ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಡೆಮಿಗಳ ಅಧ್ಯಕ್ಷ ಹುದ್ದೆ: ಕಲ್ಯಾಣ ಕರ್ನಾಟಕಕ್ಕೆ ಮುಂದುವರಿದ ಅನ್ಯಾಯ

Published 18 ಮಾರ್ಚ್ 2024, 5:02 IST
Last Updated 18 ಮಾರ್ಚ್ 2024, 5:02 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯ ಸರ್ಕಾರ ಶನಿವಾರ ನೇಮಕ ಮಾಡಿದ ವಿವಿಧ ಅಕಾಡೆಮಿ, ಪ್ರಾಧಿಕಾರಗಳಲ್ಲಿ ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ಸಿಕ್ಕಿಲ್ಲ. ಅಲ್ಲದೇ, ಈ ಭಾಗದವರನ್ನು ಅಧ್ಯಕ್ಷ ಸ್ಥಾನಕ್ಕೂ ಪರಿಗಣಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಕಲಬುರಗಿ ಜಿಲ್ಲೆಯು ತೆಲಂಗಾಣ ಹಾಗೂ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿದ್ದು, ಗಡಿನಾಡ ಕನ್ನಡಿಗರ ಹಲವು ಸಮಸ್ಯೆಗಳಿವೆ. ಈ ಬಗ್ಗೆ ಜಿಲ್ಲೆಯಲ್ಲಿ ಧ್ವನಿ ಎತ್ತುವವರಿದ್ದರೂ ಗಡಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಜಿಲ್ಲೆಯವರಿಗೆ ಸ್ಥಾನ ಸಿಕ್ಕಿಲ್ಲ.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಜಿಲ್ಲೆಯವರನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಆದರೆ, ಅಕಾಡೆಮಿಯಲ್ಲಿ ಈ ಭಾಗದವರಿಗೆ ಅಧ್ಯಕ್ಷ ಸ್ಥಾನದಂತಹ ಮಹತ್ವದ ಹುದ್ದೆ ಸಿಕ್ಕಿಲ್ಲ ಎಂದು ಸಾಹಿತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಂಜಾರ ಸಮುದಾಯದವರು ಅಧಿಕ ಸಂಖ್ಯೆಯಲ್ಲಿರುವ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗೆ ಕರ್ನಾಟಕ ಬಂಜಾರ ಅಕಾಡೆಮಿಯಲ್ಲಿ ಸ್ಥಾನ ಸಿಕ್ಕಿಲ್ಲ. ರಾಜ್ಯದ ರಂಗ ಚಟುವಟಿಕೆಗಳನ್ನು ಮಾಡುವಲ್ಲಿ ಮಹತ್ವದ ಪಾತ್ರ ವಹಿಸುವ ಹಾಗೂ ರಂಗಾಯಣ ನಿರ್ದೇಶಕರನ್ನು ಶಿಫಾರಸು ಮಾಡಲಿರುವ ರಂಗ ಸಮಾಜದಲ್ಲಿ ರಾಯಚೂರು ಜಿಲ್ಲೆಯ ಡಿಂಗ್ರಿ ನರೇಶ್ ಅವರನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳ ರಂಗಕರ್ಮಿಗಳನ್ನು ಪರಿಗಣಿಸಿಲ್ಲ. ಕಲಬುರಗಿಯಲ್ಲೇ ರಂಗಾಯಣವಿದ್ದು, ರಂಗಚಟುವಟಿಕೆಗಳು ನಡೆಯುತ್ತಿವೆ. ಕೊಪ್ಪಳದಲ್ಲಿಯೂ ರಂಗಕರ್ಮಿಗಳು ಸಕ್ರಿಯರಾಗಿದ್ದಾರೆ. ಅವರನ್ನೂ ರಂಗ ಸಮಾಜದಲ್ಲಿ ಪರಿಗಣಿಸಿಲ್ಲ ಎಂದು ಕಲಬುರಗಿಯ ರಂಗಕರ್ಮಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಕನ್ನಡ ಭಾಷೆಯ ಬೆಳವಣಿಗೆಯ ನಿಟ್ಟಿನಲ್ಲಿ ಕೆಲಸ ಮಾಡಲಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯವನ್ನೇ ನೀಡಿಲ್ಲ. ಕನ್ನಡಕ್ಕೆ ಮೊದಲ ಲಾಕ್ಷಣಿಕ ಗ್ರಂಥ ಕವಿರಾಜ ಮಾರ್ಗವನ್ನು ರಾಷ್ಟ್ರಕೂಟರ ಕಾಲದಲ್ಲಿ ಶ್ರೀವಿಜಯ ಬರೆದಿದ್ದ. ಇಂತಹ ಮಹತ್ವವಿರುವ ಜಿಲ್ಲೆಗೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸ್ಥಾನ ನೀಡದೇ ಇರುವುದು ಸರಿಯಲ್ಲ ಎನ್ನುತ್ತಾರೆ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು.

‘ಬಹುತೇಕ ಅಕಾಡೆಮಿ, ಪ್ರಾಧಿಕಾರಗಳಲ್ಲಿ ಸಿದ್ದರಾಮಯ್ಯ ಅವರು ಕುರುಬ ಸಮಯದಾಯದವರಿಗೇ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇದನ್ನು ತಪ್ಪಿಸಬೇಕಿತ್ತು. ಇದರಿಂದ ತಪ್ಪು ಸಂದೇಶ ಹೋಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT