ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗಿತು ನಾಗನೂರ–ಕೂಡಲ ಬಾಂದಾರ

ನೀರು ತುಂಬಿದ ಸೇತುವೆಯಲ್ಲೇ ಸ್ಥಳೀಯರ ಓಡಾಟ
Last Updated 1 ಆಗಸ್ಟ್ 2019, 15:01 IST
ಅಕ್ಷರ ಗಾತ್ರ

ಹಾವೇರಿ: ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಕಳೆದ ಮೂರು ದಿನಗಳಿಂದಕೂಡಲ–ನಾಗನೂರ ಸಂಪರ್ಕದ ಬಾಂದಾರ ಮುಳುಗಿದೆ. ಇದರಿಂದಾಗಿ ಕೂಡಲ ಮಠಕ್ಕೆ ಹೋಗಲು ಇದ್ದ ಅತೀ ಹತ್ತಿರದ ಮಾರ್ಗವೊಂದು ಸ್ಥಗಿತಗೊಂಡಂತಾಗಿದೆ.

ಈ ಬಾಂದಾರ ಹಾನಗಲ್‌ ಹಾಗೂ ಹಾವೇರಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಒಳದಾರಿಯೂ ಆಗಿದೆ. ಅದು ಮುಳುಗಿರುವುದು ಈ ಭಾಗದ ಜನರ ಓಡಾಟಕ್ಕೂ ತೊಂದರೆಯಾಗಿದೆ.

ಕಲ್ಲಾಪುರ, ಹರವಿ, ಕೂಡಲ, ನರೇಗಲ್‌, ಮಾರನಬೀಡ, ಬೊಮ್ಮನಹಳ್ಳಿ, ಹರನಗಿರಿ ಗ್ರಾಮದಿಂದ ಈ ಮಾರ್ಗವಾಗಿ ಜಿಲ್ಲಾ ಕೇಂದ್ರ ಹಾವೇರಿಗೆ ಆಗಮಿಸುತ್ತಾರೆ. ಈಗ ಸುತ್ತು ಹಾಕಿ ವರ್ದಿ, ಸಂಗೂರ ಮಾರ್ಗವಾಗಿ ಗ್ರಾಮಸ್ಥರು ಜಿಲ್ಲಾ ಕೇಂದ್ರಕ್ಕೆ ಬರುತ್ತಿದ್ದಾರೆ.

‘ಪ್ರತಿ ಮಳೆಗಾಲದಲ್ಲೂ ವರದಾ ನದಿಗೆ ನೀರು ಬಂದರೆ, ಈ ಬಾಂದಾರ ಮುಳಗುತ್ತದೆ. ಗೇಟ್‌ ಮುಚ್ಚಿದರೆ 10 ಕಿ.ಮೀವರೆಗೆ ನೀರು ನಿಲ್ಲುತ್ತದೆ. ಇದರಿಂದ ಬೇಸಿಗೆಯಲ್ಲೂ ಹಲವು ರೈತರಿಗೆ ಅನುಕೂಲವಾಗುತ್ತದೆ. ನಾವು ನಿತ್ಯ ಇದೇ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದೆವು’ ಎಂದು ನಿಂಗಜ್ಜ ಅವ್ವಕ್ಕನವರ ಹೇಳಿದರು.

‘ಇಲ್ಲಿ ನೀರು ತುಂಬಿ ಹರಿದಾಗಲೆಲ್ಲ, ಸಾವು–ನೋವು ಸಂಭವಿಸಿದೆ. ನೀರು ತುಂಬಿರುವ ವಿಚಾರ ತಿಳಿಯದವರು, ಇಲ್ಲಿ ಬಂದರೆ ಅನಾಹುತ ಕಟ್ಟಿಟ್ಟ ಬುತ್ತಿ.ಬೈಕ್‌, ಟಂಟಂ ಲಾರಿಗಳು ನಿತ್ಯ ಇಲ್ಲಿ ಸಂಚರಿಸುತ್ತವೆ. ಕಳೆದ ವರ್ಷ ಇದೇ ಬಾಂದಾರದಿಂದ ಬಿದ್ದು ಮರಳಿನ ಲಾರಿ ಮುಳುಗಿತ್ತು. ಅದರಲ್ಲಿದ್ದ ಕ್ಲಿನರ್ ಅಸುನೀಗಿದ್ದ. ತಿಂಗಳ ನಂತರ ಲಾರಿಯನ್ನು ಮೇಲೆತ್ತಲಾಯಿತು’ ಎಂದು ನಾಗನೂರಿನಹೋಳಿಯಪ್ಪ ಶಿಂಗಾಪುರ ತಿಳಿಸಿದರು.

‘ನಾನು ಕೂಡಲದಿಂದ ಕಾಲು ನಡಿಗೆಯಲ್ಲಿನಾಗನೂರಿಗೆ ಹೊರಟಿದ್ದೇನೆ. ಅಲ್ಲಿ ನಮ್ಮ ಹೊಲಇದೆ. ಕೋಲಿನ ಸಹಾಯದಿಂದ ಬಾಂದಾರ ಗುರುತಿಸಿಕೊಂಡು ನೀರಿನಲ್ಲೇ ದಾಟುತ್ತೇನೆ. ಹೊಳೆಗೆ ನೀರು ಬಂದರೆ ದಾರಿ ಇರುವುದಿಲ್ಲ. ಇದರಿಂದ ನಮ್ಮ ಹೊಲದ ಕೆಲಸವೂ ನಿಂತುಬಿಡುತ್ತದೆ’ ಎಂದು ಬಾಂದಾರ ದಾಟುತ್ತಿರುವ ವೃದ್ಧರೊಬ್ಬರು ಹೇಳಿದರು.

₹ 12 ಕೋಟಿ ವೆಚ್ಚದಲ್ಲಿ ಸೇತುವೆ: ‘ಈ ಬಾಂದಾರ 1998 ರಲ್ಲಿ ನಿರ್ಮಿಸಲಾಗಿದೆ. ಹೊಸ ಸೇತುವೆನಿರ್ಮಾಣದ ಕಾಮಗಾರಿ ₹12 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಈ ಅನುದಾನ ಕಡಿಮೆಯಾದರೆ ಹೆಚ್ಚುವರಿ ಬಿಡುಗಡೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಮಾಲತೇಶ್‌ ಸೊಪ್ಪಿನ ಮಾಹಿತಿ ನೀಡಿದರು.

‘ಈ ಬಾಂದಾರ ಬೊಮ್ಮನಹಳ್ಳಿ ಹೋಬಳಿ ವ್ಯಾಪ್ತಿಗೆ ಬರುತ್ತದೆ. ನದಿ ನೀರಿನಿಂದ ನರೇಗಲ್‌ ಕೆರೆ ತುಂಬಿಸಿ, ಆ ಮೂಲಕ ಸುತ್ತಮುತ್ತಲಿನ ಕೆರೆಗೆ ನೀರು ಭರ್ತಿ ಮಾಡುವ ಯೋಜನೆಯನ್ನು ರೂಪಿಸಲಾಗುತ್ತಿದೆ. ಈ ಬಾಂದಾರ ಸುಮಾರು 12 ಅಡಿಗಿಂತ ಆಳ ಇದೆ. ಹೊಸದಾಗಿ ನಿರ್ಮಿಸುತ್ತಿರುವ ಸೇತುವೆ ತುಂಬ ಎತ್ತರದಲ್ಲಿದ್ದು, ಎಷ್ಟೇ ನೀರು ಬಂದರೂ ಅದು ಮುಳುಗುವುದಿಲ್ಲ. ಸಂಚಾರಕ್ಕೂ ತೊಂದರೆ ಆಗುವುದಿಲ್ಲ’ ಎಂದು ಅವರು ವಿವರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT