ಶನಿವಾರ, ಸೆಪ್ಟೆಂಬರ್ 19, 2020
21 °C
ಬಿಜೆಪಿ ನಾಯಕರಂತೆ ಸರ್ಕಾರದ ಆಸ್ತಿ ಲೂಟಿ ಹೊಡೆದಿಲ್ಲ

ಮಿಸ್ಟರ್ ಈಶ್ವರಪ್ಪ, ಮಾರಿರೋದು ನನ್ನ ಆಸ್ತಿ : ಜಮೀರ್ ಅಹ್ಮದ್ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಮಿಸ್ಟರ್ ಈಶ್ವರಪ್ಪ ಅವರೇ. ನಾನು ‘ಐಎಂಎ ಜ್ಯುವೆಲರ್ಸ್‌’ ಮಾಲೀಕ ಮೊಹಮ್ಮದ್‌ ಮನ್ಸೂರ್‌ಗೆ ಮಾರಾಟ ಮಾಡಿರುವುದು ನನ್ನ ಸ್ವಂತ ಆಸ್ತಿಯನ್ನು. ನನ್ನ ಜಾಗ ಮಾರಲು ಯಾರ ಅಪ್ಪಣೆ ಪಡೀಬೇಕಿತ್ತು. ನಿಮ್ಮ ಹಾಗೆ ಸರ್ಕಾರಿ ಆಸ್ತಿಯನ್ನೇನು ಲೂಟಿ ಹೊಡೆದಿಲ್ಲವಲ್ಲ...’

ಸೋಮವಾರ ಹಾವೇರಿಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್, ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ತಿರುಗೇಟು ನೀಡಿದ ಪರಿ ಇದು. ‘ಜಮೀರ್ ಅವರನ್ನು ಲಾಕಪ್‌ನಲ್ಲಿಟ್ಟು ಒದ್ದರೆ, ಐಎಂಐ ಹಗರಣದ ಸತ್ಯಾಂಶ ಹೊರಬೀಳುತ್ತದೆ’ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದರು.

‘2008ರಲ್ಲಿ ನಿಮ್ಮ ನಾಯಕ ಯಡಿಯೂರಪ್ಪ, 11 ಮಂದಿ ಆಪ್ತರೊಂದಿಗೆ ಜೈಲಿಗೆ ಹೋಗಿದ್ದರು. ಮುಖ್ಯಮಂತ್ರಿಯಾಗಿ ಜೈಲಿಗೆ ಹೋಗಿ ಬಂದ ಉದಾಹರಣೆ ದೇಶದ ಇತಿಹಾಸದಲ್ಲೇ ಇಲ್ಲ. ಹೀಗಿರುವಾಗ, ಯಾವ ನೈತಿಕತೆ ಇಟ್ಟುಕೊಂಡು ನಮ್ಮ ಬಗ್ಗೆ ಮಾತನಾಡುತ್ತೀರಿ’ ಎಂದು ಜಮೀರ್ ಖಾರವಾಗಿ ಪ್ರಶ್ನಿಸಿದರು.

‘ನನ್ನ ಆಸ್ತಿಯನ್ನು 2017ರ ಡಿಸೆಂಬರ್‌ನಲ್ಲಿ ಮನ್ಸೂರ್‌ಗೆ ಮಾರಾಟ ಮಾಡಿದ್ದೆ. ಅದಕ್ಕೆ ₹ 5 ಕೋಟಿ ಮುಂಗಡವನ್ನು ಆರ್‌ಟಿಜಿಎಸ್ ಮೂಲಕ ಪಡೆದುಕೊಂಡಿದ್ದೆ. 2018ರ ಜೂನ್‌ನಲ್ಲಿ ಬಾಕಿ ₹ 4.36 ಕೋಟಿ ಪಡೆದು ನೋಂದಣಿ ಮಾಡಿಕೊಟ್ಟೆ. ಚುನಾವಣೆ ಅಫಿಡೆವಿಟ್‌ನಲ್ಲಿ ಈ ಎಲ್ಲ ವಿವರ ತೋರಿಸಿದ್ದೇನೆ. ತೆರಿಗೆಗಳನ್ನೂ ಪಾವತಿಸಿದ್ದೇನೆ. ಈಶ್ವರಪ್ಪ ಇನ್ನೇನು ದಾಖಲೆ ಬೇಕು ಕೇಳಲಿ. ತೋರಿಸುತ್ತೇನೆ’ ಎಂದು ಸವಾಲು ಹಾಕಿದರು.

‘ಜಾರಿ ನಿರ್ದೇಶನಾಲಯದಿಂದ (ಇಡಿ) ನನ್ನೊಬ್ಬನಿಗೆ ಮಾತ್ರ ನೋಟಿಸ್ ಬಂದಿಲ್ಲ. ಮನ್ಸೂರ್ ಜತೆ ವ್ಯವಹಾರ ನಡೆಸಿದ್ದ ಎಲ್ಲರಿಗೂ ನೋಟಿಸ್ ಹೋಗಿದೆ. ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದ್ದಾರೆ ಅಷ್ಟೆ. ಆಸ್ತಿ ಮಾರಿರುವುದನ್ನು ಬಿಟ್ಟರೆ ಆ ಹಗರಣದಲ್ಲಿ ನನ್ನ ಪಾತ್ರವಿಲ್ಲ. ಎಸ್‌ಐಟಿ ತನಿಖೆಯಿಂದ ಸತ್ಯಾಂಶ ಹೊರಬರದಿದ್ದರೆ, ಬೇಕಿದ್ದರೆ ಸಿಬಿಐ ತನಿಖೆಗೂ ವಹಿಸಲಿ’ ಎಂದೂ ಹೇಳಿದರು.

‘ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ‘ಅಹಿಂದ’ ಸಂಘಟನೆ ಕಟ್ಟಲು ಹೊರಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಆ ರೀತಿ ಯಾವುದೇ ಟೀಮ್ ಕಟ್ಟಲು ಮುಂದಾಗಿಲ್ಲ. ಪಕ್ಷ ಸಂಘಟಿಸುವ ಜವಾಬ್ದಾರಿಯನ್ನು ನನಗೆ ಕೊಟ್ಟಿದ್ದಾರೆ’ ಎಂದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು