ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಮರಳು ನೀತಿಗೆ ವಿರೋಧ

ಡಿಸಿ ಕಚೇರಿ ಎದುರು ಲಾರಿ ಮಾಲೀಕರ ಪ್ರತಿಭಟನೆ
Last Updated 3 ಏಪ್ರಿಲ್ 2013, 6:40 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ ಮರಳು ಮಾನಿಟರಿಂಗ್ ಹೊಸ ಮರಳು ನೀತಿಯನ್ನು ಜಾರಿಗೆ ತರುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ, ನೂತನ ಮರಳು ನೀತಿಯಲ್ಲಿನ ನ್ಯೂನತೆಗಳನ್ನು ಸರಿಪಡಿಸಬೇಕೆಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಗೆಗೆ ಒತ್ತಾಯಿಸಿ ಜಿಲ್ಲೆಯ ಮರುಳು ಲಾರಿ ಮಾಲೀಕರು ಲಾರಿಗಳ ಸಮೇತ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಜಿಲ್ಲೆಯ ಮರಳು ಲಾರಿ ಮಾಲೀಕರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಜಗದೀಶ ಬೆಟಗೇರಿ ಮಾತನಾಡಿ, ನೂತನವಾಗಿ ಜಾರಿಗೆ ತರಲಾದ ಮರಳು ನೀತಿ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.

ಅಸಮರ್ಪಕ ಮರಳು ಹರಾಜು ನಡೆಸುವುದು ಹಾಗೂ ಹರಾಜು ಪಡೆದ ಗುತ್ತಿಗೆದಾರರಿಗೆ ನಾನಾ ಷರತ್ತುಗಳನ್ನು ವಿಧಿಸುವ ಮೂಲಕ ಸಮಿತಿಯು ಮರಳು ಸಾಗಣೆಗೆ ಅನಾನುಕೂಲ ಮಾಡುತ್ತಿದೆ. ಅಲ್ಲದೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಹ ಮರಳು ಸಾಗಣೆ ಸಮರ್ಪಕವಾಗಿ ಲಾರಿಗಳಿಗೆ ಪಾಸ್‌ಗಳನ್ನು ವಿತರಿಸುತ್ತಿಲ್ಲ. ಇದರಿಂದ ಮರಳು ಸಾಗಿಸುವ ಉದ್ಯೋಗವನ್ನು ನಂಬಿರುವ ಲಾರಿಗಳ ಮಾಲಿಕರು, ಚಾಲಕರು, ಕ್ಲೀನರ್‌ಗಳು ಬದುಕು ನಡೆಸುವುದೇ ಕಷ್ಟವಾಗಿದೆ ಎಂದು ಹೇಳಿದರು.

ಮರಳು ಸಂಗ್ರಹ ಮಾಡುವ ಯಾರ್ಡ್‌ನಲ್ಲಿ ಮರಳು ಸಂಗ್ರಹ ಇಲ್ಲದಿದ್ದ ಸಂದರ್ಭದಲ್ಲಿಯೂ ಸಂಬಂಧಿಸಿದ ಇಲಾಖೆಯು ಲಾರಿ ಮಾಲಿಕರಿಗೆ ಮತ್ತು ಮರಳು ಬೇಕಾದವರಿಗೆ ಕಾನೂನು ಬಾಹಿರ ಪರವಾನಿಗೆ ವಿತರಿಸುತ್ತಿದೆ. ಈ ಹಿಂದೆ ಪ್ರತಿ ಟನ್‌ಗೆ ಪಡೆಯುತ್ತಿದ್ದ 30 ರೂಪಾಯಿ ರಾಜಸ್ವ ಧನದ ಬದಲಿಗೆ ಈಗ ಟನ್‌ಗೆ 400 ರೂ. ಪಡೆಯಲಾಗುತ್ತಿದೆ ಎಂದು ಆರೋಪಿಸಿದರು.

ಮರಳು ಸಾಗಾಣಿಕೆಯಲ್ಲಿರುವ ಎಲ್ಲ ನ್ಯೂನ್ಯತೆಗಳನ್ನು ಕೂಡಲೇ ಸರಿಪಡಿಸಿ ಮರಳು ನೀತಿಯನ್ನು ಸರಿಯಾಗಿ ಜಾರಿಗೊಳಿಸಿ ಕೂಲಿ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಮರಳು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಮರಳು ಲಾರಿ ಮಾಲಿಕರ ಸಂಘದ ಉಪಾಧ್ಯಕ್ಷ ಮುರಿಗೆಪ್ಪ ನೀರಲಗಿ, ಕಾರ್ಯದರ್ಶಿ ಬಿ.ಬಿ. ಬೆಳಗಾವೆಪ್ಪ, ಸುಭಾಷ ಮೈಲಾರ, ಶಂಕ್ರಪ್ಪ ಇಟಗಿ, ರುದ್ರಪ್ಪ ಹಾದಿಮನಿ, ಮಾಂತೇಶ ಹುಳ್ಯಾಳ, ಚನ್ನಬಸಪ್ಪ ಚೆಕ್ಕಿ ಅಲ್ಲದೇ ನೂರಾರು ಜನ ಲಾರಿ ಮಾಲೀಕರು, ಚಾಲಕರು ಹಾಗೂ ಕ್ಲೀನರ್‌ಗಳು ಭಾಗವಹಿಸಿದ್ದರು.

ಬೃಹತ್ ಮೆರವಣಿಗೆ: ಸೋಮವಾರ ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಲಾರಿಗಳ ಸಮೇತ ಪ್ರತಿಭಟನಾ ಮೆರವಣಿಗೆ ನಡೆಸಿದ ಲಾರಿ ಮಾಲೀಕರು ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿದರು.ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಪ್ರತಿಭಟನಾ ಧರಣಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT