ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾನಗಲ್ | ನೀರಿಗೆ ಹಾಹಾಕಾರ: ನಡುರಾತ್ರಿ ಮಹಿಳೆಯರ ಸರದಿ

Published 23 ಜೂನ್ 2024, 6:35 IST
Last Updated 23 ಜೂನ್ 2024, 6:35 IST
ಅಕ್ಷರ ಗಾತ್ರ

ಹಾವೇರಿ: ಹಾನಗಲ್ ತಾಲ್ಲೂಕಿನ ಸೋಮಸಾಗರ ಗ್ರಾಮದಲ್ಲಿ ಬೇಸಿಗೆಯಲ್ಲಿ ಎದುರಾದ ನೀರಿನ ಹಾಹಾಕಾರ ಮಾನ್ಸೂನ್ ಮಳೆ ಆರಂಭವಾದರೂ ಕಡಿಮೆಯಾಗಿಲ್ಲ. ಗ್ರಾಮ ಪಂಚಾಯಿತಿಯ ಬಹುತೇಕ ಕೊಳವೆಬಾವಿಗಳು ಬತ್ತಿದ್ದು, ರೈತರ ಜಮೀನಿನ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಈ ನೀರಿಗಾಗಿ ಮಹಿಳೆಯರು ನಡುರಾತ್ರಿಯಲ್ಲಿ ಕಾಯುತ್ತ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾ ಕೇಂದ್ರದಿಂದ 24 ಕಿ.ಮೀ ಹಾಗೂ ತಾಲ್ಲೂಕು ಕೇಂದ್ರದಿಂದ 29 ಕಿ.ಮೀ ದೂರದಲ್ಲಿರುವ ಸೋಮಸಾಗರ ಗ್ರಾಮದಲ್ಲಿ ಮೂರು ತಿಂಗಳಿನಿಂದ ನೀರಿನ ಸಮಸ್ಯೆ ವಿಪರೀತವಾಗಿದೆ. ಬಳಸಲು ಹಾಗೂ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಹಲವು ತಾತ್ಕಾಲಿಕ ಕ್ರಮಗಳನ್ನು ಕೈಗೊಂಡರೂ ಜನಸಂಖ್ಯೆಗೆ ತಕ್ಕಂತೆ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ.

ಕುಡಿಯುವ ನೀರು ಸಂಗ್ರಹಕ್ಕೆಂದು ದೊಡ್ಡ ಟ್ಯಾಂಕ್ ನಿರ್ಮಿಸಲಾಗಿದ್ದು, ಇದಕ್ಕಾಗಿ ಒಂದು ಪ್ರತ್ಯೇಕ ಕೊಳವೆಬಾವಿ ಇದೆ. ಆದರೆ, ಕೊಳವೆ ಬಾವಿಯ ನೀರಿನ ಪ್ರಮಾಣ ತೀರಾ ಕಡಿಮೆಯಾಗಿದೆ. ಈ ನೀರು ಯಾವುದಕ್ಕೂ ಸಾಲುತ್ತಿಲ್ಲವೆಂದು ಗ್ರಾಮಸ್ಥರು ಹೇಳಿದರು.

ಜನರಿಗೆ ಕುಡಿಯುವ ನೀರು ಒದಗಿಸುವ ಗ್ರಾಮ ಪಂಚಾಯಿತಿ ವತಿಯಿಂದ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸಲಾಗಿತ್ತು. ಈ ಕೊಳವೆಬಾವಿಗಳಿಂದ ಕೆಲ ದಿನ ಮಾತ್ರ ನೀರು ಲಭ್ಯವಾಗಿದ್ದು, ನಂತರ ಸಂಪೂರ್ಣ ಬತ್ತಿ ಹೋಗಿವೆ ಎಂದೂ ಗ್ರಾಮಸ್ಥರು ತಿಳಿಸಿದರು.

ರೈತರ ಜಮೀನು ನೀರು ಖರೀದಿ: ನೀರಿನ ಸಮಸ್ಯೆ ಹೆಚ್ಚಾಗಿದ್ದರಿಂದ ಗ್ರಾಮ ಪಂಚಾಯಿತಿಯವರು ರೈತರ ಜಮೀನಿನಲ್ಲಿರುವ ಕೊಳವೆ ಬಾವಿಗಳನ್ನು ಬಾಡಿಗೆಗೆ ತೆಗೆದುಕೊಂಡಿದ್ದಾರೆ. ಇವುಗಳ ಮೂಲಕ ಜನರಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಹೆಸ್ಕಾಂನವರು 3 ಪೇಸ್ ವಿದ್ಯುತ್ ನೀಡಿದ ಸಂದರ್ಭದಲ್ಲಿ ಮಾತ್ರ ನೀರು ತುಂಬಿಕೊಳ್ಳಲು ಅವಕಾಶವಿದೆ. ಹೀಗಾಗಿ, ರಾತ್ರಿ ಹಾಗೂ ಹಗಲಿನಲ್ಲಿ ಮಹಿಳೆಯರು ಕೊಡ ಹಿಡಿದು ಕೊಳವೆಬಾವಿಗಳ ಬಳಿ ಕಾಯುತ್ತ ನಿಲ್ಲುವ ದೃಶ್ಯಗಳು ಸಾಮಾನ್ಯವಾಗಿವೆ.

ಶುಕ್ರವಾರ ರಾತ್ರಿಯೂ 11 ಗಂಟೆಯಿಂದ 1 ಗಂಟೆಯವರೆಗೆ ಕೊಳವೆ ಬಾವಿಗಳ ಬಳಿ ಸರದಿಯಲ್ಲಿ ನಿಂತಿದ್ದ ಮಹಿಳೆಯರು ನೀರು ತುಂಬಿಕೊಂಡರು.

‘ಗ್ರಾಮದಲ್ಲಿ ನೀರಿನ ಹಾಹಾಕಾರವಿದೆ. ಮನೆಗಳಿಗೆ ನೀರು ಬರುವುದು ನಿಂತು ಹಲವು ತಿಂಗಳಾಯಿತು. ಗ್ರಾಮದಲ್ಲಿರುವ ಕೊಳವೆಬಾವಿಗಳೂ ಬತ್ತಿವೆ. ಈಗ ರೈತನ ಹೊಲದ ನೀರೇ ಗತಿಯಾಗಿದೆ. ಈ ನೀರಿಗಾಗಿ ನಡುರಾತ್ರಿ ಸರದಿಯಲ್ಲಿ ನಿಲ್ಲುತ್ತಿದ್ದೇವೆ’ ಎಂದು ಗ್ರಾಮದ ನಿವಾಸಿ ರೇಖಾ ಹೇಳಿದರು.

‘ರಾತ್ರಿ 10 ಗಂಟೆಯಿಂದ 6 ಗಂಟೆ ಅವಧಿಯಲ್ಲಿ 3 ಗಂಟೆ ಹಾಗೂ ಹಗಲಿನಲ್ಲಿ 4 ಗಂಟೆ ವಿದ್ಯುತ್ ಇರುತ್ತದೆ. ಹಗಲಿನಲ್ಲಿ ಮನೆ ಹಾಗೂ ಹೊಲ ಕೆಲಸ ಇರುತ್ತದೆ. ಹೀಗಾಗಿ, ರಾತ್ರಿಯೇ ಕೊಳವೆ ಬಾವಿ ಬಳಿ ಬಂದು ಸರದಿ ನಿಲ್ಲುತ್ತೇವೆ. ಎಷ್ಟೇ ರಾತ್ರಿಯಾದರೂ ಕಾದು ನೀರು ತುಂಬಿಕೊಂಡು ಹೋಗುತ್ತೇವೆ’ ಎಂದು ತಿಳಿಸಿದರು.

ಕುಡಿಯುವ ನೀರಿಗಾಗಿ ಅಲೆದಾಟ: ‘ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರಿಲ್ಲ. ಗ್ರಾಮದಿಂದ 5 ಕಿ.ಮೀ ದೂರದಲ್ಲಿರುವ ಗುಡ್ಡದ ಮುತ್ತಳ್ಳಿ ಹಾಗೂ 7 ಕಿ.ಮೀ ದೂರದಲ್ಲಿರುವ ಚಿಕ್ಕಬಾಸೂರಿಗೆ ಹೋಗಿ ಶುದ್ಧ ನೀರು ತರುತ್ತಿದ್ದೇವೆ. ಗ್ರಾಮದಲ್ಲಿ ಉಂಟಾಗಿರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು’ ಎಂದು ಗ್ರಾಮಸ್ಥ ಅರುಣ್ ಹೇಳಿದರು.

‘4 ಕೊಳವೆಬಾವಿ ಬಾಡಿಗೆ’

‘ಮಳೆ ಅಭಾವದಿಂದ ಗ್ರಾಮದ ಕೆರೆಯಲ್ಲಿ ನೀರಿಲ್ಲ. ಬಸಾಪುರ ಏತ ನೀರಾವರಿ ಯೋಜನೆಯಿಂದಲೂ ಕೆರೆ ತುಂಬಿಸಿಲ್ಲ. ಇದರಿಂದಲೇ ಗ್ರಾಮದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ರೈತರ ನಾಲ್ಕು ಕೊಳವೆಬಾವಿಗಳನ್ನು ಬಾಡಿಗೆಗೆ ತೆಗೆದುಕೊಂಡು ನೀರು ಪೂರೈಕೆ ಮಾಡುತ್ತಿದ್ದೇವೆ’ ಎಂದು ಸೋಮಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ ಬಣಕಾರ ತಿಳಿಸಿದರು.

ನೀರಿನ ಸಮಸ್ಯೆಗೆ ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಅವರು, ‘ಎಷ್ಟೇ ಕೊಳವೆ ಬಾವಿ ಕೊರೆಸಿದರೂ ನೀರು ಬತ್ತುತ್ತಿದೆ. ಹೀಗಾಗಿ, ಸದ್ಯಕ್ಕೆ ರೈತರ ಕೊಳವೆಬಾವಿಗಳನ್ನು ಬಾಡಿಗೆ ಪಡೆದುಕೊಂಡಿದ್ದೇವೆ’ ಎಂದರು.

‘ಇತ್ತೀಚೆಗೆ ವಿದ್ಯುತ್ ಸರಬರಾಜಿನಲ್ಲಿ ತೊಂದರೆ ಆಗಿತ್ತು. ಶುಕ್ರವಾರ ದುರಸ್ತಿ ಮಾಡಿ, ವಿದ್ಯುತ್ ನೀಡಲಾಗಿದೆ. ಹೀಗಾಗಿ, ಶುಕ್ರವಾರ ರಾತ್ರಿ ಮಹಿಳೆಯರು ಸರದಿಯಲ್ಲಿ ನಿಂತು ನೀರು ತುಂಬಿಕೊಂಡಿದ್ದಾರೆ. ಉಳಿದ ದಿನಗಳಲ್ಲಿ ಬೆಳಿಗ್ಗೆ ನೀರು ತುಂಬಿಕೊಂಡು ಹೋಗುತ್ತಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT