ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ ಮೂವರ ಸಾವು, 72 ಪಾಸಿಟಿವ್‌

ಕಲಬುರ್ಗಿ ನಗರದ 19 ಮಂದಿ ಸೋಂಕಿತರ ಸಂಪರ್ಕ ಮೂಲವೇ ಪತ್ತೆಯಾಗಿಲ್ಲ
Last Updated 4 ಜುಲೈ 2020, 4:42 IST
ಅಕ್ಷರ ಗಾತ್ರ

ಕಲಬುರ್ಗಿ: ಕೋವಿಡ್‌ನಿಂದಾಗಿ ಜಿಲ್ಲೆಯಲ್ಲಿ ಒಂದೇ ದಿನ ಮೂವರು ಮೃತಪಟ್ಟಿದ್ದು, ಶುಕ್ರವಾರ ದೃಢಪಟ್ಟಿದೆ. ಇದರಲ್ಲಿ 25 ವರ್ಷದ ಯುವತಿ, 45 ವರ್ಷದ ಮಹಿಳೆ ಹಾಗೂ 58 ವರ್ಷದ ಒಬ್ಬ ಪುರುಷ ಇದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 22ಕ್ಕೆ ಏರಿದೆ. ಇನ್ನೊಂದಡೆ, ಒಂದೇ ದಿನ 72 ಮಂದಿಗೆ ಪಾಸಿಟಿವ್‌ ಪತ್ತೆಯಾಗಿದೆ.

ಇಸ್ಲಾಮಾಬಾದ್ ಕಾಲೊನಿಯ ನಿವಾಸಿ, ಮಧುಮೇಹ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿ ಜೂನ್‌ 30ರಂದು ಜಿಮ್ಸ್‌ಗೆ ದಾಖಲಾಗಿದ್ದರು. ಅದೇ ದಿನ ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರ ಗಂಟಲು ಮಾದರಿ ತಪಾಸಣೆ ವರದಿ ಶುಕ್ರವಾರ ಹೊರಬಿದ್ದಿದೆ.

ತೀವ್ರ ಜ್ವರ, ಉಸಿರಾಟದ ತೊಂದರೆ ಹಾಗೂ ಆಮಶಂಕೆಯಿಂದ ಬಳಲುತ್ತಿದ್ದ ಯುವತಿ ಜೂನ್‌ 28ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೋವಿಡ್‌ ದೃಢಪಟ್ಟ ಕಾರಣ ಐಸಿಯು ವಾರ್ಡ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಜುಲೈ 3ರಂದು ಕೊನೆಯುಸಿರೆಳೆದರು. ಅವರು ಆಳಂದ ತಾಲ್ಲೂಕಿನ ಹಿತ್ತಲಶಿರೂರು ಗ್ರಾಮದವರು.

ಮಹಿಳೆ ಕೂಡ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕಾರಣ ಐಸೋಲೇಷನ್‌ ವಾರ್ಡ್‌ಗೆ ದಾಖಲಿಸಲಾಗಿತ್ತು. ಅವರು ಮಧುಮೇಹಿ ಆಗಿದ್ದರಿಂದ ಪರಿಸ್ಥಿತಿ ಗಂಭೀರವಾಗಿತ್ತು. ಜೂನ್‌ 30ರಂದು ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಜುಲೈ 1ರಂದು ಮೃತಪಟ್ಟರು. ಇವರು ದರ್ಗಾ ಪ್ರದೇಶದ ನ್ಯಾಷನಲ್‌ ಕಾಲೇಜು ಬಳಿ ವಾಸಿಸುತ್ತಿದ್ದರು.

19 ಮಂದಿಗೆ ಸಂಪರ್ಕವೇ ಪತ್ತೆ ಆಗಿಲ್ಲ: ‌ಶುಕ್ರವಾರ ದೃಢಪಟ್ಟ 72 ಸೋಂಕಿತರಲ್ಲಿ 30 ಮಹಿಳೆಯರು ಸೇರಿದ್ದಾರೆ. 2 ವರ್ಷ ಹಾಗೂ 7 ವರ್ಷದ ಮಕ್ಕಳು, ಕಂಟೇನ್ಮೆಂಟ್‌ ಝೋನ್‌ನಲ್ಲಿ ವಾಸಿಸುತ್ತಿದ್ದ 11, ಅಂತರ ಜಿಲ್ಲಾ ಪ್ರವಾಸ ಮಾಡಿದ ಮೂವರಿಗೆ ಸೋಂಕು ತಗುಲಿದೆ.

ಮಹಾರಾಷ್ಟ್ರದಿಂದ ಮರಳಿದ 12, ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ 13, ಹೈದರಾಬಾದ್‌ನಿಂದ ಮರಳಿದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ ಕಲಬುರ್ಗಿ ನಗರದವರೇ ಆದ 19 ಮಂದಿಗೆ ಯಾರಿಂದ ಸೋಂಕು ತಗುಲಿದೆ ಎಂಬುದು ಪತ್ತೆಯಾಗಿಲ್ಲ.

ಪೌರಕಾರ್ಮಿಕರಿಗೆ ಉಪಾಹಾರ ಪೂರೈಸುತ್ತಿದ್ದ ವ್ಯಕ್ತಿಗೆ ಸೋಂಕು

ವಾಡಿ: ಪುರಸಭೆಯ 45 ಜನ ಪೌರಕಾರ್ಮಿಕರಿಗೆ ಬೆಳಗಿನ ಉಪಾಹಾರ ಪೂರೈಸುತ್ತಿದ್ದ ಹೋಟೆಲ್‌ ಮಾಲೀಕ ಸೇರಿದಂತೆ ಒಟ್ಟು 5 ಜನರಲ್ಲಿ ಶುಕ್ರವಾರ ಕೋವಿಡ್ ಸೋಂಕು ದೃಢಪಟ್ಟಿದೆ. ಇವರಲ್ಲಿ ತರಕಾರಿ ವ್ಯಾಪಾರಿ, ದಿನಸಿ ಅಂಗಡಿ ವ್ಯಾಪಾರಿಯೂ ಇದ್ದಾರೆ. ಸೋಂಕಿನ ಮೂಲ ಪತ್ತೆಹಚ್ಚಲು ಆರೋಗ್ಯ ಇಲಾಖೆ ಮುಂದಾಗಿದೆ.

ಬಸವನಖಣಿ, ಬಿರ್ಲಾ ಏರಿಯಾ, ಸೇವಾಲಾಲ ನಗರ, ಗಾಂಧಿ ಚೌಕ್ ಬಡಾವನೆಗಳಿಗೆ ಸೇರಿದ 50 ವರ್ಷದ ಪುರುಷ, 14 ವರ್ಷದ ಬಾಲಕಿ, 24 ವರ್ಷದ ಯುವತಿ, 20 ಹಾಗೂ 26 ವರ್ಷದ ಯುವಕರಲ್ಲಿ ಸೋಂಕು ಪತ್ತೆಯಾಗಿದೆ. 45 ಜನ ಪೌರಕಾರ್ಮಿಕರ ಗಂಟಲು ದ್ರವ ಪರೀಕ್ಷೆಗೆ ಮಾಡಲಾಗುತ್ತಿದೆ.

ಐವರು ವೈದ್ಯರಿಗೂ ಸೋಂಕು!

ಕಲಬುರ್ಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿ ಸ್ವಂತ ಆಸ್ಪತ್ರೆ ಹೊಂದಿರುವ ವೈದ್ಯ ದಂಪತಿ ಸೇರಿ ಹೊಸದಾಗಿ ಐವರು ವೈದ್ಯರಿಗೆ ಕೋವಿಡ್‌–19 ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಈ ವೈದ್ಯರಿಗೆ ರೋಗಿಗಳನ್ನು ತಪಾಸಣೆ ಮಾಡುವ ಸಂದರ್ಭದಲ್ಲಿಯೇ ವೈರಾಣು ಅಂಟಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಇವರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ ದೃಢಪಟ್ಟ ವೈದ್ಯರ ಸಂಖ್ಯೆಯೇ 9ಕ್ಕೆ ಏರಿದೆ.

‘ಎಲ್ಲ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಜುಲೈ 5ರವರೆಗೂ ಮನೆಯಲ್ಲೇ ಉಳಿಯಬೇಕು’ ಎಂದು ಇಲ್ಲಿನ ಪಿಡಿಎ ಕಾಲೇಜಿನ ನೋಟಿಸ್‌ ಬೋರ್ಡ್‌ನಲ್ಲಿ ಜುಲೈ 2ರಂದು ಒಂದು ಸೂಚನೆ ಅಂಟಿಸಲಾಗಿದೆ.

ವಕೀಲರಿಗೆ ಕೋವಿಡ್‌, ಜಿಲ್ಲಾ ಕೋರ್ಟ್‌ ಆವರಣ ಸ್ತಬ್ಧ

ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಮಾಡುತ್ತಿದ್ದ ವ್ಯಕ್ತಿಗೆ ಕೋವಿಡ್‌ ಅಂಟಿಕೊಂಡಿದ್ದರಿಂದ, ಕೋರ್ಟ್‌ ಆವರಣದಲ್ಲಿ ಸ್ಯಾನಿಟೈಸ್‌ ಮಾಡಲಾಗಿದೆ. ವಕೀಲರು, ಕಕ್ಷಿದಾರರು ಯಾರೂ ಆವರಣದೊಳಗೆ ಪ್ರವೇಶಿಸದಂತೆ ತಡೆಯಲಾಗಿದೆ.

ಈಚೆಗಷ್ಟೇ ವಕೀಲರ ತಂದೆ ನಿಧನ ಹೊಂದಿದರು. ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯಿಂದ ವಕೀಲರಿಗೆ ವೈರಾಣು ಅಂಟಿಕೊಂಡಿದೆ. ಹೀಗಾಗಿ, ಅಂತ್ಯಕ್ರಿಯೆಗೆ ಬಂದ ಎಲ್ಲರನ್ನೂ ಪತ್ತೆ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT