ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ, ಕ್ರಿಶ್ಚಿಯನ್ ಕುಟುಂಬಗಳಿಗೂ ಯುಸಿಸಿ ಅನ್ವಯಿಸುತ್ತೀರಾ? ಅಬ್ದುಲ್ ನಜೀರ್

ಆಂಧ್ರಪ್ರದೇಶ ರಾಜ್ಯಪಾಲ ನ್ಯಾ. ಎಸ್. ಅಬ್ದುಲ್ ನಜೀರ್ ಪ್ರಶ್ನೆ
Published 12 ಆಗಸ್ಟ್ 2023, 18:34 IST
Last Updated 12 ಆಗಸ್ಟ್ 2023, 18:34 IST
ಅಕ್ಷರ ಗಾತ್ರ

ಕಲಬುರಗಿ: ‘ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಅವಿಭಕ್ತ ಕುಟುಂಬಗಳಿಗೂ ಅನ್ವಯಿಸುತ್ತೀರಾ’ ಎಂದು ಆಂಧ್ರಪ್ರದೇಶದ ರಾಜ್ಯಪಾಲರೂ ಆಗಿರುವ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಪ್ರಶ್ನಿಸಿದರು.

ಇಲ್ಲಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (ಸಿಯುಕೆ) ಶನಿವಾರ ನಡೆದ ‘ಮಿತಾಕ್ಷರ: ಭಾರತೀಯ ನ್ಯಾಯಶಾಸ್ತ್ರದ ಅನ್ವಯಿಕ ವಿಜ್ಞಾನ’ ಕುರಿತು ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ವೇದಿಕೆಯ ಮೇಲಿದ್ದ ಹೈಕೋರ್ಟ್‌ ನ್ಯಾಯಮೂರ್ತಿ ವಿ.ಶ್ರೀಶಾನಂದ ಹಾಗೂ ಸಭಿಕರ ಆಸನದಲ್ಲಿ ಕುಳಿತಿದ್ದ ಮಾಜಿ ಸಾಲಿಸಿಟರ್  ಜನರಲ್ ಎಂ.ಬಿ.ನರಗುಂದ ಅವರನ್ನು ತಮ್ಮ ಲಿಖಿತ ಭಾಷಣದ ಮಧ್ಯದಲ್ಲಿ ಅವರು ಮೇಲಿನಂತೆ ಪ್ರಶ್ನಿಸಿದರು. 

‘1956ರಲ್ಲಿ ಹಿಂದೂ ಕಾನೂನುಗಳನ್ನು ಮಾರ್ಪಾಡು ಮಾಡಲಾಯಿತು. 2005ರಲ್ಲಿ ಅದನ್ನು ಮಾರ್ಪಡಿಸಿ, ಆ ಮೂಲಕ ನಮ್ಮ ಸಹೋದರಿಯರಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲುದಾರರನ್ನಾಗಿ ಮಾಡಲಾಯಿತು. ಈಗಿರುವ ಹಿಂದೂ ಅವಿಭಕ್ತ ಕುಟುಂಬ (ಎಚ್‌ಯುಎಫ್‌) ತೆರಿಗೆ ಉದ್ದೇಶಕ್ಕಾಗಿ ಮಾತ್ರ ಇದೆಯಾ ಎಂದು ನಾನು ಶ್ರೀಶಾನಂದ ಅವರಿಗೆ ಕೇಳಲು ಇಚ್ಛಿಸುತ್ತೇನೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಶ್ರೀಶಾನಂದ ಅವರು, ‘ಆದಾಯ ಗಳಿಸಿದವರೆಲ್ಲರೂ ತೆರಿಗೆ ಕೊಡಲೇಬೇಕು. ಚಾಣಕ್ಯನು ತನ್ನ ಅರ್ಥಶಾಸ್ತ್ರದಲ್ಲಿ ತೆರಿಗೆ ಮತ್ತು ಸಾರ್ವಜನಿಕ ವಿನಿಯೋಗದ ಬಗ್ಗೆ ಚಂದ್ರಗುಪ್ತನಿಗೆ ಒಂದು ಮಾತನ್ನು ಹೇಳಿದ್ದ. ಸಮುದ್ರದ ನೀರು ಆವಿಯಾಗಿ, ಮೋಡವಾಗಿ ಮತ್ತೆ ಮಳೆಯ ರೂಪದಲ್ಲಿ ಭೂಮಿಗೆ ಬಿದ್ದು ನದಿಗಳ ಮೂಲಕ ಅದೇ ಸಮುದ್ರ ಸೇರುತ್ತದೆ. ಹಾಗೆಯೇ ತೆರಿಗೆ ಕೂಡ. ನಾವು ದೇಶದ ಸಂಪನ್ಮೂಲವನ್ನು ಬಳಸಿ ಆದಾಯ ಗಳಿಸಿದರೆ ಅದರಲ್ಲಿ ದೇಶಕ್ಕೆ ತೆರಿಗೆ ರೂಪದಲ್ಲಿ ವಾಪಸ್ ಸಂದಾಯ ಮಾಡಲೇಬೇಕು’ ಎಂದು ವಿವರಣೆ ನೀಡಿದರು.

‘ಒಮ್ಮೆ ಏಕರೂಪ ನಾಗರಿಕ ಸಂಹಿತೆಯ ಕರಡು ಹೊರಬಂದರೆ ಇನ್ನಷ್ಟು ಚರ್ಚೆ ಆಗುತ್ತದೆ’ ಎಂದು ಹೇಳಿ ನ್ಯಾ.ನಜೀರ್ ಅವರು ತಮ್ಮ ಭಾಷಣ ಮುಂದುವರೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT