ಶುಕ್ರವಾರ, ಆಗಸ್ಟ್ 12, 2022
21 °C

ಚಿತ್ತಾಪುರ: ಧಾರಾಕಾರ ಮಳೆ; 12 ಸಾವಿರ ಹೆಕ್ಟೇರ್ ಬೆಳೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ತಾಲ್ಲೂಕಿನೆಲ್ಲೆಡೆ ಶನಿವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ನದಿ, ಹಳ್ಳಗಳು ತುಂಬಿ ಹರಿಯುತ್ತಿವೆ. ಜಮೀನುಗಳಿಗೆ ಪ್ರವಾಹದ ನೀರು ನುಗ್ಗಿ ಸುಮಾರು 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.

ಕಳೆದ ಜೂನ್‌ನಿಂದ ಆಗಸ್ಟ್‌ವರೆಗೆ ಸುರಿದ ಅತಿವೃಷ್ಟಿಯಿಂದ ಹೆಸರು, ಉದ್ದು, ತೊಗರಿ ಬೆಳೆಗಳಿಗೆ ಹಾನಿಯಾಗಿದೆ. ಜಮೀನುಗಳಲ್ಲಿ ಮಳೆ ನೀರು ನಿಂತು, ತಗ್ಗು ಪ್ರದೇಶದಲ್ಲಿ ನೀರು ಹರಿದು ನದಿ, ಹಳ್ಳಗಳ ಪಕ್ಕದಲ್ಲಿ ಇರುವ ಜಮೀನುಗಳಿಗೆ ಪ್ರವಾಹದ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.

ತಾಲ್ಲೂಕಿನ ಗುಂಡಗುರ್ತಿ ಹೋಬಳಿ ವ್ಯಾಪ್ತಿಯಲ್ಲಿ ಅತಿವೃಷ್ಟಿಯಾಗಿದ್ದು, ಹಳ್ಳದ ನೀರು ತೊಗರಿ ಹೊಲಗಳಿಗೆ ನುಗ್ಗಿ ನೂರಾರು ಹೆಕ್ಟೇರ್ ಬೆಳೆ ಹಾನಿಯಾಗಿದೆ. ಬಾಳೆ ತೋಟಕ್ಕೆ ನೀರು ನುಗ್ಗಿ ರೈತರು ಆತಂಕ ಪಡುವಂತಾಗಿದೆ ಎಂದು ಗ್ರಾಮದ ರೈತ ಸುನಿಲ್ ದೊಡ್ಡಮನಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಕಲಬುರ್ಗಿ ತಾಲ್ಲೂಕಿನ ಖಾಜಾ ಕೊಟನೂರ ಗ್ರಾಮದ ಕೆರೆ ಭರ್ತಿಯಾಗಿ ನೀರು ಹೊರಗೆ ಬಿಟ್ಟಿದ್ದರಿಂದ ಗುಂಡಗುರ್ತಿ ಹಳ್ಳದಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ನೀರು ಜಮೀನುಗಳಿಗೆ ನುಗ್ಗಿ ತೊಗರಿ ಬೆಳೆ ಬೇರು ಕೊಳೆತು ಒಣಗುತ್ತದೆ. ರೈತರಿಗೆ ಆರ್ಥಿಕ ನಷ್ಟ ಖಚಿತ ಎಂದು ಹೇಳಿದರು.

ಮಳೆಯಿಂದ ಮತ್ತು ಪ್ರವಾಹದ ನೀರಿನಿಂದ ಬೆಳೆ ಹಾನಿ ಉಂಟಾದರೂ ಸರ್ಕಾರ ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಬೆಳೆ ಹಾನಿಯ ಸಮೀಕ್ಷೆಯನ್ನೂ ಕೈಗೊಂಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಳೆ ಹಾನಿಯ ಕುರಿತು ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಬೆಳೆ ಸಮೀಕ್ಷೆ ಪ್ರಗತಿಯಲ್ಲಿದ್ದು, ಅದು ಮುಗಿದ ನಂತರ ಬೆಳೆ ಹಾನಿಯ ನಿಖರ ಮಾಹಿತಿ ಸಿಗಲಿದೆ. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಹ ಶೀಲ್ದಾರ್ ಉಮಾಕಾಂತ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು