ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಲಕರ್ಟಿ ಆರ್‌ಬಿ ತಾಂಡಾದ ಪರ್ಯಾಯ ಮಾರ್ಗ; 1 ಕಿ.ಮೀ ಅಂತರ: 10ಕ್ಕೂ ಅಧಿಕ ಹಂಪ್ಸ್

ಹಲಕರ್ಟಿ ಆರ್‌ಬಿ ತಾಂಡಾದ ಪರ್ಯಾಯ ಮಾರ್ಗ: ಪ್ರಯಾಣಿಕರಿಗೆ ಹಂಪ್ಸ್‌ ಕಂಟಕ
Published 17 ಆಗಸ್ಟ್ 2024, 5:40 IST
Last Updated 17 ಆಗಸ್ಟ್ 2024, 5:40 IST
ಅಕ್ಷರ ಗಾತ್ರ

ವಾಡಿ: ಯಾದಗಿರಿ ಕಲಬುರಗಿ ಮಧ್ಯೆ ನಿತ್ಯ ಓಡಾಡುವ ಪ್ರಯಾಣಿಕರಿಗೆ ಅವೈಜ್ಞಾನಿಕ ಹಂಪ್‌ಗಳೇ ಕಂಟಕವಾಗಿವೆ!

ರಸ್ತೆ ಮೇಲೆ ಹಾಕಲಾಗಿರುವ ಹಂಪ್‌ಗಳು ಪ್ರಯಾಣಿಕರ ಸಂಕಟ ಹೆಚ್ಚಿಸುತ್ತಿವೆ. ಕಳೆದ 3 ತಿಂಗಳಿಂದ ವಾಡಿ ರೈಲ್ವೆ ಸೇತುವೆ ಕಾಮಗಾರಿ ನಡೆದಿದ್ದು ಬಸ್‌ಗಳ ಓಡಾಟಕ್ಕೆ ಹಲಕರ್ಟಿ ಆರ್.ಬಿ.ತಾಂಡಾದ ಮೂಲಕ ಪರ್ಯಾಯ ಮಾರ್ಗ ಸೃಷ್ಟಿಸಲಾಗಿದೆ.

ಆದರೆ 1 ಕಿಮೀ ರಸ್ತೆಯಲ್ಲಿ ಸುಮಾರು 10ಕ್ಕೂ ಅಧಿಕ ಹಂಪ್‌ಗಳು ಇದ್ದು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿವೆ. ಹಂಪ್‌ ಮೇಲೆ ಏರಿ ಇಳಿಯುವಾಗ ಬಸ್‌ ಹಾಗೂ ಪ್ರಯಾಣಿಕರು ನರಳುವಂತಾಗಿವೆ. ಬಸ್ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರು ತಮ್ಮ ಆಸನ ಬಿಟ್ಟು ಮೇಲೇಳುವ ಸ್ಥಿತಿ ಉಂಟಾಗುತ್ತಿದೆ. ಪ್ರಯಾಣಿಕರಿಗೆ ಕುತ್ತಿಗೆ ಬೇನೆ, ಸೊಂಟ ನೋವು ಉಂಟಾಗುತ್ತಿದೆ. ಗರ್ಭಿಣಿಯರು ಒಂದು ವೇಳೆ ಪ್ರಯಾಣಿಸಿದರೆ ಗರ್ಭಪಾತ ಖಚಿತ ಎನ್ನುವಂತಿದೆ.

ದುತ್ತನೇ ಎದುರಾಗುವ ಹಂಪ್‌ಗಳನ್ನು ತಪ್ಪಿಸುವ ಭರಾಟೆಯಲ್ಲಿ ಒಮ್ಮೊಮ್ಮೆ ವೇಗವಾಗಿ ಬ್ರೇಕ್ ಹಾಕುವ ಘಟನೆಗಳು ಜರುಗುತ್ತಿದ್ದು, ಒಬ್ಬರ ಮೇಲೆ ಒಬ್ಬರು ಬೀಳುವುದು ಸಾಮಾನ್ಯವಾಗಿದೆ. ವಯೋವೃದ್ಧರು, ಮಕ್ಕಳು, ರೋಗಿಗಳು ಓಡಾಡುತ್ತಿದ್ದು ನಲುಗಿ ಹೋಗುತ್ತಿದ್ದಾರೆ. 1 ಕಿ.ಮೀ. ರಸ್ತೆ ಅಕ್ಷರಶಃ ನರಕದ ಅನುಭವ ಉಂಟು ಮಾಡುತ್ತಿದೆ. ಹಂಪ್‌ಗಳು ವೇಗವಾಗಿ ಸಂಚರಿಸುವ ವಾಹನಗಳಿಗೆ ತೀವ್ರ ಅಡ್ಡಿಯಾಗುತ್ತಿವೆ.

ಹೊಸ ಬಸ್‌ಗಳು ಈ ರಸ್ತೆ ಮೇಲೆ ಸಂಚರಿಸಿ ಎರಡೇ ತಿಂಗಳಲ್ಲಿ ಹಾಳಾಗಿ ಹೋಗುತ್ತಿವೆ. ಬಸ್‌ನ ಸಾಮಾನುಗಳು ಕಿತ್ತು ಬೀಳುತ್ತಿದ್ದು ಕೆಟ್ಟು ನಿಲ್ಲುತ್ತಿವೆ. ಹಂಪ್‌ಗಳ ಹಾವಳಿ ಮಧ್ಯೆ ಇಲ್ಲಿನ ಎರಡು ರೈಲ್ವೆ ಗೇಟ್‌ಗಳು ಹಾಗೂ ವಾಡಿ ರಾವೂರು ನಡುವಿನ ಮೂರು ಸಹಿತ ಒಟ್ಟು 5 ರೈಲ್ವೆ ಗೇಟ್ ದಾಟಲು ಹರಸಾಹಸ ಪಡುವಂತಾಗಿದೆ.

ಈಚೆಗೆ ಡಾಂಬರ್ ರಸ್ತೆ ನಿರ್ಮಿಸಲಾಗಿದ್ದು, ನಿರ್ಮಾಣ ಸಮಯದಲ್ಲಿ ಸ್ಥಳೀಯರೇ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮನವೊಲಿಸಿ ತಮ್ಮ ಮನೆಗಳ ಬಳಿ ಹಂಪ್‌ ಹಾಕಿಸಿಕೊಂಡಿದ್ದಾರೆ. ಈಗ ಅವೈಜ್ಞಾನಿಕ ಹಂಪ್‌ಗಳು ಪ್ರಾಣ ಹಿಂಡುತ್ತಿವೆ. ಕೂಡಲೇ ಹಂಪ್‌ಗಳ ತೆರವು ಮಾಡಬೇಕು. ಸುಸಜ್ಜಿತವಲ್ಲದ ಪ್ರಯಾಣದಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಜತೆಗೆ ಸುಸಜ್ಜಿತ ಬಸ್‌ಗಳು ಹಾಳಾಗಿ ಸಾರ್ವಜನಿಕ ಆಸ್ತಿಪಾಸ್ತಿ ಹಾಳಾಗುತ್ತಿದೆ. ವಾಡಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಗಿಯಲು ಇನ್ನೂ ಕನಿಷ್ಠ 4 ತಿಂಗಳು ಬೇಕಾಗಿದ್ದು, ಅಲ್ಲಿಯವರೆಗೂ ಈ ರಸ್ತೆಯೇ ಗತಿಯಾಗಿದೆ. ಕೂಡಲೇ ಹಂಪ್‌ಗಳನ್ನು ತೆರವು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹಲಕರ್ಟಿಯ ಆರ್‌ಬಿ ನಗರ ತಾಂಡಾದಲ್ಲಿ ಕೇವಲ 1 ಕಿ.ಮೀ ರಸ್ತೆ ಮೇಲೆ 10ಕ್ಕೂ ಅಧಿಕ ಹಂಪ್‌ಗಳು ಇದ್ದು ವಿಪರೀತ ಹಿಂಸೆ ಆಗುತ್ತಿದೆ. ಹಂಪ್‌ ತೆರವು ಮಾಡಬೇಕು.

-ರೋಹನ್ ಮುಕ್ತೇದಾರ ಅರುಣಕುಮಾರ ನವೀನ್ ಪಂಚಾಳ ವಿದ್ಯಾರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT