ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಕೆರೂರು: 13 ಗ್ರಾಮಗಳಲ್ಲಿ ನೀರಿಗೆ ಬರ, ಗ್ರಾಮಸ್ಥರ ಪರದಾಟ

ಅರೆ ಮಲೆನಾಡಿನಲ್ಲೂ ಮಳೆ ಕೊರತೆ: ಶುದ್ಧ ನೀರಿಗಾಗಿ ಗ್ರಾಮಸ್ಥರ ಪರದಾಟ
Published 6 ಏಪ್ರಿಲ್ 2024, 5:45 IST
Last Updated 6 ಏಪ್ರಿಲ್ 2024, 5:45 IST
ಅಕ್ಷರ ಗಾತ್ರ

ಹಿರೇಕೆರೂರು: ಅರೆ ಮಲೆನಾಡಿನ ವ್ಯಾಪ್ತಿಗೆ ಬರುವ ಹಿರೇಕೆರೂರು ತಾಲ್ಲೂಕಿನಾದ್ಯಂತ ಈ ಬಾರಿ ಮಳೆಯ ತೀವ್ರ ಕೊರತೆಯಿಂದ ನದಿ, ಕೆರೆ, ಕಟ್ಟೆ, ಹೊಂಡಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿ ಅಂತರ್ಜಲ ಮಟ್ಟ ಕುಸಿದಿದೆ. ಕುಡಿಯುವ ನೀರು ಪೂರೈಕೆ ಹಾಗೂ ಕೃಷಿ ಕೊಳವೆ ಬಾವಿಗಳು ಬತ್ತಿ ಹೋಗಿ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ.

ತಾಲ್ಲೂಕಿನ ಕೋಡ, ತಾವರಗಿ, ವೀರಾಪುರ, ಸಾತೇನಹಳ್ಳಿ, ಗೊಡಚಿಕೊಂಡ, ಚನ್ನಳ್ಳಿ ತಾಂಡಾ, ಜೋಗಿಹಳ್ಳಿ, ನೂಲಗೇರಿ, ಬುರುಡಿಕಟ್ಟಿ, ವಡೇಯನಪುರ ಸೇರಿದಂತೆ ತಾಲ್ಲೂಕಿನ 19 ಗ್ರಾಮ ಪಂಚಾಯಿತಿಗಳ ಪೈಕಿ 13ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.

ಕಳೆದ ವರ್ಷದ ಹಿಂಗಾರು ಹಾಗೂ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆಯಾದ ಪರಿಣಾಮ ಬೇಸಿಗೆಗೂ ಮೊದಲೇ ಕೆರೆಕಟ್ಟೆಗಳೆಲ್ಲಾ ಬತ್ತಿ ಅಂತರ್ಜಲದ ಮಟ್ಟ ಕುಸಿದು ಕುಡಿಯುವ ನೀರಿನ ಕೊಳವೆ ಬಾವಿಗಳು ಹಾಗೂ ಕೃಷಿ ಕೊಳವೆ ಬಾವಿಗಳು ನೀರಿಲ್ಲದೇ ಒಣಗಿವೆ. ಮನೆ-ಮನೆಗೆ ಗಂಗೆ ಯೋಜನೆಯ ನಳಗಳಿಗೆ ಕೆಲವು ಗ್ರಾಮಗಳಲ್ಲಿ ಬೋರ್‌ವೆಲ್‌ಗಳ ಮೂಲಕ ನೀರನ್ನು ಬಿಡಲಾಗುತ್ತಿದೆ.

68 ಖಾಸಗಿ ಕೊಳವೆಬಾವಿ ಬಾಡಿಗೆಗೆ:

ತಾಲ್ಲೂಕಿನ 19 ಗ್ರಾಮ ಪಂಚಾಯಿತಿಗಳ ಪೈಕಿ 13 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತಾಲ್ಲೂಕಿನಲ್ಲಿ 68 ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗಿದ್ದು, 26ಕ್ಕೂ ಹೆಚ್ಚು ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ.

ಶುದ್ಧ ನೀರಿನ ಘಟಕ ಬಂದ್‌:

ಬೇಸಿಗೆಯ ಬಿಸಿ ಶುದ್ಧ ನೀರಿನ ಘಟಕಗಳಿಗೂ ತಟ್ಟಿದ್ದು, ಬಹುತೇಕ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ನೀರಿಲ್ಲದೇ ಬಂದ್‌ ಆಗಿವೆ. ಇನ್ನು ಕೆಲವು ಗ್ರಾಮಗಳಲ್ಲಿ ಯಂತ್ರಗಳು ಕೆಟ್ಟಿದ್ದು, ನೀರಿಲ್ಲದ ಕಾರಣ ಅವುಗಳ ರಿಪೇರಿಗೂ ಮುಂದಾಗಿಲ್ಲ. ಶುದ್ಧ ನೀರು ಬಳಕೆ ಮಾಡುತ್ತಿದ್ದವರು ಬೇರೆ ಗ್ರಾಮಗಳಿಗೆ ಹೋಗಿ ನೀರು ತರುವ ಪರಿಸ್ಥಿತಿ ಎದುರಾಗಿದೆ ಎಂದು ಕೋಡ ಗ್ರಾಮಸ್ಥರು ದೂರಿದ್ದಾರೆ. 

ಪಟ್ಟಣಕ್ಕೆ ತುಂಗಭದ್ರಾ ನದಿ ನೀರು:

ಹಿರೇಕೆರೂರು ಪಟ್ಟಣಕ್ಕೆ ನಾಲ್ಕು ದಿನಗಳೊಮ್ಮೆ ತುಂಗಭದ್ರಾ ನದಿಯ ಜಾಕ್‌ವೆಲ್‌ನಿಂದ ನೀರು ಸರಬರಾಜು ಮಾಡಲಾಗುತ್ತಿದ್ದು. ಹೊಳೆನೀರಿನ ಕೊರತೆ ಉಂಟಾದರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 38 ಕೊಳವೆಬಾವಿಗಳು ಕಾರ್ಯನಿರ್ವಹಿಸುತ್ತವೆ. ಇದರಲ್ಲಿ 4 ಕೊಳವೆ ಬಾವಿಗಳಲ್ಲಿ ಅಂತರ್ಜಲ ಕಡೆಮೆಯಾಗಿದ್ದು, ಕೆಲವು ವಾರ್ಡ್‌ಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಪಟ್ಟಣದಲ್ಲಿ 3 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಸುತ್ತಿದ್ದು, ಒಂದು ಘಟಕ ದುರಸ್ತಿಯಲ್ಲಿದೆ.

‘ಹೊಳೆನೀರಿನ ಕೊರತೆ ಉಂಟಾದರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 38 ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತವೆ. ಈ ಕೊಳವೆಬಾವಿಗಳಿಂದ ನಿಯಮಿತವಾಗಿ ನಾಗರಿಕರಿಗೆ ನೀರು ಪೂರೈಸಲು ಕ್ರಮ ಕೈಗೊಂಡಿದ್ದೇವೆ’ ಎಂದು ಹಿರೇಕೆರೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೋಡಿ ಭೀಮರಾಯ್ ತಿಳಿಸಿದ್ದಾರೆ. 

ಹಿರೇಕೆರೂರು ತಾಲ್ಲೂಕಿನ ನೂಲಗೇರಿ ಗ್ರಾಮದ ದೊಡ್ಡ ಕೆರೆ ನೀರಿಲ್ಲದೆ ಒಣಗಿದ್ದು ಕುರಿಗಳು ಮೇವಿಗಾಗಿ ಪರದಾಡುತ್ತಿರುವ ದೃಶ್ಯ
ಹಿರೇಕೆರೂರು ತಾಲ್ಲೂಕಿನ ನೂಲಗೇರಿ ಗ್ರಾಮದ ದೊಡ್ಡ ಕೆರೆ ನೀರಿಲ್ಲದೆ ಒಣಗಿದ್ದು ಕುರಿಗಳು ಮೇವಿಗಾಗಿ ಪರದಾಡುತ್ತಿರುವ ದೃಶ್ಯ
ಎಂಟು ದಿನಕ್ಕೆ ಒಮ್ಮೆ ಹೊಳೆ ನೀರನ್ನು ಬಿಡ್ತಾ ಇದಾರೆ. ಇದರಿಂದ ಜನರಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗುತ್ತಿಲ್ಲ. ನೀರು ತರುವುದೇ ಒಂದು ಕೆಲಸವಾಗಿದೆ
– ಮಂಜುಳಾ ಮುತ್ತಿಗಿ ಹಿರೇಕೆರೂರು ಪಟ್ಟಣದ ದುರ್ಗಾನಗರದ ನಿವಾಸಿ
ಕೋಡ ಗ್ರಾಮದಲ್ಲಿ ಇರುವ  ಶುದ್ಧ ಕುಡಿಯುವ ನೀರಿನ ಘಟಕ ತಾಂತ್ರಿಕ ಕಾರಣದಿಂದ ಬಂದ್‌ ಆಗಿದೆ. ಹಲವು ಬಾರಿ ಇಲಾಖೆ ಗಮನಕ್ಕೆ ತಂದರೂ ಇದುವರೆಗೂ ದುರಸ್ತಿ ಮಾಡಿಲ್ಲ
– ಕೆ.ಬಿ.ಬನ್ನಿಕೋಡ ಪಿಡಿಒ ಕೋಡ ಗ್ರಾಮ ಪಂಚಾಯಿತಿ
ತಾಲ್ಲೂಕಿನ 19 ಗ್ರಾ.ಪಂ.ಗಳ ಪೈಕಿ 13ಕ್ಕೂ ಗ್ರಾ.ಪಂ.ಗಳ ವ್ಯಾಪ್ತಿಯ 26 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ
– ಎಚ್.ಪ್ರಭಾಕರಗೌಡ ಹಿರೇಕೆರೂರು ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT