ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಹೊರಬಿದ್ದ ನೇಮಕಾತಿ ಆದೇಶ

ಮುನ್ಸಿಪಲ್ ಹೈಸ್ಕೂಲ್ ಶಿಕ್ಷಕರ ನ್ಯಾಯಾಂಗ ಹೋರಾಟಕ್ಕೆ ಜಯ
Last Updated 14 ಡಿಸೆಂಬರ್ 2012, 10:43 IST
ಅಕ್ಷರ ಗಾತ್ರ

ಹಾವೇರಿ: ಶಿಕ್ಷಕರ ನಗರದ ಮುನ್ಸಿಪಲ್ ಹೈಸ್ಕೂಲ್‌ನ ಮೂವರ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಅಸ್ತು ಅಂದಿದ್ದು, ನ. 30ರಂದು ಮೂವರು ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಿದೆ.

ಇದರಿಂದ ಶಿಕ್ಷಕರ ನೇಮಕಾತಿ ವಿವಾದಕ್ಕೆ ಅಂತಿಮ ತೆರೆ ಬಿದ್ದಂತಾಗಿದೆಯಲ್ಲದೇ, ಕಳೆದ ಮೂರು ವರ್ಷಗಳಿಂದ ಶಿಕ್ಷಕರು ನಡೆಸಿದ್ದ ನ್ಯಾಯಾಂಗ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ನೇಮಕಾತಿಗೊಂಡ ಶಿಕ್ಷಕರರ ಪರವಾಗಿದ್ದ ನಗರಸಭೆ ಸದಸ್ಯರ ಹಾಗೂ ನಗರಸಭೆಯ ಈಗಿನ ಆಡಳಿತ ಮಂಡಳಿ ನಡುವಿನ ವೈಯಕ್ತಿಕ ಪ್ರತಿಷ್ಠೆ ಹಾಗೂ ಜನಪ್ರತಿನಿಧಿಗಳ ಹಸ್ತಕ್ಷೇಪದಿಂದ ಇಡೀ ನೇಮಕಾತಿ ಪ್ರಕ್ರಿಯೆ ಕಗ್ಗಂಟಾಗುವುದರ ಜತೆಗೆ ನ್ಯಾಯಾಂಗ ಹೋರಾಟಕ್ಕೆ ವೇದಿಕೆ ಕಲ್ಪಿಸಿತ್ತು.

ಘಟನೆ ಹಿನ್ನೆಲೆ: ನಗರದ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಖಾಲಿ ಇರುವ ವಿಜ್ಞಾನ, ಚಿತ್ರಕಲಾ ಹಾಗೂ ದೈಹಿಕ ಶಿಕ್ಷಕರ ನೇಮಕಾತಿಗೆ 2010 ರಲ್ಲಿ ನಗರಸಭೆಯ ಅಂದಿನ ಆಡಳಿತ ಮಂಡಳಿ ಪತ್ರಿಕೆಯಲ್ಲಿ ಜಾಹೀರಾತು ನೀಡುವ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು.

ನಂತರದ ದಿನಗಳಲ್ಲಿ ನೇಮಕಾತಿಯ ಅಂತಿಮ ಹಂತಕ್ಕೆ ತಲುಪಿದ ಶಿಕ್ಷಕ ಆಕಾಂಕ್ಷಿ ಅಭ್ಯರ್ಥಿಗಳ ಸಂದರ್ಶನ ನಡೆಸಿ  ರೇಖಾ. ಟಿ.ಆರ್. ಎ.ಡಿ. ಎಣ್ಣಿಯವರ, ಜಿ.ಎಂ. ಯತ್ತಿನಹಳ್ಳಿ ಎಂಬುವವರನ್ನು ಅಂತಿಮವಾಗಿ ಆಯ್ಕೆ ಮಾಡಿ ನಗರಸಭೆ ಆಗಿನ ಅಧ್ಯಕ್ಷರಾಗಿದ್ದ ಮಂಜುಳಾ ಕರಬಸಮ್ಮನವರ ಅವರಿಗೆ ನಗರಸಭೆ ಲೆಟರ್‌ಹೆಡ್ ಮೇಲೆ ನೇಮಕಾತಿ ಆದೇಶ ನೀಡಲಾಗಿತ್ತು.

ನೇಮಕಾತಿ ಆದೇಶ ಪಡೆದ ಈ ಮೂವರು ಶಿಕ್ಷಕರು ಒಂದು ದಿನ ಶಾಲಾ ಸೇವೆಗೆ ಹಾಜರಾಗಿದ್ದರು. ಅಂದಿನ ಶಾಲಾ ಮುಖ್ಯೋಪಾಧ್ಯಾಯರು ಅವರನ್ನು ಸೇವೆಗೆ ಸೇರಿಸಿಕೊಂಡಿದ್ದರು. ಆದರೆ, ಸೇವೆಗೆ ಸೇರಿದ ದಿನವೇ ಅವರ ನೇಮಕಾತಿ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. ನಗರಸಭೆಯ ಸಾಮಾನ್ಯ ಸಭೆಯ ಅನುಮೋದನೆ ಪಡೆದಿಲ್ಲ. ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ನಗರಸಭೆಯ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ. ಆದಕಾರಣ ಆ ಮೂವರು ಶಿಕ್ಷಕರ ನೇಮಕಾತಿಯನ್ನು ತತಕ್ಷಣದಿಂದ ರದ್ದುಗೊಳಿಸಾಗಿದೆ ಎಂದು ನಗರಸಭೆ ಆಯುಕ್ತರು ನೇಮಕವನ್ನು ರದ್ದತಿ ಮಾಡಿದ್ದರಲ್ಲದೇ, ಆ ಮೂವರು ಶಿಕ್ಷಕರನ್ನು ಶಾಲೆಯಿಂದ ಬಿಡುಗಡೆಗೊಳಿಸುವಂತೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ಆದೇಶಿಸಿದ್ದರು. ಸೇವೆಗೆ ಸೇರಿದ ದಿನವೇ ಬಿಡುಗಡೆಯಾದ ಶಿಕ್ಷಕರು, ತಮ್ಮ ನೇಮಕಾತಿ ರದ್ಧತಿ ಮಾಡಿರುವ ಆಯುಕ್ತರ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು.

ಆಗ ಮಾನ್ಯ ನ್ಯಾಯಾಲಯವು ಶಿಕ್ಷಕರ ನೇಮಕಾತಿ ಕುರಿತ ನಡೆದ ಪ್ರಕ್ರಿಯೆ ಹಾಗೂ ತೆಗೆದುಕೊಂಡ ಕ್ರಮದ ಬಗ್ಗೆ 90 ದಿನಗಳೊಳಗಾಗಿ ನ್ಯಾಯಾಲಯಕ್ಕೆ ವರದಿ ನೀಡುವಂತೆ ನಗರಸಭೆಗೆ ಸೂಚಿಸಿತು. ಆದರೆ, ನಗರಸಭೆ ನ್ಯಾಯಾಲಯದ ಗಡುವು ಮೂಗಿದರೂ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಮಾಡಿದಾಗ ಮತ್ತೆ ಆ ಶಿಕ್ಷಕರು ನಗರಸಭೆ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯವು ನಗರಸಭೆ ನಿರ್ಲಕ್ಷ್ಯದ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿತ್ತಲ್ಲದೇ, ಪ್ರಕರಣದ ವಿಚಾರಣೆ ನಡೆದ ಸಂದರ್ಭದಲ್ಲಿ ನಗರಸಭೆ ಸದಸ್ಯರು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಆದೇಶಿಸಿತ್ತು. ಆಗಲು ನಗರಸಭೆ ಸದಸ್ಯರು ನ್ಯಾಯಾಲಯಕ್ಕೆ ಹಾಜರಾಗದಿದ್ದಾಗ ಬಂಧನ ವಾರೆಂಟ್ ಹೊರಡಿಸಿತ್ತು. ಆಗ ಅನಿವಾರ್ಯವಾಗಿ ನಗರಸಭೆ ಎಲ್ಲ ಸದಸ್ಯರು (ಶೋಭಾತಾಯಿ ಮಾಗಾವಿ) ಹೊರತುಪಡಿಸಿ ನ್ಯಾಯಾಲಯಕ್ಕೆ ಹಾಜರಾಗಿದ್ದರಲ್ಲದೇ, ಅವರನ್ನೆ ನೇಮಕ ಮಾಡಿಕೊಳ್ಳುವ ಬಗ್ಗೆ ಲಿಖಿತ ಹೇಳಿಕೆ ನೀಡಿದ್ದರು. ತದನಂತರದಲ್ಲಿ ನೇಮಕ ಪ್ರಕ್ರಿಯೆ ಕುರಿತು ನಗರಸಭೆಯಲ್ಲಿ ಠರಾವು ಪಾಸು ಮಾಡಿ ಮುಂದಿನ ಕ್ರಮಕ್ಕಾಗಿ ಶಿಕ್ಷಣ ಇಲಾಖೆ ಆಯುಕ್ತರಿಗೆ ಕಳುಹಿಸಿಕೊಡಲಾಗಿತ್ತು.

ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯಕ್ತರು ಮೂವರು ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪರಿಶೀಲಿಸಿ ಹಾಗೂ ನ್ಯಾಯಾಲಯದ ಆದೇಶವನ್ನಿಟ್ಟುಕೊಂಡು ಮೂವರು ಶಿಕ್ಷಕರನ್ನು ನೇಮಕದ ಆದೇಶವನ್ನು ನ. 30ರಂದೇ ಹೊರಡಿಸಿದ್ದಾರೆ. ಆದೇಶದ ಪ್ರತಿಯನ್ನು ಮಾಹಿತಿಗಾಗಿ ಹಾವೇರಿ ಜಿಲ್ಲಾ ಡಿಡಿಪಿಐ, ಹಾವೇರಿ ನಗರಸಭೆ ಅಧ್ಯಕ್ಷರಿಗೆ, ಕಾರ್ಯದರ್ಶಿಗಳಿಗೆ ಹಾಗೂ ಹಾವೇರಿ ತಾಲ್ಲೂಕು ಬಿಇಓಗೆ ಕಳುಹಿಸಲಾಗಿದೆ ಎಂದು ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಬಾರದ ಆದೇಶ: ಶಿಕ್ಷಕರ ನೇಮಕಾತಿ ಆದೇಶ ಹೊರಬಿದ್ದು 14 ದಿನಗಳು ಕಳೆದಿವೆ. ಆದರೆ, ಈವರೆಗೆ ನಗರಸಭೆಗೆ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಇದನ್ನು ನಗರಸಭೆ ಆಯುಕ್ತರೇ ಮಾಧ್ಯಮದವರಿಗೆ ಸ್ಪಷ್ಟಪಡಿಸಿದ್ದಾರೆ. `ನಮ್ಮ ಕಚೇರಿಗೆ ಯಾವುದೇ ಆದೇಶದ ಪ್ರತಿ ಬಂದಿಲ್ಲ. ಆದೇಶ ಬಂದ ನಂತರವೂ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು' ಎಂದು ನಗರಸಭೆ ಆಯುಕ್ತ ಎಚ್.ಕೆ. ರುದ್ರಪ್ಪ ತಿಳಿಸಿದ್ದಾರೆ. ನಗರಸಭೆ ಸದಸ್ಯೆ ಮಂಜುಳಾ ಕರಬಸಮ್ಮನವರ ಹಾಗೂ ಉಪಾಧ್ಯಕ್ಷೆ ಲಲಿತಾ ಗುಂಡೇನಹಳ್ಳಿ ಅವರು ಗುರುವಾರ ನೇಮಕಾತಿ ಆದೇಶದ ಪ್ರತಿಯನ್ನು ಆಯುಕ್ತರ ಗಮನಕ್ಕೆ ತಂದರು. ಆದರೆ ಅವರು, ನಮಗೆ ಆದೇಶದ ಪ್ರತಿ ಬರುವುವರೆಗೆ ಏನನ್ನು ಹೇಳಲಾಗುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT