ಭಾನುವಾರ, ಆಗಸ್ಟ್ 14, 2022
19 °C
ಕಾನೂನು ಅರಿವು: ಶಿಬಿರದಲ್ಲಿ 200 ಮಂದಿ ಭಾಗಿ

ಮಹಿಳೆಯರಿಗೆ ಸ್ವರಕ್ಷಣೆ ತರಬೇತಿ

ಕೆ.ಎಚ್.ನಾಯಕ Updated:

ಅಕ್ಷರ ಗಾತ್ರ : | |

Prajavani

ಹಿರೇಕೆರೂರು: ಅಪರಾಧ ತಡೆ ಮಾಸಾಚರಣೆ ನಿಮಿತ್ತ ಪೊಲೀಸ್‌ ಇಲಾಖೆಯಿಂದ ಇಲ್ಲಿನ ಪೊಲೀಸ್‌ ಮೈದಾನದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸ್ವರಕ್ಷಣಾ ತರಬೇತಿ ಶಿಬಿರ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸುಮಾರು 200ಕ್ಕಿಂತ ಹೆಚ್ಚು ಮಕ್ಕಳು ಹಾಗೂ ಮಹಿಳೆಯರು ತರಬೇತಿ ಪಡೆಯುತ್ತಿದ್ದಾರೆ.

ಪ್ರತಿದಿನ ಬೆಳಿಗ್ಗೆ 7ರಿಂದ ನಡೆಯುವ ತರಬೇತಿಯಲ್ಲಿ ಮಕ್ಕಳು ಅತ್ಯಂತ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಇವರಲ್ಲಿ ಹೆಣ್ಣುಮಕ್ಕಳ ಸಂಖ್ಯೆಯೇ ಹೆಚ್ಚಿದೆ.
ತರಬೇತಿ ಬಗ್ಗೆ ಮಾಹಿತಿ ನೀಡಿದ ಇಲ್ಲಿನ ಪೊಲೀಸ್‌ ಠಾಣೆಯ ಎಸ್‌ಐ ದೀಪು ಎಂ.ಟಿ., ಮಹಿಳೆಯರು ಹಾಗೂ ಮಕ್ಕಳ ಮೇಲೆ ಸಮಾಜದಲ್ಲಿ ನಡೆಯುವ ಕಿರುಕುಳ, ಅತ್ಯಾಚಾರ, ದೈಹಿಕ ಹಾಗೂ ಮಾನಸಿಕ
ಹಿಂಸೆಗಳನ್ನು ಯಾವ ರೀತಿ ಎದುರಿಸಬೇಕು. ಸ್ವರಕ್ಷಣೆ ಮಾಡಿಕೊಳ್ಳುವ ಜತೆಗೆ ಯಾವ ರೀತಿ ತಕ್ಷಣದ ಪ್ರತಿಕ್ರಿಯೆ ನೀಡಬೇಕು ಎಂಬ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಆ ಮೂಲಕ ಅವರಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಿರುಕುಳ, ಹಿಂಸೆಯಂತಹ ಸಂದರ್ಭಗಳನ್ನು ದೈಹಿಕವಾಗಿ ಮಾನಸಿಕವಾಗಿ ಹೇಗೆ ಎದುರಿಸಬೇಕೆಂಬ ಬಗ್ಗೆ ತರಬೇತಿ, ಕರಾಟೆ,
ಶೊಟೊಕಾನ್‌, ಕುಂಗ್‌ಫು ಕಲಿಸುವ ಜತೆಗೆ ಕಾನೂನು ಮಾಹಿತಿ ತಿಳಿಸಿ ಕೊಡಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಕೆ.ಎಸ್.ಪಿ. ಆ್ಯಪ್‌ ಬಳಸಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವ, 112 ವಾಹನಕ್ಕೆ ಮಾಹಿತಿ ನೀಡುವ ಕುರಿತು ಇಲ್ಲಿ ತಿಳಿಸಿ ಕೊಡಲಾಗುತ್ತಿದೆ ಎಂದು ಹೇಳಿದರು.

ಪೊಲೀಸ್‌ ಇಲಾಖೆಯಲ್ಲಿರುವ ವರದಾ ಪಡೆಯಿಂದ ತುರ್ತು ಸಂದರ್ಭಗಳನ್ನು ನಿರ್ವಹಿಸುವ ಬಗ್ಗೆ ತರಬೇತಿ ಕೊಡಿಸಲಾಗುವುದು. ತರಬೇತಿಯಲ್ಲಿ ಆಸಕ್ತಿ ಇರುವವರಿಗೆ 2-3 ತಿಂಗಳು ಸ್ವಯಂ ರಕ್ಷಣೆ ತರಬೇತಿ ನೀಡುವ ಉದ್ದೇಶ ಸಹ ಹೊಂದಲಾಗಿದೆ ಎಂದು ತಿಳಿಸಿದರು.

ತರಬೇತಿಗೆ ಚಾಲನೆ: ತರಬೇತಿ ಶಿಬಿರಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ ಈಚೆಗೆ ಚಾಲನೆ ನೀಡಿ, ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ಸರ್ಕಾರ ಹಲವಾರು ಕಾನೂನುಗಳನ್ನು ರೂಪಿಸಿದೆ. ದೈಹಿಕ, ಮಾನಸಿಕ ಕಿರುಕುಳ ನೀಡುವುದು ಅಪರಾಧ. ಅಂತಹ ಪ್ರಕರಣ ಕಂಡು ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಡಿವೈಎಸ್ಪಿ ಟಿ.ವಿ.ಸುರೇಶ, ಸಿಪಿಐ ಮಂಜುನಾಥ ಪಂಡಿತ್‌ ಹಾಗೂ ಸಿಬ್ಬಂದಿ ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು