ಮಂಗಳವಾರ, ಮಾರ್ಚ್ 21, 2023
20 °C
ಎಬಿವಿಪಿ ವಿದ್ಯಾರ್ಥಿ ಸಮ್ಮೇಳನ

ರಾಷ್ಟ್ರನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು: ಭೀಮಾಶಂಕರ ಬಿಲಗುಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ರಾಷ್ಟ್ರ ಕಟ್ಟುವ ಕೆಲಸಕ್ಕಾಗಿ ಸ್ವಾಮಿ ವಿವೇಕಾನಂದರು ದೇಶದಾದ್ಯಂತ ಸಂಚರಿಸಿದರು. ಅದರಂತೆ ಇಂದು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ವಿದ್ಯಾರ್ಥಿಗಳು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಹೈದರಾಬಾದ್ ಕರ್ನಾಟಕ ಎಜುಕೇಶನ್ ಸೊಸೈಟಿ (ಎಚ್‌ಕೆಇ) ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಹೇಳಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) ಜಿಲ್ಲಾ ಸಮ್ಮೇಳನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಯುವಜನತೆ, ವಿದ್ಯಾರ್ಥಿ– ವಿದ್ಯಾರ್ಥಿನಿಯರು ನಾವೆಲ್ಲ ಒಂದೇ ಎಂಬ ಭಾವದೊಂದಿಗೆ ಮುನ್ನಡೆಯಬೇಕಾಗಿದೆ’ ಎಂದರು.

‘ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಕೌಶಲದ ಬಗ್ಗೆ ಎಬಿವಿಪಿ ಜಾಗೃತಿ ಮೂಡಿಸಬೇಕು. ದೇಶದಲ್ಲಿ ಅತಿ ಹೆಚ್ಚು ಯುವಕರಿದ್ದಾರೆ. ವಿದ್ಯಾರ್ಥಿಗಳು ಕೇವಲ ಪಠ್ಯ ಅಷ್ಟೇ ಓದಬಾರದು, ಅದರ ಜತೆಗೆ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಕೌಶಲ ಕಲಿಯುದಿದ್ದರೆ ಭವಿಷ್ಯವಿಲ್ಲ. ಆದ್ದರಿಂದ ಎಚ್‌ಕೆಇ ಸೊಸೈಟಿಯಲ್ಲಿ ಸೆಂಟರ್ ಆಫ್ ಎಕ್ಸ್‌ಲೆನ್ಸ್ ಆರಂಭಿಸಲಾಗಿದೆ. ಅತಿ ಕಡಿಮೆ ದರದಲ್ಲಿ ಕೌಶಲಗಳನ್ನು ಕಲಿಸುತ್ತಿದ್ದೇವೆ. ಇದರ ಸದುಪಯೋಗ ಪಡೆಯಬೇಕು. ಕೌಶಲ ಬೆಳೆಸಿಕೊಳ್ಳಬೇಕು ಎಂಬ ಕಾರಣಕ್ಕಾಗಿಯೇ ನೂತನ ಶಿಕ್ಷಣ ನೀತಿ ಜಾರಿ ತರಲಾಗಿದೆ. ಈ ಶಿಕ್ಷಣ ನೀತಿಯಲ್ಲಿ ಅತಿ ಹೆಚ್ಚು ಕೌಶಲಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ’ ಎಂದರು.

ಎಬಿವಿಪಿಯ ವಿಭಾಗ ಕೋಶ ಪ್ರಮುಖ ಸೂರ್ಯಕಾಂತ್ ರಾಕಲೆ ಮಾತನಾಡಿ, ‘ಹಿಂದೆಲ್ಲ ಪ್ರವೇಶ ಶುಲ್ಕ ₹ 10 ಹೆಚ್ಚಳವಾದರೂ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದರು. ಆದರೆ, ಇಂದು ಸಾವಿರಾರು ರೂಪಾಯಿ ಶುಲ್ಕ ಹೆಚ್ಚಳ ಮಾಡಿದರೂ ಪ್ರಶ್ನಿಸುತ್ತಿಲ್ಲ. ವಿದ್ಯಾರ್ಥಿಗಳು ಸದಾ ಅನ್ಯಾಯವನ್ನು ಪ್ರಶ್ನಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಜಾರಿಗೆ ತರುವಂತೆ ಬಹಳ ಕಾಲದಿಂದ ಒತ್ತಾಯ ಮಾಡುತ್ತಿತ್ತು. ತಡವಾಗಿಯಾದರೂ ಜಾರಿಗೆ ಬಂದಿರುವುದು ಸ್ವಾಗತಾರ್ಹ’ ಎಂದರು.

‘ಪರಿಷತ್ ಸುಮಾರು 75 ವರ್ಷಗಳಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೇವೆ ಮಾಡುತ್ತಿದ್ದು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾದಾಗ ಮುಂಚೂಣಿಯಲ್ಲಿ ನಿಂತು ಹೋರಾಡಿದೆ’ ಎಂದು ತಿಳಿಸಿದರು.

ಜಿಲ್ಲಾ ಪ್ರಮುಖ ಪ್ರಮೋದ ನಾಗೂರಕರ್ ಮಾತನಾಡಿ, ‘ವಿದ್ಯಾರ್ಥಿಗಳು ನಾಯಕರಾಗಬೇಕು ಎಂಬ ಕಾರಣದಿಂದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಎಬಿವಿಪಿ ಹರಿಯುವ ನದಿಯಂತೆ. ಪರಿಷತ್‌ನಲ್ಲಿ ಪ್ರತಿ ವರ್ಷ ಹೊಸ ಮುಖಗಳು ಬರುತ್ತವೆ. ಕೇವಲ ಪಾಸ್‌ ಶುಲ್ಕ ಹೆಚ್ಚಾದಾಗ, ಪರೀಕ್ಷೆ ಶುಲ್ಕ ಹೆಚ್ಚಾದಾಗ ಹೋರಾಟ ಮಾಡುವುದಷ್ಟೇ ಎಬಿವಿಪಿ ಉದ್ದೇಶವಲ್ಲ‘ ಎಂದರು.

ಎಬಿವಿಪಿ ವಿಭಾಗ ಸಂಚಾಲಕ ಅಭಿಷೇಕ ಬಾಳೆ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಹಣಮಂತ ಬಗಲಿ, ಮುಖಂಡರಾದ ಕ್ಯಾತಪ್ಪ ಮೇಧಾ, ಪಾಯಪ್ಪ ಯಾದವ್ ಸೇರಿದಂತೆ ಸಂಘಟನೆಯ ಹಲವು ಮುಖಂಡರು ಹಾಗೂ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ನಗರದ ಸರ್ದಾರ್ ಪಟೇಲ್ ವೃತ್ತದಿಂದ ಅನ್ನಪೂರ್ಣ ಕ್ರಾಸ್, ಜಗತ್ ವೃತ್ತದ ಮೂಲಕ ವಿದ್ಯಾರ್ಥಿಗಳಿಂದ ಮೆರವಣಿಗೆ ನಡೆಯಿತು. ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಮಹಾನಗರ ಪಾಲಿಕೆ ಸಮೀಪದ ಭಾವಸಾರ ಸಭಾಂಗಣದಲ್ಲಿ ಸಮ್ಮೇಳನ ನಡೆಯಿತು.

ಏಕಕಾಲಕ್ಕೆ ಫಲಿತಾಂಶ ಪ್ರಕಟಿಸಲು ನಿರ್ಣಯ

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ವಿಳಂಬವಾಗಿ ಫಲಿತಾಂಶ ಪ್ರಕಟಿಸುತ್ತಿರುವುದರಿಂದ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ಆಗುತ್ತಿಲ್ಲ. ಆದ್ದರಿಂದ ಎಲ್ಲ ವಿ.ವಿ.ಗಳು ಏಕಕಾಲಕ್ಕೆ ಫಲಿತಾಂಶ ಪ್ರಕಟಿಸುವಂತೆ ಒತ್ತಾಯಿಸುವ ನಿರ್ಣಯವನ್ನು ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.

ವಿದ್ಯಾರ್ಥಿಗಳ ದಾಖಲಾತಿಗಳನ್ನು ನಿರ್ವಹಿಸುವ ಯುಯುಸಿಎಂಎಸ್ ತಂತ್ರಾಂಶದ ಬಳಕೆಯ ಬಗ್ಗೆ ತರಬೇತಿ ಇಲ್ಲದ್ದರಿಂದ ಇದರ ನಿರ್ವಹಣೆ ವಿಳಂಬವಾಗುತ್ತಿದೆ. ಈ ತಂತ್ರಾಂಶದಲ್ಲಿ ಅಗತ್ಯ ಬದಲಾವಣೆ ಮಾಡಬೇಕು.

ರಾಜ್ಯದಲ್ಲಿ ಪ್ರತಿ ವರ್ಷ ಏಳು ಲಕ್ಷ ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಸಲ್ಲಿಸುತ್ತಿದ್ದು, ಅದರಲ್ಲಿ 2.5 ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಸಿಗುತ್ತಿದೆ. ಆದ್ದರಿಂದ ಹೆಚ್ಚು ಹಾಸ್ಟೆಲ್‌ಗಳನ್ನು ನಿರ್ಮಿಸಬೇಕು.

ವಿಟಿಯು ನಿಯಮ ಮೀರಿ ಶುಲ್ಕ ಹೆಚ್ಚಳ ಮಾಡಿದ್ದನ್ನು ಹಿಂದಕ್ಕೆ ಪಡೆಯಬೇಕು. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಬಸ್ ಸೌಕರ್ಯ ಒದಗಿಸಬೇಕು. ಜಿಲ್ಲೆಯಲ್ಲಿ ತೊಗರಿ ಸಂಶೋಧನಾ ಕೇಂದ್ರವನ್ನು ಆರಂಭಿಸಬೇಕು. ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳನ್ನು ಆರಂಭಿಸಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು