ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನವಿರೋಧಿ ಕಾಂಗ್ರೆಸ್‌ ಸರ್ಕಾರಕ್ಕೆ ಭವಿಷ್ಯವಿಲ್ಲ’

ಶಿಗ್ಗಾವಿಯಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಪೂರ್ವಭಾವಿ ಸಭೆ
Last Updated 14 ಡಿಸೆಂಬರ್ 2017, 7:11 IST
ಅಕ್ಷರ ಗಾತ್ರ

ಶಿಗ್ಗಾವಿ: ಕಳೆದ ಐದು ವರ್ಷಗಳ ಕಾಂಗ್ರೆಸ್‌ ಸರ್ಕಾದ ಆಡಳಿತದಲ್ಲಿನ ಸಮಾಜಗಳನ್ನು ವಿಂಗಡಿಸುವ ನೀತಿ ಯಿಂದ ಜನ ಬೇಸತ್ತು ಹೋಗಿದ್ದಾರೆ.ಅದರಿಂದಾಗಿ ಜನವಿರೋಧಿ, ರೈತವಿರೋಧಿ ಸರ್ಕಾರಕ್ಕೆ ಮುಂಬರುವ ದಿನಗಳಲ್ಲಿ ಭವಿಷ್ಯವಿಲ್ಲ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದಲ್ಲಿ ಬುಧವಾರ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಇದೇ 23ರಂದು ನಗರಕ್ಕೆ ಆಗಮಿಸಲಿದ್ದು ಅದರ ಅಂಗವಾಗಿ ನಡೆದ ಪೂರ್ವಬಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಡಿ.5ರಂದು ನಡೆದ ಸಮಾವೇಶ ಸರ್ಕಾರದ ಶಕ್ತಿಯಾಗಿತ್ತು. ಆದರೆ ಇದೇ 23ರಂದು ನಡೆಯ ಲಿರುವ ಸಮಾವೇಶ ಜನಶಕ್ತಿ ಸಮಾವೇಶವಾಗಲಿದೆ. ಯಾವುದೇ ತಪ್ಪು ಮಾಡದ ನಿರಪರಾಧಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಾಂಗ್ರೆಸ್‌ನ ಕುತಂತ್ರದಿಂದ ಜೈಲುವಾಸ ಅನುಭವಿಸುವಂತಾಗಿದೆ ಎಂದರು.

ಮತ್ತೆ ಅವರೇ ಮುಖ್ಯಮಂತ್ರಿಗಳಾದರೆ ಕಾಂಗ್ರೆಸ್‌ ಮುಖಂಡರು ಜೈಲು ವಾಸ ಮಾಡಬೇಕಾಗುತ್ತದೆ ಎಂಬ ಭಯ ಈಗಾಗಲೇ ಕಾಂಗ್ರೆಸಿಗರಲ್ಲಿ ಹುಟ್ಟಿಕೊಂಡಿದೆ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಹರಿಹಾಯ್ದರು.

ರಾಜ್ಯದ ಎಸ್‌ಸಿ,ಎಸ್‌ಟಿ ಜನಾಂಗಕ್ಕೆ ಬಿಡುಗಡೆಯಾದ ₹14ಸಾವಿರ ಕೋಟಿ ಅನುದಾನ ಈ ವರೆಗೆ ವಿತರಣೆ ಮಾಡಿಲ್ಲ. ಅದರಿಂದ ದಲಿತರಿಗೆ, ಅಹಿಂದ ಜನಾಂಗಕ್ಕೆ ಅನ್ಯಾಯವಾಗುತ್ತಿದೆ ಎಂದು ಅವರು ಟೀಕಿಸಿದರು.

ರಾಜ್ಯದಲ್ಲಿ 4ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ಈ ವರೆಗೆ ಪರಿಹಾರಧನ ನೀಡಿಲ್ಲ. ಜಿಲ್ಲೆಗೆ ₹54ಕೋಟಿ ಅನುದಾನ ಬೆಳೆ ವಿಮೆ, ಬೆಳೆ ಪರಿಹಾರಕ್ಕಾಗಿ ಬಿಡುಗಡೆ ಈ ವರೆಗೆ ವಿತರಣೆ ಮಾಡಿಲ್ಲ ಎಂದು ಅವರು ಟೀಕಿಸಿದರು.

ಇದರಿಂದ ರೈತ ಸಮೂಹ ಆರ್ಥಿಕವಾಗಿ ಕುಗ್ಗಿದ್ದಾರೆ. ಆದರೂ ಕಾಂಗ್ರೆಸ್‌ ಮತ್ತೆ ಆಡಳಿತದ ಕನಸು ಕಾಣುತ್ತಿದೆ ಎಂದ ಅವರು ಅಸ್ಥಿರತೆಯಿಂದ ಸ್ಥಿರತೆಯತ್ತ ಪರಿವರ್ತನೆ ಮಾಡುವ ಉದ್ದೇಶ ಈ ಯಾತ್ರೆಯದಾಗಿದೆ ಎಂದರು.

ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸಿದ್ದರಾಜ ಕಲಕೋಟಿ ಮಾತನಾಡಿ, ಬೂತ್ ಮಟ್ಟದಿಂದ ಕಾರ್ಯಕರ್ತರು ಸಂಘಟಕರಾಗಬೇಕು. ಬಿಜೆಪಿ ಸದಸ್ಯತ್ವದ ಅಭಿಯಾನ ಕಾರ್ಯ ಹೆಚ್ಚಿಸಬೇಕು. ತಂತ್ರಜ್ಞಾನ ಬಳಸಿ ಜನಸಂಪರ್ಕ ಹೆಚ್ಚಿಸಬೇಕು. ಕಾರ್ಯಕರ್ತರ ಶ್ರಮ ದಿಂದ ಪಕ್ಷದ ಅಭಿವೃದ್ಧಿ ಸಾಧ್ಯವಿದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನ ಮಾತನಾಡಿ, ಸರ್ಕಾರದ ಹಣದಲ್ಲಿ ಕಾಂಗ್ರೆಸ್‌ ಸಮಾವೇಶಗಳು ನಡೆಯುತ್ತಿವೆ. ಈ ವರೆಗೆ ಅಭಿವೃದ್ಧಿ ಮಾಡದ ಕಾಂಗ್ರೆಸ್‌ ಅಡಿಗಲ್ಲು ಹಾಕಿ ಹೋಗುತ್ತಿದೆ. ನಂತರ ಬಿಜೆಪಿ ಕಾರ್ಯ ಪೂರ್ಣಗೊಳಿಸಲಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ, ಮುಖಂಡ ಕಲ್ಯಾಣಕುಮಾರ ಶೆಟ್ಟರ್‌ ಮಾತನಾಡಿದರು. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಪುರಸಭೆ ಸದಸ್ಯರು, ಮುಖಂಡರು ಇದ್ದರು. ಶಿವಾನಂದ ಮ್ಯಾಗೇರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT