗಳು ಹಿಂಡು ಹಿಂಡಾಗಿ ರಸ್ತೆಯಲ್ಲೇ ಬೀಡು ಬಿಡುತ್ತವೆ.

ಹಂದಿಗಳು ಚರಂಡಿ ತ್ಯಾಜ್ಯವನ್ನು ರಸ್ತೆಗೆಳೆದು ನೈರ್ಮಲ್ಯ ಹಾಳು ಮಾಡುತ್ತಿವೆ. ಇದರಿಂದ ಸೊಳ್ಳೆಗಳ ಉತ್ಪತ್ತಿಗೂ ಕಾರಣವಾಗುವುದಲ್ಲದೆ ವಾತಾವರಣ ಕಲುಷಿತಗೊಳ್ಳುತ್ತಿದೆ. ಬೀದಿ ನಾಯಿಗಳು ಎಲ್ಲೆಂದರಲ್ಲಿ ಜಮಾಯಿಸಿ ಭೀತಿ ಸೃಷ್ಟಿಸುತ್ತಿವೆ. ಇವುಗಳ ಉಪಟಳ ನಿಯಂತ್ರಿಸಲು ಅಧಿಕಾರಿಗಳು ತೆಗೆದುಕೊಂಡ ಕ್ರಮಗಳು ಫಲಿಸಿಲ್ಲ.

ಮಕ್ಕಳನ್ನು ಕಚ್ಚಿದ ನಾಯಿಗಳು
ರಟ್ಟೀಹಳ್ಳಿ:
ಪಟ್ಟಣದಲ್ಲಿ ಬೀದಿ ನಾಯಿ ಹಾಗೂ ಹಂದಿಗಳ ಹಾವಳಿಯಿಂದ ಜನರು ಹೈರಾಣಾಗಿದ್ದಾರೆ. ಅಂಕೆ ಮೀರಿದ ನಾಯಿಗಳು ಬೀದಿಗಳಲ್ಲಿ ಓಡಾಡುವ ಮಕ್ಕಳಿಗೆ ಕಚ್ಚಿ ಗಾಯಗೊಳಿಸಿವೆ. ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಲಿಂಗರಾಜ ವಾಲಿ.

ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹಾಗೂ ಹಂದಿಗಳ ಹಾವಳಿಯಿಂದ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾಗಿದೆ. ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಪಟ್ಟಣದ ಜನತೆ ನೆಮ್ಮದಿಯಿಂದ ಬದುಕುವುದಕ್ಕೆ ಅವಕಾಶ ಕಲ್ಪಿಸಬೇಕು ಎಂಬುದು ಜನರ ಆಗ್ರಹ.

ಹಂದಿಗಳ ಉಪಟಳ; ಜನರಲ್ಲಿ ತಳಮಳ
ರಾಣೆಬೆನ್ನೂರು:
ನಗರದಲ್ಲಿ ಬೀದಿ ನಾಯಿ, ಹಂದಿಗಳ ಉಪಟಳ ಹೆಚ್ಚಾಗಿದೆ. ಸಾರ್ವಜನಿಕರು ಸೇರಿದಂತೆ ಶಾಲಾ ಮಕ್ಕಳಲ್ಲಿ ತಳಮಳ ಉಂಟಾಗಿದೆ. ಬೇಕರಿ, ಹೋಟೆಲ್‌, ಮಾಂಸದ ಅಂಗಡಿಗಳ ಮುಂದೆ ತಿಂಡಿ, ತಿನಿಸು ಬ್ಯಾಗ್‌ಗಳಿಗೆ ಮುಲಾಜಿಲ್ಲದೆ ಬಾಯಿ ಹಾಕುತ್ತವೆ. ಇದರಿಂದ ಜನರು ರೋಸಿ ಹೋಗಿದ್ದಾರೆ ಎನ್ನುತ್ತಾರೆ ಹೌಸಿಂಗ್‌ ಕಾಲೊನಿಯ ಶಿವಯೋಗಿ ಹಳ್ಳಳ್ಳಿ.

ಪ್ರವಾಸಿ ಮಂದಿರ, ಬನಶಂಕರಿ ಕಲ್ಯಾಣ ಮಂಟಪ ರಸ್ತೆ, ಸಂಗಮ ಸರ್ಕಲ್‌, ದೇವರಗುಡ್ಡ ರಸ್ತೆ, ದುರ್ಗಾ ವೃತ್ತ, ಕುರುಬಗೇರಿ, ಮೇಡ್ಲೇರಿ, ತಹಶೀಲ್ದಾರ್‌ ಕಚೇರಿ, ಅಂಚೆ ಕಚೇರಿ ವೃತ್ತಗಳಲ್ಲಿ ಬೀದಿ ಬದಿ ಅಂಗಡಿಯವರು ರಾತ್ರಿ ಅಳಿದುಳಿದ ಅನ್ನ ಚೆಲ್ಲುವುದರಿಂದ ಹಂದಿಗಳ ದಂಡು ಸೇರುತ್ತದೆ. ಚರಂಡಿಯಿಂದ ಎದ್ದು ಬಂದ ಹಂದಿಗಳು ಮೈ ಕೊಡವಿ ಜನರ ಬಟ್ಟೆಗಳಿಗೆ ಹೊಲಸು ಮೆತ್ತುತ್ತುವೆ ಎನ್ನುತ್ತಾರೆ ಶಿವಪ್ಪ ಕುರುವತ್ತಿ.

***

ಬೀದಿ ನಾಯಿ, ಹಂದಿ, ಬಿಡಾಡಿ ದನಗಳ ಹಾವಳಿ ಬಗ್ಗೆ ದೂರು ಬಂದಿವೆ. ಜುಲೈ 21ರಂದು ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು.
–ಉದಯಕುಮಾರ ಬಿ.ಟಿ, ಪೌರಾಯುಕ್ತರು. ರಾಣೆಬೆನ್ನೂರು ನಗರಸಭೆ

**

ಸಾಕು ಪ್ರಾಣಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳಿ. ಸಾಕಿದ ನಾಯಿಗಳ ಕೊರಳಿಗೆ ಬೆಲ್ಟ್‌ ಹಾಕಿ. ಬೀದಿ ನಾಯಿ ಮತ್ತು ಹಂದಿಗಳ ಸೆರೆಗೆ ಸದ್ಯದಲ್ಲಿಯೇ ಕಾರ್ಯಾಚರಣೆ ನಡೆಯಲಿದೆ.
– ಪಿ.ಕೆ ಗಡಧಾರಿ, ಪುರಸಭೆ ಮುಖ್ಯಾಧಿಕಾರಿ, ಹಾನಗಲ್‌

**

ವಾಯು ವಿಹಾರಕ್ಕೆ ಹೋದಾಗ ಬೀದಿನಾಯಿ ನನ್ನ ಕಾಲಿಗೆ ಕಚ್ಚಿ ಗಾಯ ಮಾಡಿದೆ. ಬೀದಿ ನಾಯಿಗಳ ಕಾಟದಿಂದ ಜನರ ನೆಮ್ಮದಿ ಹಾಳಾಗಿದೆ.
– ಎಸ್‌.ಎಚ್‌. ಪಾಟೀಲ,ಬನಶಂಕರಿ ಬಡಾವಣೆಯ ನಿವಾಸಿ, ರಾಣೆಬೆನ್ನೂರು

**

ಬಿಡಾಡಿ ದನಗಳನ್ನು ಗೋಶಾಲೆಗೆ ಕಳುಹಿಸಲು ತೀರ್ಮಾನಿಸಲಾಗಿದೆ. ಹಂದಿಗಳ ಸ್ಥಳಾಂತರ ಕಾರ್ಯಾಚರಣೆ ಜುಲೈ18,19ರಂದು ನಡೆಯಲಿದೆ.
– ಸಂಜೀವಕುಮಾರ ನೀರಲಗಿ, ಹಾವೇರಿ ನಗರಸಭೆ ಅಧ್ಯಕ್ಷ

_____________

ಪ್ರಜಾವಾಣಿ ತಂಡ: ಮುಕ್ತೇಶ್ವರ ಕೂರಗುಂದಮಠ, ಪ್ರಮೀಳಾ ಹುನಗುಂದ, ಎಂ.ವಿ ಗಾಡದ, ಮಾರುತಿ ಪೇಟಕರ, ಪ್ರದೀಪ ಕುಲಕರ್ಣಿ, ಗಣೇಶಗೌಡ ಪಾಟೀಲ, ಪುಟ್ಟಪ್ಪ ಲಮಾಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT