ಮಂಗಳವಾರ, ಅಕ್ಟೋಬರ್ 27, 2020
28 °C
ಶಾಲಾ ಪೂರ್ವ ಶಿಕ್ಷಣದ ಕುರಿತು ಹೊಸ ಶಿಕ್ಷಣ ನೀತಿ ಹೇಳುವುದೇನು: ದುಂಡುಮೇಜಿನ ಸಭೆಯಲ್ಲಿ ಚರ್ಚೆ

‘ಜನ ವಿರೋಧಿ ಶಿಕ್ಷಣ ನೀತಿ ಅಪಾಯಕಾರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಯಾವುದೇ ಶಿಕ್ಷಣ ನೀತಿ ಒಂದು ಮಗು ಅಥವಾ ಸಮುದಾಯವನ್ನು ದೂರ ಇಟ್ಟರೆ ಅದನ್ನು ಜನವಿರೋಧ ನೀತಿ ಎಂದೇ ಪರಿಗಣಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯ ಆಯಾಮಗಳನ್ನು ಪರಾಮರ್ಶಿಸಬೇಕಿದೆ. ನಮ್ಮ ಸಾಂವಿಧಾನಿಕ ಆಶಯಗಳಾದ ಸಮಾನತೆ, ಜಾತ್ಯತೀತ ನಿಲುವುಗಳನ್ನು ಇದು ಒಳಗೊಂಡಿದೆಯೇ ಎಂಬ ಬಗ್ಗೆಯೂ ಚರ್ಚೆ ಅಗತ್ಯ’ ಎಂದು ಸಿಯುಕೆ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ ಅಭಿಪ್ರಾಯ ಪಟ್ಟರು.

‘ಶಾಲಾ ಪೂರ್ವ ಶಿಕ್ಷಣದ ಕುರಿತು ಹೊಸ ಶಿಕ್ಷಣ ನೀತಿ ಹೇಳುವುದೇನು?’ ಎಂಬ ವಿಷಯವಾಗಿ ರಾಜ್ಯ ಅಂಗನವಾಡಿ ನೌಕರರ ಸಂಘ, ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಹಾಗೂ ಭಾರತ ವಿದ್ಯಾರ್ಥಿ ಫೆಡರೇಷನ್‌ ಆಶ್ರಯದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಬಡ ಮಕ್ಕಳನ್ನು ಪೌಷ್ಟಿಕವಾಗಿ ಬೆಳೆಸುವ ಜತೆಗೆ, ಶಿಕ್ಷಣಕ್ಕೆ ಅಣಿ ಮಾಡಬೇಕು ಎಂಬ ಉದ್ದೇಶದಿಂದ ಅಂಗನವಾಡಿಗಳನ್ನು ಆರಂಭವಾಗಿವೆ. ಆದರೆ, ಇವುಗಳ ಉಳಿವಿನ ಬಗ್ಗೆ ಹೊಸ ಶಿಕ್ಷಣ ನೀತಿಯಲ್ಲಿ ಸ್ಪಷ್ಟತೆ ಇಲ್ಲ. ಪ್ರತಿ 5ರಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಕೇಂದ್ರೀಕೃತ ಶಾಲಾ ವ್ಯವಸ್ಥೆ ತರುವುದಾಗಿ ನಿಯಮ ಹೇಳಿದೆ. ಇದರಿಂದ ಶಾಲಾ ವ್ಯವಸ್ಥೆ ಕೇಂದ್ರಕರಣಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಅಂಗನವಾಡಿಗಳು ಉಳಿಯುತ್ತವೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಇದರಿಂದ ಹಳ್ಳಿಗಾಡಿನ ಬಡ, ಕೂಲಿ ಕಾರ್ಮಿಕರ, ಪರಿಶಿಷ್ಟರ ಹಾಗೂ ಹಿಂದುಳಿದ ವರ್ಗಗಳ ಮಕ್ಕಳು ಕಲಿಕೆಯಿಂದಲೇ ಹೊರಗುಳಿಯುವ ಅಪಾಯವಿದೆ’ ಎಂದು ಅವರು ಪ್ರತಿಪಾದಿಸಿದರು.

‘ಯಾವುದೇ ಸರ್ಕಾರ ಒಂದು ನೀತಿಯನ್ನು ಜಾರಿಗೆ ತರುವಾಗ ಸಾಂವಿಧಾನಿಕ ಹಾಗೂ ಪ್ರಜಾಸತ್ತಾತ್ಮಕ ಅಂಶಗಳನ್ನು ಪರಿಗಣಿಸಬೇಕು. ದೇಶದ ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ನೀತಿಯನ್ನು ಪ್ರಕಟಿಸಿ ಜನ ಸಮುದಾಯದಲ್ಲಿ ಚರ್ಚೆಗೆ ಇಡಬೇಕು. ಸಾಧಕ– ಬಾಧಕ ಚರ್ಚೆಗಳ ಬಳಿಕ ಸಾಂವಿಧಾನಿಕ ಪದ್ಧತಿಯಲ್ಲೇ ಜಾರಿಗೆ ತರಬೇಕು. ಆದರೆ, ಸದ್ಯ ಕೇಂದ್ರವು ಅನುಷ್ಠಾನಗೊಳಿಸುತ್ತಿರುವ ಹೊಸ ಎನ್‌ಇಪಿ ಈ ಆರೋಗ್ಯಕರ ಚರ್ಚೆಯನ್ನೇ ಒಳಗೊಂಡಿಲ್ಲ’ ಎಂದು ಹೇಳಿದರು.

‘14ನೇ ವಯಸ್ಸಿನವರೆಗೆ ಉಚಿತ ಕಡ್ಡಾಯ ಶಿಕ್ಷಣ ನೀಡಬೇಕು ಎಂಬ ಬಗ್ಗೆ ಅಥವಾ ಆರ್‌ಟಿಇ ಬಗ್ಗೆ ಬಗ್ಗೆಯೂ ಏನೂ ಮಾತಾಡಿಲ್ಲ. ಸಂವಿಧಾನದ ಮೂಲ ತತ್ವಗಳಾದ ಸಮಾಜವಾದ, ಸಮಾನತೆ, ಜಾತ್ಯತೀತ ನಿಲುವುಗಳು ಇದರಲ್ಲಿ ಪರಿಗಣೆನೆಗೆ ಬಂದಿಲ್ಲ. ಮೆರಿಟ್‌ ಆಧಾರಿತವಾಗಿ ಮೀಸಲಾತಿ ದೊರೆಯುತ್ತದೆ ಎಂದು ಹೇಳಲಾಗಿದೆ. ಹಾಗಿದ್ದರೆ ಈ ಹಿಂದೆ ಇದ್ದ ಪರಿಶಿಷ್ಟ ಮಕ್ಕಳ ಶೈಕ್ಷಣಿಕ ಮೀಸಲಾತಿ ಏನಾಗುತ್ತದೆ ಎಂಬ ಬಗ್ಗೆಯೂ ಹೇಳಿಲ್ಲ. ಉಚಿತ, ಕಡ್ಡಾಯ ಹಾಗೂ ಏಕರೂಪದ ಶಿಕ್ಷಣದ ಕುರಿತು ಹೇಳಿದರೂ ಅದರಲ್ಲಿ ಸ್ಪಷ್ಟತೆ ಇಲ್ಲ’ ಎಂದೂ ಅವರು ವಾದಿಸಿದರು.

‘5ರಿಂದ 8ನೇ ತರಗತಿ ಮಕ್ಕಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಯಾವುದೇ ಪದವಿ ಪ್ರವೇಶಕ್ಕೂ ಮೌಲ್ಯಮಾಪನಾ ಪರೀಕ್ಷೆ ಉತ್ತೀರ್ಣವಾಗಬೇಕು. ಈ ನಿಯಮಕ್ಕೆ ಸಿಕ್ಕಿ ಕಲಿಕೆಯಿಂದ ದೂರ ಉಳಿಯುವವರು ಹೆಚ್ಚಾಗುವುದಿಲ್ಲವೇ ಎಂಬ ಪ್ರಶ್ನೆಯೂ ಮೂಡುತ್ತದೆ. ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳ ಪ್ರತಿನಿಧಿಗಳೂ ಶಾಲೆಗೆ ಹೋಗಿ ಪಾಠ ಮಾಡಲು ಅವಕಾಶ ನೀಡಲಾಗಿದೆ. ಪಠ್ಯಕ್ರಮವನ್ನು ಕೇಂದ್ರ ಸಂಸ್ಥೆಯೊಂದು ಸಿದ್ಧಪಡಿಸುತ್ತದೆ. ಮೌಲ್ಯಮಾಪನಕ್ಕಾಗಿ ರಾಷ್ಟ್ರೀಯ ಮೌಲ್ಯಮಾಪನ ಕೇಂದ್ರವೂ ಇರುತ್ತದೆ. ಶಿಕ್ಷಕರು ಪಾಠ ಮಾಡಲು ಮಾತ್ರ ಸೀಮಿತವಾಗುತ್ತಾರೆ. ಇದರಿಂದಾಗಿ ಅಡ್ಡಪರಿಣಾಮಗಳ ನಗ್ಗೆ ನೋಟ ಬೀರಬೇಕಿದೆ’ ಎಂದೂ ಅಭಿಮತ ವ್ಯಕ್ತಪಡಿಸಿದರು.

ಸಿಯುಕೆ ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಿರಣ ಗಾಜನೂರ ಸಭೆ ಉದ್ಘಾಟಿಸಿದರು. ಎಸ್‌ಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಅಮರೇಶ ಕಡಗದೆ, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷೆ ಗೌರಮ್ಮ ಪಾಟೀಲ, ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಸುನಂದಾ, ಸಿದ್ದಮ್ಮ, ಶಾಂತಾ ಘಂಟೆ, ಸಿದ್ಧಲಿಂಗ ಪಾಳಾ ಚರ್ಚೆಯಲ್ಲಿ ಪಾಲ್ಗೊಂಡರು.

‘ಲಕ್ಷಾಂತರ ಕಾರ್ಯಕರ್ತೆಯರ ಬದುಕು ಬೀದಿಗೆ’

‘ಹೊಸ ಶಿಕ್ಷಣ ನೀತಿಯ ಕರಡು ನೀಡಿ ಚರ್ಚಿಸದೇ ಏಕರೂಪದಲ್ಲಿ ಜಾರಿಗೆ ತರಲಾಗುತ್ತಿದೆ. ಬಿಸಿಯೂಟವನ್ನು ಖಾಸಗಿ ಧಾರ್ಮಿಕ ಸಂಸ್ಥೆಗಳಿಗೆ ನೀಡಿ, ಅಂಗನವಾಡಿಗಳನ್ನೂ ಮುಚ್ಚುವ ಸ್ಪಷ್ಟ ಉದ್ದೇಶ ಇದರಲ್ಲಿದೆ. ಇದರಿಂದ ದೇಶದ 28 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ 26 ಲಕ್ಷ ಬಿಸಿಯೂಟ ನೌಕರರ ಬದುಕು ಬೀದಿಗೆ ಬೀಳುತ್ತದೆ’ ಎಂದು ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ ಎಚ್ಚರಿಸಿದರು.

‘ಆರೋಗ್ಯಕರ ಚರ್ಚೆಯೇ ಇಲ್ಲದೇ ಅಸಾಂವಿಧಾನಿಕ ಮಾರ್ಗದ ಮೂಲಕ ಈ ನೀತಿ ಜಾರಿ ಮಾಡಲಾಗುತ್ತಿದೆ. ಕಾರ್ಯಕರ್ತಯರಿಗೆ ತರಬೇತಿ ನೀಡಿ ಅವರ ಕೌಶಲ ಪರಿಕ್ಷೆ ನಡೆಸಲು ಉದ್ದೇಶಿಸಿದ್ದಾರೆ. ಆದರೆ, ಇದು ಸರಿಯಾದ ಆಯ್ಕೆಯಲ್ಲ. ಈಗ ಇರುವ ಕಾರ್ಯಕರ್ತೆಯರನ್ನು ಕಾಯಂ ಆಗಿ ಉಳಿಸಿಕೊಂಡು, ಮುಂದಿನ ನೇಮಕಾತಿಗಳಲ್ಲಿ ಮಾತ್ರ ಶಿಕ್ಷಣ– ಕೌಶಲದ ನಿಯಮ ಅನುಸರಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಕೆಂಬಾವುಟ ಹಿಡಿದು ಹೋರಾಟ ಮಾಡುವ ನಾವು ಕೂಡ ಈಗ ಅಂಗನವಾಡಿಯಲ್ಲಿ ಸೀಮಂತ ಮಾಡುವ ಸ್ಥಿತಿ ಬಂದಿದೆ. ಹೊಸ ಶಿಕ್ಷಣ ನೀತಿಯಲ್ಲಿ ಇಂಥದ್ದೇ ಆರ್‌ಎಸ್‌ಎಸ್‌, ಹಿಂದೂವಾದದ ಆಶಯಗಳಿವೆ. ನಾವೇನು ಉದ್ದೇಶ ಪೂರ್ವಕವಾಗಿ ಇದನ್ನು ವಿರೋಧಿಸುತ್ತಿಲ್ಲ. ಆದರೆ, ಚರ್ಚೆ ಇಲ್ಲದೇ ಜಾರಿಗೆ ತಂದ ನೀತಿ ದೇಶವನ್ನು ಹಾಳು ಮಾಡುತ್ತದೆ’ ಎಂದೂ ಪ್ರತಿಪಾದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.