ವೃದ್ಧಾಪ್ಯದಲ್ಲೂ ಭಾರದ ನೊಗ ಹೊತ್ತ ಸೇತುವೆ

7
ಬಾರಿ ವಾಹನ ಸಂಚಾರಕ್ಕೆ ನಿಷೇಧವಿದ್ದರೂ ಮೌನಕ್ಕೆ ಶರಣಾದ ಅಧಿಕಾರಿಗಳು

ವೃದ್ಧಾಪ್ಯದಲ್ಲೂ ಭಾರದ ನೊಗ ಹೊತ್ತ ಸೇತುವೆ

Published:
Updated:
Deccan Herald

ಶಿವಮೊಗ್ಗ: ರಾಜ್ಯದ ಪ್ರಾಚೀನ ಸೇತುವೆಗಳಲ್ಲಿ ಒಂದಾದ ಶಿವಮೊಗ್ಗ ತುಂಗಾನದಿ ಸೇತುವೆ ಇದೀಗ ಬಾರಿ ವಾಹನಗಳ ಸಂಚಾರದಿಂದಾಗಿ ಅಪಾಯಕ್ಕೆ ಎದುರು ನೋಡುತ್ತಿದೆ. 

ಶಿವಮೊಗ್ಗ ತುಂಗಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಸೇತುವೆ ಶಿವಮೊಗ್ಗ ಜನರ ಜೀವನಾಡಿಯಾಗಿದೆ. ಲಕ್ಷಾಂತರ ಜನರ ಓಡಾಡಕ್ಕೆ, ವ್ಯಾಪಾರ ವಹಿವಾಟಿಗೆ ಪ್ರಮುಖ ಕೊಂಡಿಯಾಗಿರುವ ಈ ಸೇತುವೆಗೆ ತನ್ನದೇ ಆದ ಇತಿಹಾಸವಿದೆ. ಇಂತಹ ಸೇತುವೆ ಇದೀಗ ನಿರ್ಲಕ್ಷಕ್ಕೊಳಗಾಗಿ ಭಾರಿ ಆಪತ್ತು ಸೃಷ್ಟಿಸುವ ಹಂತದಲ್ಲಿದೆ.

ಸುಮಾರು 15 ವರ್ಷಗಳ ಹಿಂದೆಯೇ ಈ ಸೇತುವೆ ಮೇಲೆ ಬಾರಿ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಲಾಗಿದೆ. ಶಿವಮೊಗ್ಗ ಲೋಕೋಪಯೋಗಿ ಇಲಾಖೆಯೂ ಮುಂಜಾಗ್ರತೆ ಕ್ರಮವಾಗಿ ಬಾರಿ ವಾಹನಗಳ ನಿಷೇಧದ ಆದೇಶ ಹೊರಡಿಸಿದೆ. ಆದರೂ ಹಾಡಹಗಲೇ ನಿಯಮ ಮೀರಿ ಭಾರಿ ವಾಹನಗಳು ಸಂಚರಿಸುತ್ತಿದ್ದರೂ ಅಧಿಕಾರಿಗಳು ಹಾಗೂ ಪೊಲೀಸರು ಮೌನಕ್ಕೆ ಶರಣಾಗಿದ್ದಾರೆ.

ಸೇತುವೆಗೆ 147 ವರ್ಷ:  ಸೇತುವೆ ಇಲ್ಲದ ಕಾಲದಲ್ಲಿ ಜನರು ತೆಪ್ಪದಲ್ಲಿ ನದಿಯನ್ನು ದಾಟಬೇಕಾಗಿತ್ತು. ಇದರಿಂದ ಪ್ರಮುಖ ವ್ಯಾಪಾರ ವಹಿವಾಟಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಅಲ್ಲದೇ ನದಿ ದಾಟುವಾಗ ಅಪಾರ ಸಾವು ನೋವು ಸಂಭವಿಸುತ್ತಿತ್ತು. ಇದನ್ನು ಮನಗಂಡು 1871ರಲ್ಲಿ ಅಂದಿನ ಬ್ರಿಟಿಷ್ ಎಂಜಿನಿಯರ್ ಗೋರ್ಡನ್‌ ಅವರ ನೇತೃತ್ವದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಯಿತು. ಈ ಸೇತುವೆ ನಿರ್ಮಾಣಕ್ಕಾಗಿ 3 ವರ್ಷ ಹಾಗೂ ₹ 1.75 ಲಕ್ಷ ವೆಚ್ಚ ತಗುಲಿತ್ತು. ಬೆಲ್ಲ, ಸುಣ್ಣ, ಇಟ್ಟಿಗೆ ಮತ್ತಿತರ ಪದಾರ್ಥಗಳನ್ನು ಬಳಸಿ ಗಚ್ಚಿನಿಂದ ನಿರ್ಮಿಸಿರುವ ಈ ಸೇತುವೆಗೆ 100 ವರ್ಷಗಳ ಆಯಸ್ಸು ಎಂದು ಅಂದಾಜಿಸಲಾಗಿತ್ತು. ಆದರೆ ಈ ಸೇತುವೆ 147 ವರ್ಷಗಳಾದರೂ ತನ್ನ ಗಟ್ಟಿತನ ಉಳಿಸಿಕೊಂಡಿದೆ. ಇನ್ನು ಮುಂದಾದರೂ ಸಂಬಂಧಪಟ್ಟವರು ಈ ಬಗ್ಗೆ ಮುತುವರ್ಜಿ ವಹಿಸಿದರೇ ಸೇತುವೆಯನ್ನು ಮತ್ತಷ್ಟು ವರ್ಷಗಳು ಕಾಪಾಡಿಕೊಳ್ಳಬಹುದು ಎಂದು ಇತಿಹಾಸ ತಜ್ಞ ಖಂಡೋಬರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.

ಗಿಡಗಂಟೆಯಿಂದ ಸೇತುವೆ ಬಿರುಕು : ಸೇತುವೆಯ ಬಹುತೇಕ ಕಡೆ ಗಿಡಗಂಟೆಗಳು ಬೆಳೆದು ಸೇತುವೆ ಬಿರುಕು ಮೂಡಿಸಿವೆ. ಅಲ್ಲದೇ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾ ನದಿ ತುಂಬಿ ಹರಿಯುತ್ತಿದೆ. ನೀರಿನ ರಭಸಕ್ಕೆ ಸೇತುವೆಗೆ ದೊಡ್ಡ ಪ್ರಮಾಣದ ಹಾನಿಯಾಗುತ್ತಿದೆ. ಅಲ್ಲಲ್ಲಿ ಸೇತುವೆ ಬಿರುಕು ಬಿಟ್ಟಿದೆ. ಸುಣ್ಣದ ಲೇಪನ ಮುರಿದು ಬಿದ್ದಿವೆ. ಆದರೂ ಸಂಬಂಧಪಟ್ಟವರು ಗಿಡಗಂಟೆಗಳನ್ನು ಕಡಿಯುವ, ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ.

ನವೀಕರಣ ಕಾಣದ ಸೇತುವೆ: ಅನೇಕ ವರ್ಷಗಳಿಂದ ಸೇತುವೆಯ ನವೀಕರಣ ಅಥವಾ ದುರಸ್ತಿಯ ಗೋಜಿಗೆ ಹೋಗದೇ ಇರುವುದೇ ಸೇತುವೆ ಹದಗೆಡಲು ಕಾರಣ. ಸೇತುವೆ ಆಕಸ್ಮಾತ್‌ ಉರುಳಿದರೆ ಹೊಣೆ ಯಾರು ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಸರಕಾರದ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಸೇತುವೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕಿದೆ.

ಈ ಕುರಿತು ಹಿರಿಯ ನಿವೃತ್ತ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಪ್ರತಿವರ್ಷವೂ ಸೇತುವೆಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂಬ ನಿಯಮವಿದೆ. ಅಲ್ಲದೇ ದುರಸ್ಥಿ ಕಾರ್ಯಗಳಿದ್ದರೇ ತಕ್ಷಣ ಸರಿಪಡಿಸಬೇಕು. ಆದರೆ ಸಂಬಂಧಪಟ್ಟವರು ಈ ಬಗ್ಗೆ ಮೌನವಹಿಸಿರುವುದು ಬೇಸರದ ಸಂಗತಿ ಎಂದರು.

ತಾವು ಹೊಸದಾಗಿ ನೇಮಕಗೊಂಡಿದ್ದು, ಸೇತುವೆಯ ಬಗ್ಗೆ ಸಂಬಂಧಪಟ್ಟವರಿಂದ ಮಾಹಿತಿ ಸಂಗ್ರಹಿಸಲಾಗುವುದು. ಅಲ್ಲದೇ ಬಾರಿ ವಾಹನಗಳ ಸಂಚಾರ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗುವುದು.
ರಮೇಶ್‌ ಬಾಣದ್, ಕಾರ್ಯನಿರ್ವಾಹಕ ಎಂಜಿನಿಯರ್.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !